ಭ್ರಷ್ಟಾಚಾರವೇ ಭಾರತದ ಪ್ರಮುಖ ಸಮಸ್ಯೆ!: ಸಮೀಕ್ಷಾ ವರದಿ

ಹೊಸದಿಲ್ಲಿ,ಆಗಸ್ಟ್ 27: ಭಾರತ ಎದುರಿಸುತ್ತಿರುವ ಅತ್ಯಂತ ದೊಡ್ಡ ಸಮಸ್ಯೆ ಭ್ರಷ್ಟಾಚಾರವಾಗಿದೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.ವರ್ಲ್ಡ್ ಇಕಾನಮಿಕ್ ಫೋರಂನ ಗೂಗಲ್ ಶೇಪಸ ಅನ್ವಲ್ ಸಮೀಕ್ಷೆಯಲ್ಲಿ ಈ ವಿಚಾರ ಬಹಿರಂಗವಾಗಿದೆ. ಭ್ರಷ್ಟಾಚಾರವನ್ನು ಹೊರತು ಪಡಿಸಿದರೆ ಬಡತನ ಮತ್ತು ಕೋಮುವಾದ ದೇಶ ಎದುರಿಸುತ್ತಿರುವ ಇನ್ನೆರಡು ಬೃಹತ್ ಸವಾಲುಗಳೆಂದು ವರದಿಯಲ್ಲಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ.49ರಷ್ಟು ಮಂದಿ ಭ್ರಷ್ಟಾಚಾರವನ್ನೇ ಪ್ರಧಾನ ಸಮಸ್ಯೆಯೆಂದು ಬೆಟ್ಟುಮಾಡಿದ್ದಾರೆಂದು ವರದಿಯೊಂದು ತಿಳಿಸಿದೆ. ಶೇ.30ರಷ್ಟು ಮಂದಿ ಬಡತನ ಮತ್ತು ಕೋಮುವಾದವನ್ನು ಮುಖ್ಯಸಮಸ್ಯೆಯಾಗಿ ಪರಿಗಣಿಸಿದ್ದಾರೆ.
181ರಾಷ್ಟ್ರಗಳ 26,000 ಮಂದಿಯಿಂದ ಸಂಗ್ರಹಿಸಿದ ಅಭಿಪ್ರಾಯದ ಹಿನ್ನೆಲೆಯಲ್ಲಿ ಸಮೀಕ್ಷಾ ವರದಿ ತಯಾರಿಸಲಾಗಿದ್ದು, ಜಾಗತಿಕವಾಗಿ ಬಹುದೊಡ್ಡ ಸಮಸ್ಯೆ ಹವಾಮಾನದ ಏರುಪೇರಾಗಿದೆ. ಆನಂತರ ವಿವಿಧ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷ,ಕೋಮುಸಂಘರ್ಷ, ಬಡತನ ಮುಂತಾದ ವಿಷಯಗಳು ಸಮಸ್ಯೆಯ ಯಾದಿಯಲ್ಲಿವೆ.
ಇದೇ ಸಮೀಕ್ಷೆಯಲ್ಲಿ ಮಾಹಿತಿ ಕ್ಷೇತ್ರದ ಪ್ರಗತಿ ಹೆಚ್ಚು ನಿರೀಕ್ಷೆ ಸೃಷ್ಟಿಸುವ ಘಟಕವೆಂದು ವಿವರಿಸಲಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.86ರಷ್ಟುಮಂದಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕುರಿತು ಅಪಾರ ನಿರೀಕ್ಷೆ ವ್ಯಕ್ತಪಡಿಸಿದ್ದಾರೆಂದು ವರದಿ ತಿಳಿಸಿದೆ.







