ರಾಜ್ಯದ ಪರಿಸ್ಥಿತಿಯನ್ನು ಸುಪ್ರೀಂಗೆ ಮನವರಿಕೆ ಮಾಡಿಕೊಡಲು ಸರ್ವಪಕ್ಷ ಮುಖಂಡರ ತೀರ್ಮಾನ
ಕಾವೇರಿ ನೀರಿಗಾಗಿ ತಮಿಳುನಾಡಿನಿಂದ ಸುಪ್ರೀಂಗೆ ಅರ್ಜಿ

ಬೆಂಗಳೂರು, ಆ.27: ಕಾವೇರಿ ನೀರು ಬಿಡುಗಡೆ ಕೋರಿ ತಮಿಳುನಾಡು ಸರಕಾರ ಸಲ್ಲಿಸಿರುವ ಅರ್ಜಿಗೆ ಪ್ರತಿಯಾಗಿ ರಾಜ್ಯ ಎದುರಿಸುತ್ತಿರುವ ಸಂಕಷ್ಟವನ್ನು ಸುಪ್ರೀಂಕೋರ್ಟ್‌ಗೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸರ್ವಪಕ್ಷ ಮುಖಂಡರ ಸಭೆ ತೀರ್ಮಾನಿಸಿದೆ.
ವಸ್ತುಸ್ಥಿತಿಯನ್ನು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ವಿಚಾರದಲ್ಲಿ ಸರಕಾರ ಕೈಗೊಳ್ಳುವ ನಿರ್ಣಯಕ್ಕೆ ತಾವು ಬದ್ಧ ಎಂದು ಸರ್ವಪಕ್ಷ ಮುಖಂಡರೂ ಸಭೆಯಲ್ಲಿ ಹೇಳಿದರು.
ಸಭೆ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದಾಗಿ ಉಂಟಾಗಿರುವ ಪರಿಸ್ಥಿತಿಯನ್ನು ವಿವರಿಸಿದರು. ನಾವೇ ಕಷ್ಟದಲ್ಲಿರುವಾಗ ತಮಿಳುನಾಡಿಗೆ ನೀರು ಬಿಡುವುದು ಅಸಾಧ್ಯ ಎಂದರು. ಕಾವೇರಿ ಕಣಿವೆಯಲ್ಲಿ ಕಬಿನಿ, ಹಾರಂಗಿ, ಹೇಮಾವತಿ ಮತ್ತು ಕೃಷ್ಣರಾಜ ಸಾಗರ ಜಲಾಶಯಗಳಿವೆ. ಈ ಜಲಾಶಯಗಳ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 114 ಟಿಎಂಸಿ. ಇದರಲ್ಲಿ ಬಳಕೆಗೆ ಸಿಗುವ ನೀರಿನ ಪ್ರಮಾಣ 104 ಟಿಎಂಸಿ ಮಾತ್ರ. ಈ ವರ್ಷ ಎಲ್ಲ ಜಲಾಶಯಗಳ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಅಭಾವ ಇರುವುದರಿಂದ ಒಳ ಹರಿವು ಕಡಿಮೆಯಾಗಿದೆ. ಆಗಸ್ಟ್ 24ರ ವೇಳೆಗೆ 195.25 ಟಿಎಂಸಿ ನೀರು ಬರಬೇಕಿತ್ತು. ಆದರೆ, 108 ಟಿಎಂಸಿ ಮಾತ್ರ ಸಂಗ್ರಹವಾಗಿದೆ. ಜೊತೆಗೆ ಒಳ ಹರಿವಿನ ಪ್ರಮಾಣ ಶೇ. 55ರಷ್ಟು ಮಾತ್ರ ಇದೆ. ಹೀಗಾಗಿ ನಮ್ಮ ಬಳಿ ಬಳಕೆಗೆ ಈಗ ಲಭ್ಯವಿರುವುದು 51 ಟಿಎಂಸಿ ಮಾತ್ರ. ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಇತರ ನಗರಗಳಿಗೆ ನೀರು ಒದಗಿಸುವ ಸಲುವಾಗಿಯೇ ನಮಗೆ ಕನಿಷ್ಠ 40 ಟಿಎಂಸಿ ಬೇಕಾಗುತ್ತದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಇತ್ತೀಚೆಗೆ ತಮಿಳುನಾಡಿನ ಮುಖಂಡರ ನಿಯೋಗ ತಮ್ಮನ್ನು ಭೇಟಿ ಮಾಡಿ ನಮ್ಮ ಬೆಳೆಗಳಿಗೆ ನೀರು ಬಿಡುಗಡೆ ಮಾಡಿ ಎಂದು ಮನವಿ ಮಾಡಿದರು. ನಾವೇ ಕಷ್ಟದಲ್ಲಿದ್ದೇವೆ. ಇನ್ನು ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದು ಹೇಗೆ ಎಂದು ಹೇಳಿ ವಸ್ತುಸ್ಥಿತಿಯನ್ನು ಅವರಿಗೆ ವಿವರಿಸಿದೆ ಎಂದರು.
ಈ ವರ್ಷದ ಮುಂಗಾರು ತೃಪ್ತಿಕರವಾಗಿಲ್ಲ. ವಾಡಿಕೆ ಪ್ರಕಾರವೂ ಮಳೆ ಬಂದಿಲ್ಲ. ಆದರೆ ತಮಿಳುನಾಡು ದಕ್ಷಿಣ ಭಾರತದ ವಾಡಿಕೆ ಮಳೆಯ ಅಂಕಿಅಂಶ ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ನಾವು ಎದುರಿಸುತ್ತರುವ ಸಂಕಷ್ಟ ಪರಿಸ್ಥಿತಿಯನ್ನೂ ಆ ರಾಜ್ಯ ನ್ಯಾಯಾಲಯಕ್ಕೆ ಹೇಳಿಲ್ಲ. ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಕೇವಲ 51 ಟಿಎಂಸಿ ನೀರಿದೆ ಎಂಬುದನ್ನೂ ತಿಳಿಸಿಲ್ಲ. ಯಾವುದನ್ನೂ ಹೇಳದೇ 50 ಟಿಎಂಸಿಗೆ ತಮಿಳುನಾಡು ಬೇಡಿಕೆ ಇಟ್ಟಿದೆ ಎಂದು ಹೇಳಿದರು.
ಕುಡಿಯುವ ಉದ್ದೇಶಕ್ಕೆ ಪೂರೈಸಿದರೆ, ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳಿಗೆ ಒದಗಿಸಿದರೆ ನಮಗೆ ನೀರು ಇರುವುದೇ ಇಲ್ಲ. ತಮಿಳುನಾಡಿಗೆ ಈಗಾಗಲೇ 29 ಟಿಎಂಸಿ ಹರಿದು ಹೋಗಿದೆ. ಮೆಟ್ಟೂರು ಜಲಾಶಯದಲ್ಲಿ 34 ಟಿಎಂಸಿ ನೀರು ಸಂಗ್ರಹ ಮಾಡಿಟ್ಟುಕೊಂಡಿದ್ದಾರೆ. ಆದರೂ ತಗಾದೆ ತೆಗೆದಿದ್ದಾರೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.
ಈ ಎಲ್ಲ ವಿಚಾರಗಳ ಬಗ್ಗೆ ಇಂದಿನ ಸಭೆಯಲ್ಲಿ ಸರ್ವಪಕ್ಷ ಮುಖಂಡರ ಜೊತೆ ಚರ್ಚಿಸಲಾಗಿದೆ. ವಾಸ್ತವಿಕ ಚಿತ್ರಣವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಿ ಎಂದು ಅವರು ಸಲಹೆ ನೀಡಿದ್ದಾರೆ. ಅದರಂತೆ ನಮ್ಮ ವಕೀಲರ ತಂಡ ನ್ಯಾಯಾಲಯದಲ್ಲಿ ವಾದ ಮಂಡಿಸಲಿದೆ ಎಂದು ತಿಳಿಸಿದರು.
ನೀರು ಬಿಡಲು ನಾರಿಮನ್ ಹೇಳಿಲ್ಲ
ತಮಿಳುನಾಡಿಗೆ 45 ಟಿಎಂಸಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ವಕೀಲ ನಾರಿಮನ್ ಹೇಳದ್ದಾರೆ ಎಂಬುದು ಸತ್ಯಕ್ಕೆ ದೂರ. ಅವರು ಆ ರೀತಿ ಸಲಹೆ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿಯವರು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಸೇರಿದಂತೆ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು, ಕಾವೇರಿ ಕಣಿವೆ ಜಿಲ್ಲೆಗಳ ಉಸ್ತುವಾರಿ ಸಚಿವರು ಸಭೆಯಲ್ಲಿ ಭಾಗವಹಿಸಿದ್ದರು.







