ಸೆ.23: ‘ಧ್ವನಿ ಪ್ರತಿಷ್ಠಾನ’ದಿಂದ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ
ಉಮಾಶ್ರೀಗೆ ಶ್ರೀರಂಗರಂಗ ಪ್ರಶಸ್ತಿ
ಮಂಗಳೂರು, ಆ.26: ಮೂವತ್ತು ವರ್ಷಗಳಿಂದ ದುಬೈಯನ್ನು ಕೇಂದ್ರವಾಗಿಟ್ಟುಕೊಂಡು ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿರುವ ‘ಧ್ವನಿ ಪ್ರತಿಷ್ಠಾನ’ ಈ ಬಾರಿ ಸೆ.23ರಂದು 2ನೆ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿದೆ.
ಸಮ್ಮೇಳನದಲ್ಲಿ ರಂಗಕಲಾವಿದೆ, ಚಲನಚಿತ್ರ ನಟಿ, ಸಚಿವೆ ಉಮಾಶ್ರೀಗೆ ಈ ಬಾರಿಯ ಶ್ರೀರಂಗ ರಂಗ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಧ್ವನಿ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ದುಬೈಯ ಜೆ.ಎಸ್.ಎಸ್. ಶಾಲೆಯ ಆವರಣದಲ್ಲಿ ನಡೆಯುವ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ವಿದ್ವಾಂಸ ಡಾ.ಗೋ.ರು.ಚೆನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. 1985ರಲ್ಲಿ ಮುಂಬೈಯಲ್ಲಿ ಆರಂಭಗೊಂಡ ‘ಧ್ವನಿ ಪ್ರತಿಷ್ಠಾನ’ ಬಳಿಕ ದುಬೈಯಲ್ಲಿ ಕಾರ್ಯಾಚರಿಸುತ್ತಿದೆ ಎಂದರು.
ಸಮ್ಮೇಳನದಲ್ಲಿ ಅನಿವಾಸಿ ಕನ್ನಡಿಗರ ಕವನ ಸಂಕಲನ ‘ತಾರೆ ಎಣಿಸಿ ಮೊತ್ತ ಹೇಳಿ’ ಕೃತಿಯನ್ನು ಪ್ರಕಟಿಸಲಾಗುವುದು. ರಜತ ಮಹೋತ್ಸವದ ಅಂಗವಾಗಿ 2016ರಲ್ಲಿ ದುಬೈಯಲ್ಲಿ ಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಪಯ್ಯಿರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಾಹಿತಿ ನಾ.ದಾ.ಶೆಟ್ಟಿ, ರಂಗನಟ ಪರಮಾನಂದ ಸಾಲ್ಯಾನ್, ಧ್ವನಿ ಸಂಘಟನೆಯ ಪದ್ಮರಾಜ ಎಕ್ಕಾರ್ ಮೊದಲಾದವರು ಉಪಸ್ಥಿತರಿದ್ದರು.





