ಸಮಾಜದಲ್ಲಿ ಸಾಮರಸ್ಯ, ನೆಮ್ಮದಿ ವಾತಾವರಣ ಸೃಷ್ಟಿಸಿ: ಪುರಸಭಾ ಸದಸ್ಯೆ ಫರ್ವೀನ್ ತಾಜ್
ಶಾಂತಿ, ಮಾನವೀಯತೆ ಅಭಿಯಾನ
ತರೀಕೆರೆ, ಆ.27: ಸಮಾಜದಲ್ಲಿ ಜಾತಿ ಜಾತಿ ನಡುವೆ ಬಾಂಧವ್ಯವನ್ನು ಹೆಚ್ಚಿಸಿ, ಪರಸ್ಪರ ನೆಮ್ಮದಿಯ ಬದುಕು ಉಂಟಾಗುವಂತೆ ಸಾಮರಸ್ಯವನ್ನುಂಟು ಮಾಡಿ ಪ್ರೀತಿ ವಿಶ್ವಾಸದಿಂದ ಬದುಕನ್ನು ಸಾಗಿಸುವ ಶಾಂತಿ ಮಾನವೀಯತೆಯನ್ನು ಕಾಪಾಡುವ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಪುರಸಭಾ ಸದಸ್ಯೆ ಫರ್ವೀನ್ ತಾಜ್ ಹೇಳಿದ್ದಾರೆ.
ಅವರು ಪಟ್ಟಣದಲ್ಲಿ ನಡೆದ ಶಾಂತಿ ಮಾನವೀಯತೆ ಅಭಿಯಾನ ಮತ್ತು ಜಾಥಾ ನಡೆದ ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಅಶಾಂತಿಯಿಂದ ಆರ್ಥಿಕ ಹಿನ್ನೆಲೆ ಉಂಟಾಗುತ್ತದೆ. ಮಾನವ ಮೌಲ್ಯಗಳು ಕುಸಿದು ಮನುಷ್ಯ ಮನುಷ್ಯರ ನಡುವೆ ದ್ವೇಷ ಅಸೂಯೆ ಪೂರಕವಾದ ವಾತಾವರಣ ಉಂಟಾಗುತ್ತದೆ. ಶಾಂತಿ ಸಂದೇಶ ಪ್ರಗತಿಯತ್ತ ಮನುಷ್ಯನ ಜೀವನವನ್ನು ಕೊಂಡೊಯ್ಯುತ್ತದೆ. ಎಲ್ಲ ಧರ್ಮವು ಪರಸ್ಪರ ಹೊಂದಾಣಿಕೆಯಿಂದ ಸಮಾಜವನ್ನು ಮುನ್ನಡೆಸುವಂತೆ ಸಾರುತ್ತದೆ. ಎಂದು ತಿಳಿಸಿದರು.
ಪುರಸಭಾ ಸದಸ್ಯ ವರ್ಮ ಪ್ರಕಾಶ್ ಮಾತನಾಡಿ, ಮನುಷ್ಯ ಮನುಷ್ಯ ಸಂಬಂಧಗಳು ಸಕಾರಾತ್ಮಕವಾಗಿ ಬೆಳೆಯುತ್ತಾ ಹೋದರೆ ಸಮಾಜದಲ್ಲಿ ಸಹಜವಾಗಿ ಶಾಂತಿ ಮಾನವೀಯತೆ ಉಂಟಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಜಮಾಅತೆ ಇಸ್ಲಾಮೀ ಹಿಂದ್, ಸಂಸ್ಥೆ ಶಾಂತಿ ಮತ್ತು ಮಾನವೀಯತೆಯನ್ನು ಕಾಪಾಡುವ ಕ್ರಾಂತಿಕಾರಿಕ ಸಮಾಜ ಬದಲಾವಣೆಯ ಕಾರ್ಯ ನಿರ್ವಹಿಸುತ್ತಿದೆ. ಎಲ್ಲ ಸಮಾಜಗಳು ಸಮಾಜದಲ್ಲಿ ಶಾಂತಿಯನ್ನು ಕದಡದಂತೆ ಜನರನ್ನು ಮನವೊಲಿಸಿದರೆ ಪರಸ್ಪರ ಸಂಬಂಧ ಹೆಚ್ಚಿ ಸಮಾಜದಲ್ಲಿ ಮುನ್ನಡೆ ಸಾಧಿಸಬಹುದು ಎಂದು ತಿಳಿಸಿದರು. ತರೀಕೆರೆ ತಾಲೂಕಿನ ಜಮಾಅತೆ ಇಸ್ಲಾಮೀ ಹಿಂದ್‌ನ ಸಂಚಾಲಕ ಸೈಯದ್ ಇಸ್ಮಾಯೀಲ್ ಮಾತನಾಡಿ, ಅಭಿಯಾನದ ಅಂಗವಾಗಿ ಎಸ್ಸಿ, ಎಸ್ಟಿ ಹಿಂದುಳಿದ ವರ್ಗಗಳ ಜನರು ವಾಸಿಸುವ ಸ್ಥಳಗಳಲ್ಲಿ ಶಾಂತಿ ಮತ್ತು ಮಾನವೀಯತೆ ಮೌಲ್ಯಗಳ ಬಗ್ಗೆ ಪ್ರಚಾರ ಮಾಡಲಾಗುವುದು.ಸರಕಾರದಿಂದ ಸವಲತ್ತು ಪಡೆಯಲಾಗದ ಅಶಕ್ತರು ಮತ್ತು ಅಬಲೆಯರಿಗೆ ಸೂರು ಕಟ್ಟಿಕೊಳ್ಳಲು ಉಚಿತವಾಗಿ ಸಾಮಗ್ರಿಗಳನ್ನು ನೀಡಲು ಸಂಘಟನೆ ಮುಂದಾಗಿದ್ದು, ಅಬಲೆಯರಿಗೆ ಸದ್ಯದಲ್ಲೇ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುವುದು ಎಂದರು.
ಪುರಸಭಾ ಸದಸ್ಯ ಆದಿಲ್ ಪಾಷರವರು ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ನಂತರ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ನಝೀರ್ ಅಹ್ಮದ್, ಶೇಖ್ ಜಾವಿದ್, ಬಿಲಾಲ್, ಶಬೀರ್ ಅಹ್ಮದ್, ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಕಾರ್ಯಕರ್ತರು ಮತ್ತು ದಾರುಲ್ ಇಸ್ಲಾಹ್ ಶಾಲೆಯ ಮಕ್ಕಳು ಮತ್ತು ಸಿಬ್ಬಂದಿ ವಿವಿಧ ಸಂಘಟನೆಯ ಕಾರ್ಯಕತರು ಉಪಸ್ಥಿತರಿದ್ದರು.







