ಕರಾವಳಿಯ ಸಂಸ್ಕೃತಿಯನ್ನು ನಾಶಪಡಿಸುತ್ತಿರುವ ಬಿಜೆಪಿ: ಎಸ್‌ಡಿಪಿಐ ಆರೋಪ

ಮಂಗಳೂರು, ಆ.27: ಮಾಜಿ ಸಂಸದೆ ಕಾಂಗ್ರೆಸ್‌ನ ಯುವ ನಾಯಕಿ ಮತ್ತು ನಟಿ ರಮ್ಯಾ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಪ್ರಯುಕ್ತ ಮಂಗಳೂರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ಬಿಜೆಪಿಯು ನಡೆದುಕೊಂಡಿರುವ ರೀತಿಯನ್ನು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಖಂಡಿಸಿದೆ.
ಗೋರಕ್ಷಣೆಯ ಹೆಸರಿನಲ್ಲಿ ಹಿಂದುತ್ವ ಗೂಂಡಾಗಳಿಂದ ಅಮಾನುಷವಾಗಿ ಹತ್ಯೆಯಾದ ಪ್ರವೀಣ್ ಪೂಜಾರಿಯ ಕೊಲೆ ವಿಷಯವು ರಾಜ್ಯಾದ್ಯಂತ ಚರ್ಚೆಯಾಗಿ ಬಿಜೆಪಿಯ ಮತ್ತು ಸಂಘಪರಿವಾರದ ಮಾನ ಹರಾಜುವಾಗುತ್ತಿರುವಾಗ ಅದನ್ನು ಮರೆಮಾಚಲು ಕಾಂಗ್ರೆಸ್‌ನ ಯುವ ನಾಯಕಿ ರಮ್ಯಾರ ಹೇಳಿಕೆಯನ್ನೇ ಅಸ್ತ್ರವನ್ನಾಗಿಸಿ ಮಾಧ್ಯಮಗಳ ಮೂಲಕ ಚರ್ಚೆ ನಡೆಸಿ ಮತ್ತು ಪ್ರತಿಭಟನೆಯ ಹೆಸರಿನಲ್ಲಿ ಗೂಂಡಾಗಿರಿ ನಡೆಸಿ ಜನಸಮಾನ್ಯರ ಮಧ್ಯೆ ಗೊಂದಲ ಸೃಷ್ಟಿಸುತ್ತಾರೆ. ಇದು ಬಿಜೆಪಿಯ ಚಾಳಿಯಾಗಿದೆ ಎಂದು ಎಸ್‌ಡಿಪಿಐ ಆರೋಪಿಸಿದೆ.
ಸಂಸ್ಕೃತಿಯ ವಿಚಾರದಲ್ಲಿ, ಮಾತೆಯ ವಿಚಾರದಲ್ಲಿ ಮತ್ತು ಧರ್ಮ ರಕ್ಷಣೆಯ ಹೆಸರಿನಲ್ಲಿ ಕಿರುಚಾಡುತ್ತಿರುವ ಬಿಜೆಪಿ ಮತ್ತು ಸಂಘಪರಿವಾರ ರಮ್ಯಾರ ಕಾರಿಗೆ ಮೊಟ್ಟೆ ಎಸೆದು, ಶೂ ತೋರಿಸಿ ಅಸಭ್ಯ ಶಬ್ದಗಳಿಂದ ಕಿರುಚಾಡಿದ್ದು ಇವರ ಸಂಸ್ಕೃತಿಯನ್ನು ಎತ್ತಿತೋರಿಸುತ್ತದೆ. ಅದೇ ರೀತಿ ಧಾರ್ಮಿಕ ಕಾರ್ಯಕ್ರಮವಾದ ಕೃಷ್ಣಜನ್ಮಾಷ್ಟಮಿಯ ವೇದಿಕೆಯ ಮೇಲೆ ಶೂ ಮತ್ತು ಕಲ್ಲನ್ನು ಎಸೆದವರು ಯಾವ ಧರ್ಮವನ್ನು ರಕ್ಷಿಸುವವರು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ರೀತಿ ಸಂಸ್ಕೃತಿಯನ್ನು, ಧರ್ಮವನ್ನು ಹಾಗೂ ಆಚಾರ ವಿಚಾರಗಳನ್ನು ರಾಜಕೀಯಕ್ಕೆ ಬಳಸುವ ಬಿಜೆಪಿ ಮತ್ತು ಸಂಘಪರಿವಾರದ ಈ ಕೃತ್ಯದಿಂದ ಇಡೀ ದ.ಕ ಜಿಲ್ಲೆಯ ಜನತೆ ತಲೆ ತಗ್ಗಿಸುವಂತಾಗಿದೆ. ಆದರೆ ಇಷ್ಟೆಲ್ಲಾ ಸಂಭವಿಸುವಾಗಲು ಕಾಂಗ್ರೆಸ್ ಯುವ ನಾಯಕಿ ರಮ್ಯಾರಿಗೆ ಧೈರ್ಯ ತುಂಬಬೇಕಾದ ಕಾಂಗ್ರೆಸ್ಸಿಗರು ಮೌನವಹಿಸಿರುವುದು ಸಂಶಯಕ್ಕೆ ಎಡೆಮಾಡಿದೆ. ಮಾತ್ರವಲ್ಲದೆ ಪ್ರತಿಭಟನೆಯ ಮುನ್ಸೂಚನೆ ಇದ್ದರೂ ಅದನ್ನು ತಡೆಯಲು ಜಿಲ್ಲಾಡಳಿತವು ಕೂಡ ವಿಫಲವಾಗಿದೆ. ಇಂತಹ ಕೃತ್ಯಗಳ ವಿರುದ್ಧ ಜನ ಜಾಗೃತಿ, ಹೋರಾಟಗಳನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದೆಂದು ಎಸ್‌ಡಿಪಿಐ ದ.ಕ . ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







