ಸೆ.16: ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ
ಮಂಗಳೂರು, ಆ.26: ಸರಕಾರದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ರಾಜ್ಯದ ಎಲ್ಲ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಸೆ.16ರಂದು ಆಚರಿಸಲು ತೀರ್ಮಾನಿಸಿದ್ದು, ಈ ಸಂಬಂಧ 69 ಲಕ್ಷ ರೂ.ವನ್ನು ಸರಕಾರ ಬಿಡುಗಡೆ ಮಾಡಲಿದೆ ಎಂದು ಬಿಲ್ಲವ ಸಂಘಟನೆಯ ವಕ್ತಾರ ಹರಿಕೃಷ್ಣ ಬಂಟ್ವಾಳ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಇತ್ತೀಚೆಗೆ ಬಂಟ್ವಾಳದಲ್ಲಿ ನಿರ್ಮಾಣಗೊಂಡ ಬ್ರಹ್ಮಶ್ರೀ ನಾರಾಯಣ ಗುರುಗಳ ಸಭಾಭವನದ ಉದ್ಘಾಟನಾ ಸಮಾರಂಭದ ಸಂದರ್ಭ ಸಜೀಪ ಮೂಡ ಬ್ರಹ್ಮಶ್ರೀ ನಾರಾಯಣ ಗುರು ಸೇವಾಸಮಿತಿಯು ಮುಖ್ಯಮಂತ್ರಿಯವರಿಗೆ ರಾಜ್ಯದ ಪ್ರತಿ ಜಿಲ್ಲೆ, ತಾಲೂಕು, ಕೇಂದ್ರಗಳಲ್ಲಿ ನಾರಾಯಣ ಗುರು ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸಲು ಮನವಿ ಸಲ್ಲಿಸಿತ್ತು. ಆವಾಗ ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಈ ಪ್ರಸ್ತಾವವನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದೇ ಈ ಬಗ್ಗೆ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಆಚರಿಸಲು ಸೂಚಿಸಿದ್ದರು. ಇದೀಗ ಸರಕಾರ ತನ್ನ ಹೇಳಿಕೆಗೆ ಬದ್ಧವಾಗಿದೆ. ಇದಕ್ಕಾಗಿ ಸರಕಾರವನ್ನು ಅಭಿನಂದಿಸುವುದಾಗಿ ಅವರು ಹೇಳಿದರು.
*ಪಠ್ಯದಲ್ಲಿ ಸೇರ್ಪಡೆಗೆ ಆಗ್ರಹ: ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕು ಸಾಧನೆಗಳ ಬಗ್ಗೆ ಪೌಢಶಾಲೆ, ಕಾಲೇಜು ಹಾಗೂ ವಿ.ವಿ. ಮಟ್ಟದಲ್ಲಿ ಪಠ್ಯದಲ್ಲಿ ಸೇರ್ಪಡೆಗೊಳಿಸುವ ಪ್ರಸ್ತಾವನ್ನೂ ಮುಖ್ಯ ಮಂತ್ರಿಗೆ ನೀಡಲಾಗಿದೆ ಈ ಬಗ್ಗೆ ಕ್ರಮ ಕೈಗೊಳ್ಳುವರೆಂಬ ವಿಶ್ವಾಸ ಹೊಂದಿರುವುದಾಗಿ ಹರಿಕೃಷ್ಣ ಬಂಟ್ವಾಳ್ ತಿಳಿಸಿದ್ದಾರೆ.





