ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಕೆಜೋಡಿಸಿ: ಸಚಿವ ಸೀತಾರಾಂ
ಖಾಸಗಿ ಬಸ್ ನಿಲ್ದಾಣ, ಜಿಪಂ ಭವನಕ್ಕೆ ಶಿಲಾನ್ಯಾಸ

ಮಡಿಕೇರಿ, ಆ.27: ರಾಜ್ಯ ಸರಕಾರ ಜಿಲ್ಲೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹಲವು ಕಾಮಗಾರಿಗಳಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದ್ದು, ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಶಾಸಕರು ಹಾಗೂ ಅಧಿಕಾರಿಗಳು ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಮನವಿ ಮಾಡಿದ್ದಾರೆ. ನಗರದಲ್ಲಿ ನೂತನ ಖಾಸಗಿ ಬಸ್ ನಿಲ್ದಾಣ ಹಾಗೂ ನಗರದ ಹೊರ ವಲಯದಲ್ಲಿ ಜಿಪಂ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಮಡಿಕೇರಿ ನಗರದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಸುಮಾರು 4.99 ಕೋಟಿ ರೂ. ಅಂದಾಜು ಮಾಡಲಾಗಿದ್ದು, ಇದರಲ್ಲಿ 1.90 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜಿಪಂ ಭವನ ನಿರ್ಮಾಣಕ್ಕೆ 18 ಕೋಟಿ ರೂ. ಅಂದಾಜು ಮಾಡಲಾಗಿದೆ. ಈ ಕಾಮಗಾರಿಗಳು ಸೇರಿದಂತೆ ಜಿಲ್ಲೆಯ ನಾನಾ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಅನುದಾನಗಳನ್ನು ಸರಕಾರ ಬಿಡುಗಡೆ ಮಾಡಲಿದೆ. ಆ ದಿಸೆಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು, ಅಧಿಕಾರಿಗಳು ಸಹಕರಿಸಬೇಕು ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಯಾವುದೇ ರೀತಿಯ ಪಕ್ಷಪಾತ ನಡೆಸದೆ ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಎಂಬ ಧ್ಯೇಯ ವಾಕ್ಯದಂತೆ ನಡೆಯುತ್ತಿದೆ. ಎಲ್ಲರೂ ಕೈಜೋಡಿಸಿದರೆ ಮಾತ್ರ ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ವೈದ್ಯಕೀಯ ಕಾಲೇಜು ತರಗತಿಗಳು ಸೆಪ್ಟಂಬರ್ ಮೊದಲ ವಾರದಿಂದಲೇ ಪ್ರಾರಂಭವಾಗಲಿವೆ. ಆ ನಿಟ್ಟಿನಲ್ಲಿ ವೈದ್ಯಕೀಯ ಕಾಲೇಜು ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಲಾಗುವುದು ಎಂದು ಸಚಿವರು ತಿಳಿಸಿದರು. ಸುಮಾರು ಮೂರು ಎಕರೆ ಜಾಗದಲ್ಲಿ ನೂತನ ಖಾಸಗಿ ಬಸ್ ನಿಲ್ದಾಣ ಹಾಗೂ 5 ಎಕರೆ ಜಾಗದಲ್ಲಿ ಜಿಪಂ ಭವನ ನಿರ್ಮಾಣವಾಗಲಿದೆ. ಬಹಳ ವರ್ಷಗಳಿಂದ ಖಾಸಗಿ ಬಸ್ ನಿಲ್ದಾಣ ನಿರ್ಮಾಣ ನನೆಗುದಿಗೆ ಬಿದ್ದಿತ್ತು. ಅದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಪ್ರಥಮ ಹಂತದಲ್ಲಿ 1.90 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಹಾಗೆಯೇ ಜಿಪಂ ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದೆ ಎಂದರು. ಮಡಿಕೇರಿ ನಗರದಲ್ಲಿ ಖಾಸಗಿ ಬಸ್‌ಗಳು ಸಂಚರಿಸುವ ಮಾರ್ಗದಲ್ಲಿ ರಸ್ತೆ ಅಗಲೀಕರಣ ಮಾಡಲಾಗುವುದು, ಮುಂದಿನ ಮಾರ್ಚ್, ಎಪ್ರಿಲ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಹಾಗೆಯೇ ಜಿಪಂ ಭವನದ ಕಾಮಗಾರಿಯು 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಚಿವರು ತಿಳಿಸಿದರು. ಶಾಂತಿ ಕಾಪಾಡಲು ಮನವಿ:
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸೂಕ್ಷ್ಮ ವಾತಾವರಣ ನಿರ್ಮಾಣವಾಗುತ್ತಿದೆ. ಸಮಾಜದಲ್ಲಿ ಸಾಮರಸ್ಯ ಕದಡಿದರೆ ಯಾರಿಗೂ ನೆಮ್ಮದಿ ಇರುವುದಿಲ್ಲ. ಆದ್ದರಿಂದ ಎಲ್ಲರೂ ಭ್ರಾತೃತ್ವ, ಸಹೋದರತ್ವ, ಸಹಬಾಳ್ವೆಯಿಂದ ನಡೆಯುವಂತಾಗಬೇಕು. ಅಭಿವೃದ್ಧಿಯತ್ತ ದೂರದೃಷ್ಟಿ ಇರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು. ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಪಂ ಸದಸ್ಯೆ ಕೆ.ಪಿ.ಚಂದ್ರಕಲಾ, ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಪಂ ಸಿಇಒ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ನಗರಸಭಾ ಅಧ್ಯಕ್ಷೆ ಶ್ರೀಮತಿ ಬಂಗೇರಾ, ಉಪಾಧ್ಯಕ್ಷೆ ಲೀಲಾ ಶೇಷಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮನ್ಸೂರ್, ನಗರಸಭೆ ಸದಸ್ಯರಾದ ಕೆ.ಎಂ.ಬಿ.ಗಣೇಶ್, ನಂದಕುಮಾರ್, ಚುಮ್ಮಿ ದೇವಯ್ಯ, ಕಾವೇರಮ್ಮ ಸೋಮಣ್ಣ, ಝುಲೇಕಾಬಿ, ಪ್ರಕಾಶ್ ಆಚಾರ್ಯ, ಮೀನಾಕ್ಷಿ, ಉದಯಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಸುರಯ್ಯೆ ಅಬ್ರಾರ್, ಪೌರಾಯುಕ್ತೆ ಬಿ.ಬಿ.ಪುಷ್ಪಾವತಿ, ಮದ್ಯಪಾನ ಸಂಯಮ ಮಂಡಳಿ ನಿರ್ದೇಶಕ ಯಾಕೂಬ್, ಪ್ರಮುಖರಾದ ಬಿ.ಟಿ.ಪ್ರದೀಪ್, ಟಿ.ಪಿ.ರಮೇಶ್, ವಿ.ಪಿ.ಶಶಿಧರ್, ಮತ್ತಿತರರು ಉಪಸಿತ್ಥರಿದ್ದರು.







