ಸ್ನೇಹ, ಸಹಾಯ, ಶಿಸ್ತು, ಭ್ರಾತೃತ್ವ ಹೆಣೆಯಲು ಸ್ಕೌಟ್, ಗೈಡ್ಸ್ ಸಹಕಾರಿ: ಎ.ಎನ್. ಮಹೇಶ್
ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ರೇಂಜರ್ಸ್ ಮತ್ತು ರೋವರ್ಸ್ ಘಟಕಗಳ ಉದ್ಘಾಟನಾ ಸಮಾರಂಭ

ಚಿಕ್ಕಮಗಳೂರು, ಆ.27: ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವಿಶ್ವದಲ್ಲಿ 216ಕ್ಕೂ ಹೆಚ್ಚು ದೇಶಗಳಲ್ಲಿ 25 ಮಿಲಿಯನ್‌ಗೂ ಹೆಚ್ಚು ಸದಸ್ಯರನ್ನು ಹೊಂದಿದ್ದು ವಿಶ್ವದ ಅತೀ ದೊಡ್ಡ ಸಂಘಟನೆಯಾಗ್ದಿ ಜನರಲ್ಲಿ ಸ್ನೇಹ, ಸಹಾಯ, ಶಿಸ್ತು, ಭ್ರಾತೃತ್ವ ಹೆಣೆಯಲು ಸಹಕಾರಿಯಾಗಿದೆ. ಅದರಲ್ಲೂ ವಿಶೇಷವಾಗಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆಯುಕ್ತ ಎ.ಎನ್. ಮಹೇಶ್ ಹೇಳಿದ್ದಾರೆ.
ಅವರು ಚಿಕ್ಕಮಗಳೂರು ನಗರದ ಐ.ಡಿ.ಎಸ್.ಜಿ ಕಾಲೇಜಿನ ಸಭಾ ಭವನದಲ್ಲಿ 2016-17ನೆ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರೇಂಜರ್ಸ್ ಮತ್ತು ರೋವರ್ಸ್ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ರಾಷ್ಟ್ರ ಮಟ್ಟದ ಜಾಂಬೂರಿ ಮೈಸೂರಿನಲ್ಲಿ ನಡೆಯಲಿದ್ದು ದೇಶ, ವಿದೇಶದ 35,000 ಶಿಬಿರಾರ್ಥಿಗಳು ಪಾಲ್ಗೊಳ್ಳಲಿದ್ದು ಇದೊಂದು ಐತಿಹಾಸಿಕ ಸಮಾರಂಭವಾಗಲಿದ್ದು ನಮ್ಮ ರಾಜ್ಯದ ಮೊದಲ ‘ಕಬ್’ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ನೆನಪಿಸಿದರು. ಜಿಲ್ಲೆಯಲ್ಲಿ 8 ಸಾವಿರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಚಳವಳಿಯಲ್ಲಿ ಭಾಗವಹಿಸಿದ್ದು ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಕರೆ ನೀಡಿದರು.
ಸ್ಕೌಟಿಂಗ್ ಎಂದರೆ ಇದು ಪರಿಸರದ ನಡುವೆ ಕಲಿಯುವ ಶಿಕ್ಷಣವಾಗಿದೆ. ಇದು ನಿಮ್ಮ ಪರಿಸರ ಪ್ರೇಮವನ್ನು ಜಾಗೃತಗೊಳಿಸುವುದಲ್ಲದೆ ಮನಸ್ಸು ಮತ್ತು ಭಾವನೆಗಳನ್ನು ವಿಕಾಸಗೊಳಿಸುತ್ತದೆ. ಸೇವೆಯೇ ಪರಮ ಧರ್ಮ ಎಂಬ ಉದ್ದೇಶ ನಮ್ಮದೆಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಚ್.ಡಿ.ತಮ್ಮಯ್ಯ ಮಾತನಾಡಿ, ಇಂದು ಸಮಾಜದಲ್ಲಿ ಮಾನವೀಯ ವೌಲ್ಯಗಳು ಕುಸಿಯತ್ತಿದ್ದು ಅದನ್ನು ಬೆಸೆಯುವಲ್ಲಿ ಇಂತಹ ಸಂಘಟನೆಗಳು ಸಹಕಾರಿಯಾಗಲಿದೆಯೆಂದರು.
ಅಧ್ಯಕ್ಷತೆ ವಹಿಸಿದ ಐ.ಡಿ.ಎಸ್.ಜಿ. ಕಾಲೇಜಿನ ಪ್ರಾಂಶುಪಾಲೆ ಡಾ. ಝರೀನಾ ಕೌಸರ್ ಮಾತನಾಡಿ, ಸೇವೆ ನಮ್ಮ ಪ್ರಮುಖ ಗುರಿಯಾಗಬೇಕು. ಪಠ್ಯ ಚಟುವಟಿಕೆ ಜತೆಗೆ ಇಂತಹ ಸಂಘಟನೆಗಳಲ್ಲಿ ತರಬೇತಿ ಹೊಂದಿದಾಗ ಜೀವನ ಪರಿಪೂರ್ಣವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸ್ಕೌಟ್ಸ್ ತರಬೇತಿ ಆಯುಕ್ತೆ ಸಂಧ್ಯಾರಾಣಿ, ನಾಯಕರಾದ ಯೋಗೀಶ್, ಡಾ. ಪೂರ್ಣಿಮಾ ಉಪಸ್ಥಿತರಿದ್ದರು.







