ಸೇನಾ ಮಾಹಿತಿ ತಿಳಿಯಲು ಪಾಕ್ ಗೂಢಚರನಿಂದ ಎರಡು ಫೇಸ್‌ಬುಕ್ ಖಾತೆ: ಪೊಲೀಸ್

ಜೈಸಲ್ಮೇರ್, ಅ.27: ಐಎಸ್‌ಐ ಏಜೆಂಟ್ ಆಗಿರುವ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಪಾಕಿಸ್ತಾನದ ಪ್ರಜೆ ನಂದಲಾಲ್ ಮಹಾರಾಜ್ ಎಂಬಾತ, ಬಾರ್ಮೇರ್ ಹಾಗೂ ಜೈಸಲ್ಮೇರ್ ಗಡಿ ಜಿಲ್ಲೆಗಳಲ್ಲಿ ವಾಸಿಸುವ ಜನರಿಂದ ಸೇನಾ ಮಾಹಿತಿಯನ್ನು ಪಡೆಯುವುದಕ್ಕಾಗಿ 2 ಫೇಸ್‌ಬುಕ್ ಖಾತೆಗಳನ್ನು ನಡೆಸುತ್ತಿದ್ದನೆಂದು ಪೊಲೀಸರಿಂದು ತಿಳಿಸಿದ್ದಾರೆ.
ಗಡಿ ಪ್ರದೇಶದ ತನ್ನ ಮೂಲಗಳೊಂದಿಗೆ ಸಂಪರ್ಕಿಸಲು ತಾನು 2 ಖಾತೆಗಳನ್ನು ಉಪಯೋಗಿಸುತ್ತಿದ್ದೆನೆಂದು ನಂದಲಾಲ್ ಗರ್ಗ್ ಎಂದೂ ಕರೆಯಲಾಗುವ ಗೂಢಚಾರ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ. ಅವುಗಳಲ್ಲೊಂದು ಖಾತೆಯಲ್ಲಾತ ಜೈಸಲ್ಮೇರ್‌ನ ವಿವಿಧ ಸ್ಥಳಗಳಲ್ಲಿ ತೆಗೆದಿದ್ದ ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದನು. ಖಾತೆಯಲ್ಲಿ ಪಾಕಿಸ್ತಾನದ ಕೆಲವು ಪ್ರದೇಶಗಳ ಚಿತ್ರಗಳೂ ಇದ್ದವು.
ಸಾಮಾಜಿಕ ಮಾಧ್ಯಮದಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ಸಂಭಾಷಣೆ ನಡೆಸಬಾರದೆಂದು ಪೊಲೀಸ್ ಅಧೀಕ್ಷಕ ಗೌರವ್ ಯಾದವ್ ಜನರಿಗಿಂದು ಎಚ್ಚರಿಕೆ ನೀಡಿದ್ದಾರೆ. ಶಂಕಿತ ವ್ಯಕ್ತಿಗಳ ಬಗ್ಗೆ ತಿಳಿದು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆಯೂ ಅವರು ಮನವಿ ಮಾಡಿದ್ದಾರೆ.
ನಂದಲಾಲ್ ಮಹಾರಾಜ್‌ನನ್ನು ಈ ತಿಂಗಳ ಆರಂಭದಲ್ಲಿ ರಾಜಸ್ಥಾನದ ಜೈಸಲ್ಮೇರ್‌ನ ಭಾರತ-ಪಾಕ್ ಗಡಿಯಿಂದ ಬಂಧಿಸಲಾಗಿತ್ತು. ಆತನಿಂದ ವರ್ಗೀಕೃತ ಮಾಹಿತಿಯನ್ನು ವಶಪಡಿಸಿಕೊಳ್ಳಲಾಗಿದೆಯೆಂದು ಪೊಲೀಸರು ಪ್ರತಿಪಾದಿಸಿದ್ದಾರೆ.
ನಂದಲಾಲ್ ಪಾಕಿಸ್ತಾನದ ಸಂಗದ್ ಜಿಲ್ಲೆಯ ನಿವಾಸಿಯಾಗಿದ್ದು, ಈ ತಿಂಗಳ ಆರಂಭದಲ್ಲಿ ವೀಸಾದ ಮೇಲೆ ಭಾರತಕ್ಕೆ ಬಂದಿದ್ದನು.







