ಬೊಲಿವಿಯ: ಕಾರ್ಮಿಕರಿಂದ ಸಚಿವರ ಕೊಲೆ

ಲಾ ಪಾಝ್ (ಬೊಲಿವಿಯ), ಆ. 26: ಬೊಲಿವಿಯದ ಗಣಿಗಾರಿಕೆ ಕಾನೂನುಗಳ ಬಗ್ಗೆ ತೀವ್ರ ಆಕ್ರೋಶ ಹೊಂದಿದ್ದ ಮುಷ್ಕರ ನಿರತ ಗಣಿ ಕಾರ್ಮಿಕರು, ಸಂಧಾನಕ್ಕೆ ತೆರಳಿದ್ದ ದೇಶದ ಸಚಿವರೊಬ್ಬರನ್ನು ಅಪಹರಿಸಿ ಥಳಿಸಿ ಕೊಂದಿದ್ದಾರೆ ಎಂದು ಅಕಾರಿಗಳು ಗುರುವಾರ ತಿಳಿಸಿದರು. ಇದನ್ನು ‘‘ಹೇಡಿತನದ ಅಮಾನುಷ ಕೃತ್ಯ ಎಂದು ಬಣ್ಣಿಸಿರುವ ಗಣಿಗಾರಿಕೆ ಸಚಿವ ಕಾರ್ಲೋಸ್ ರೊಮಾರೊ, ತನ್ನ ಖಾತೆಯ ಸಹಾಯಕ ಸಚಿವ ರುಡಾಲೊ ಇಲ್ಯಾನ್ಸ್‌ರ ಮೃತದೇಹವನ್ನು ಒಪ್ಪಿಸುವಂತೆ ಗಣಿ ಕಾರ್ಮಿಕರಿಗೆ ಸೂಚಿಸಿದ್ದಾರೆ. ಮುಷ್ಕರನಿರತ ಗಣಿ ಕಾರ್ಮಿಕರು ಹೆಚ್ಚಿನ ಹಕ್ಕುಗಳಿಗಾಗಿ ಬೇಡಿಕೆಯಿಟ್ಟಿದ್ದಾರೆ. ಖಾಸಗಿ ಕಂಪೆನಿಗಳೊಂದಿಗೆ ವ್ಯವಹರಿಸುವ ಹಕ್ಕು ಅವರ ಬೇಡಿಕೆಗಳಲ್ಲಿ ಒಂದಾಗಿತ್ತು. ಪ್ರತಿಭಟನಾಕಾರರು ಲಾ ಪಾಝ್‌ನ ದಕ್ಷಿಣದ ಪಂಡುರೊದಲ್ಲಿ ಸೋಮವಾರದಿಂದ ರಸ್ತೆ ತಡೆ ಏರ್ಪಡಿಸಿದ್ದಾರೆ. ಮುಷ್ಕರದ ವೇಳೆ ಇಬ್ಬರು ಕಾರ್ಮಿಕರು ಮೃತಪಟ್ಟ ಬಳಿಕ ಪ್ರತಿಭಟನೆ ಹಿಂಸೆಗೆ ತಿರುಗಿತ್ತು.
ಈ ಹಿನ್ನೆಲೆಯಲ್ಲಿ ಸಂಧಾನಕ್ಕೆ ತೆರಳಿದ್ದ ಸಚಿವರನ್ನು ಮುಷ್ಕರ ನಿರತರು ಅಪಹರಿಸಿ ಥಳಿಸಿ ಕೊಂದಿದ್ದಾರೆ.





