ತಡರಾತ್ರಿ ಐಎಎಸ್ ಅಧಿಕಾರಿಗೆ ಖುದ್ದು ಪ್ರಧಾನಿ ಮೋದಿಯೇ ಕರೆ ಮಾಡಿದಾಗ...

ಅಗರ್ತಲಾ, ಆ.27: ತ್ರಿಪುರಾದ ಐಎಎಸ್ ಅಧಿಕಾರಿಗೆ ಖುದ್ದು ಪ್ರಧಾನಿ ಮೋದಿಯೇ ಕರೆ ಮಾಡಿ ತ್ರಿಪುರಾವನ್ನು ದೇಶದ ಇತರ ಕಡೆಗಳಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 208 ಇದರ ದುರಸ್ತಿ ವಿಚಾರದ ಬಗ್ಗೆ ಮಾತನಾಡಿದ್ದಾರಂತೆ. ಹಾಗೆಂದು ಜನಸತ್ತಾ ವರದಿಯೊಂದು ತಿಳಿಸಿದೆ.
ಈ ರಾಷ್ಟ್ರೀಯ ಹೆದ್ದಾರಿ 208ರ ದುರಸ್ತಿ ಕಾರ್ಯ ಹಲವು ಸಮಯದಿಂದ ನೆನೆಗುದಿಗೆ ಬಿದ್ದಿದ್ದರೂ, ಇತ್ತೀಚಿಗಿನ ವರದಿಗಳ ಪ್ರಕಾರ ಈ ಯೋಜನೆಗೆ ಬೇಕಾದ ಎಲ್ಲಾ ಅಗತ್ಯ ಸಾಮಾಗ್ರಿಗಳು ಪೂರೈಕೆಯಾಗಿರುವ ಬಗ ತಿಳಿಸಲಾಗಿದೆ. ಇದು ಹೇಗಾಯಿತು ಎಂಬುದನ್ನು ಖೋರಾದಲ್ಲಿ ಬಂದಿರುವ ಒಂದು ಪೋಸ್ಟ್ ವಿವರಿಸಿದ್ದು ಅದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಿಟ್ಟಿದೆ.
ಈ ಪೋಸ್ಟ್‌ನಲ್ಲಿ ಪುಷ್ಪಕ್ ಚಕ್ರವರ್ತಿ ಎಂಬವರು ಈ ಘಟನೆಯನ್ನು ವಿವರಿಸಿದ್ದಾರೆ. ಅದರಂತೆ ಜುಲೈ 21 ರ ರಾತ್ರಿ 10 ಗಂಟೆಗೆ ತ್ರಿಪುರಾದಲ್ಲಿ ಸೇವೆಯಲ್ಲಿರುವ ಅಧಿಕಾರಿಯೊಬ್ಬರಿಗೆ ಫೋನ್ ಕರೆಯೊಂದು ಬಂದಿತ್ತು. ಅತ್ತ ಕಡೆಯಿಂದ ಮಾತನಾಡಿದ ವ್ಯಕ್ತಿ ಅಧಿಕಾರಿಯ ಬಳಿ ನೀವು ಪ್ರಧಾನಿಯೊಂದಿಗೆ ಸ್ವಲ್ಪ ಹೊತ್ತು ಮಾತನಾಡುತ್ತೀರಾ ಎಂದು ಕೇಳಿದರು. ಇದನ್ನು ಕೇಳಿದಾಗ ಆ ಅಧಿಕಾರಿಗೆ ತನ್ನ ಕಿವಿಯನ್ನು ತಾನೇ ನಂಬಲಾಗಲಿಲ್ಲ. ಅವರ ಕಾಲು ಕೂಡ ನಡುಗಲಾರಂಭಿಸಿತ್ತು. ಸ್ವಲ್ಪಹೊತ್ತಿನ ಬಳಿಕ ಸಾವರಿಸಿಕೊಂಡು ಆಯಿತು ಎಂದು ಹೇಳಿದಾಗ, ಬೀಪ್ ಸ್ವರ ಕೇಳಿ ಕಾಲ್ ಟ್ರಾನ್ಸ್‌ಫರ್ ಮಾಡಿದಾಗ ಅತ್ತ ಕಡೆಯಿಂದ ಮೋದಿ ಮಾತನಾಡಲು ಆರಂಭಿಸಿದ್ದರು ಎಂದು ಆ ಪೋಸ್ಟ್ ವಿವರಿಸಿದೆ.
ಮೊದಲಾಗಿ ತಾನು ಇಷ್ಟು ಹೊತ್ತಿನಲ್ಲಿ ಕರೆ ಮಾಡುತ್ತಿರುವುದಕ್ಕೆ ಕ್ಷಮೆ ಕೇಳಿದ ಮೋದಿ, ಈ ಸಮಯ ಮಾತನಾಡುವುದು ಅತ್ಯಗತ್ಯವಾಗಿತ್ತು ಎಂದರೆಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 208ರ ದುರಸ್ತಿಗೆ ಅಧಿಕಾರಿಯ ಸಹಾಯವನ್ನು ಮೋದಿ ಯಾಚಿಸಿದರಲ್ಲದೆ, ಈಗಾಗಲೇ ಅಸ್ಸಾಂ ಹಾಗೂ ತ್ರಿಪುರಾದ ಅಧಿಕಾರಿಗಳೊಂದಿಗೆ ಮಾತನಾಡಿದ್ದಾಗಿ ಅವರು ಈ ಯೋಜನೆಗೆ ಏನೆಲ್ಲಾ ಅಗತ್ಯವೋ ಅವುಗಳನ್ನೆಲ್ಲಾ ಒದಗಿಸಲಾಗುವುದು ಎಂದು ಹೇಳಿದರು. ಮರುದಿನ ಆ ಅಧಿಕಾರಿ (ಅವರ ಹೆಸರನ್ನು ಬಹಿರಂಗ ಪಡಿಸಲಾಗಿಲ್ಲ)ತಮ್ಮ ಕಚೇರಿಗೆ ಹಾಜರಾದಾಗ ಅಲ್ಲಿ ಅವರನ್ನು ತ್ರಿಪುರಾ ಸರಕಾರ, ಅಸ್ಸಾಂ ಸರಕಾರದ ಅಧಿಕಾರಿಗಳು ಸಂಪರ್ಕಿಸಿದರು. 15 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಹಣ ಒದಗಿಸಲಾಗಿದೆಯೆಂದೂ ಅವರಿಗೆ ಮಾಹಿತಿ ನೀಡಲಾಯಿತು. ಮುಂದೆ ಅಧಿಕಾರಿ ಎಲ್ಲಾ ಅಗತ್ಯ ಸಾಮಾಗ್ರಿಗಳೊಂದಿಗೆ ಯೋಜನೆಯ ಸ್ಥಳಕ್ಕೆ ಆಗಮಿಸಿದಾಗ ಅಲ್ಲಿ ಅದಾಗಲೇ ಅಸ್ಸಾಂ ಸರಕಾರ ಒದಗಿಸಿದ್ದ 6 ಜೆಸಿಬಿ ಯಂತ್ರಗಳು ತಯಾರಾಗಿ ನಿಂತಿದ್ದವು. ಮುಂದಿನ ಆರು ದಿನಗಳ ತನಕ ಸುಮಾರು 300 ಟ್ರಕ್‌ಗಳಲ್ಲಿ ಅಗತ್ಯ ಸಾಮಾಗ್ರಿ ಸರಬರಾಜಾಯಿತಲ್ಲದೆ, ಸ್ಥಳೀಯ ಕಾರ್ಮಿಕರೂ ಸೇರಿದಂತೆ ಅಸ್ಸಾಂ ಹಾಗೂ ತ್ರಿಪುರಾದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಸಹಾಯದಿಂದ ರಾಷ್ಟ್ರೀಯ ಹೆದ್ದಾರಿ ದುರಸ್ತಿಯಾಗಿಸಾರ್ವಜನಿಕರ ಉಪಯೋಗಕ್ಕೆ ಅದನ್ನು ತೆರೆಯಲಾಗಿದೆಯೆಂದು ಆ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ವಿವರಿಸಲಾಗಿದೆ.
ಆದರೆ ಪ್ರಧಾನಿ ಐಎಎಸ್ ಅಧಿಕಾರಿಗೆ ಕರೆ ಮಾಡಿದ ವಿಚಾರ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.







