ಮುಂಬೈಗೆ ಶೀಘ್ರವೇ ಮೂರನೆ ವಿಮಾನ ನಿಲ್ದಾಣ

ಮುಂಬೈ, ಆ.27: ಮಹಾರಾಷ್ಟ್ರ ಸರಕಾರವು ಕಲ್ಯಾಣ್‌ನಲ್ಲಿರುವ ಒಂದು ಪರಿತ್ಯಕ್ತ ಏರ್‌ಸ್ಟ್ರಿಪ್ ಹಾಗೂ 70 ಹೆಕ್ಟೇರ್‌ನ ನಿವೇಶನವೊಂದನ್ನು ದೇಶೀಯ ವಿಮಾನನಿಲ್ದಾಣವಾಗಿ ಅಭಿವೃದ್ಧಿಪಡಿಸುವ ಕುರಿತು ಪರಿಶೀಲನೆ ನಡೆಸುತ್ತಿದೆ. ಇದರಿಂದಾಗಿ ಮುಂಬೈಯ ಹೊರ ವಲಯದಲ್ಲಿ ಮೂರನೆಯ ವಿಮಾನ ನಿಲ್ದಾಣವೊಂದು ಶೀಘ್ರದಲ್ಲೇ ನಿರ್ಮಾಣಗೊಳ್ಳುವ ಸಂಭವವಿದೆ.
ಸಾಂತಾಕ್ರೂಸ್ ಹಾಗೂ ಸಹರಾ ವಿಮಾನ ನಿಲ್ದಾಣಗಳು ಈಗಾಗಲೇ ಪರ್ಯಾಪ್ತ ಬಿಂದುವನ್ನು ತಲುಪಿದ್ದು, ನವಿ ಮುಂಬೈಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭಿಸುವ ವರೆಗೆ ಅವು ಹೆಚ್ಚುವರಿ ಪ್ರಯಾಣಿಕರನ್ನು ನಿಭಾಯಿಸಲಾರವೆಂದು ತಿಳಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ನವಿಮುಂಬೈ ವಿಮಾನ ನಿಲ್ದಾಣ 2020ರ ವೇಳೆಗಷ್ಟೇ ಸಿದ್ಧವಾಗಬಹುದು.
ಮುಂಬೈಯ ಜುಹುವಿನಲ್ಲೊಂದು ವಿಮಾನ ನಿಲ್ದಾಣವಿದೆ. ಆದರೆ ಅದನ್ನು ಕೇವಲ ಹೆಲಿಕಾಪ್ಟರ್‌ಗಳು ಹಾಗೂ ವಿಶೇಷ ವಿಮಾನಗಳಷ್ಟೇ ಬಳಸುತ್ತಿವೆ. ಜುಹು ನಿಲ್ದಾಣ ಚಿಕ್ಕದಾಗಿರುವುದರಿಂದ ಪ್ರಯಾಣಿಕರ ವಿಮಾನಗಳನ್ನು ನಿಭಾಯಿಸಲಾರದು.
ಪ್ರಾದೇಶಿಕ ವಿಮಾನ ಸಂಚಾರವನ್ನು ಉತ್ತೇಜಿಸಲು ಸಣ್ಣ ಪಟ್ಟಣಗಳಲ್ಲಿ ಮುಂದಿನ ಮೂರು ವರ್ಷಗಳಲ್ಲಿ 50 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಕೇಂದ್ರ ಸರಕಾರದ ಯೋಜನೆಯಿಂದ ಮುಂಬೈಯ ವಿಮಾನ ನಿಲ್ದಾನಗಳಲ್ಲಿ ಪ್ರಯಾಣಿಕರ ಒತ್ತಡ ಇನ್ನಷ್ಟು ಹೆಚ್ಚಲಿದೆ. ಆದುದರಿಂದ ವಾರ್ಷಿಕ 4 ಕೋಟಿ ಪ್ರಯಾಣಿಕರನ್ನು ನಿಭಾಯಿಸುತ್ತಿರುವ ನಗರದ ವಿಮಾನ ನಿಲ್ದಾಣಗಳ ಹೊರೆ ಕಡಿಮೆ ಮಾಡಲು ರಾಜ್ಯ ಸರಕಾರ ಇನ್ನೊಂದು ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಬಯಸಿದೆ.
ಪ್ರಸ್ತಾವಿತ ವಿಮಾನ ನಿಲ್ದಾಣದ ಜಮೀನು ಕಲ್ಯಾಣ್‌ನ ಸವೇಲಿಯಲ್ಲಿದೆ. ಅಲ್ಲಿ 2ನೆ ಜಾಗತಿಕ ಯುದ್ಧದ ವೇಳೆ ರಾಯನ್ ಏರ್‌ಫೋರ್ಸ್ ನಿರ್ಮಿಸಿದ್ದ ಏರ್‌ಸ್ಟ್ರಿಪ್ ಇದೆ. ಈ ಪ್ರದೇಶ ರಕ್ಷಣಾ ಸಚಿವಾಲಯಕ್ಕೆ ಸೇರಿದುದಾದರೂ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು(ಎಎಐ) ಏರ್‌ಸ್ಟ್ರಿಪ್‌ನ ಮೇಲ್ವಿಚಾರಣೆ ನಡೆಸುತ್ತಿದೆ.







