ಆಧುನಿಕ ಜಗತ್ತಿನಲ್ಲಿ ವಿಸ್ತಾರಗೊಳ್ಳುತ್ತಿರುವ ಕಂಪ್ಯೂಟರ್ ಜ್ಞಾನ: ಡಾ. ಕೆ.ಎಸ್.ಶ್ರೀಧರ್
‘ಅಪ್ಲಿಕೇಶನ್ಸ್ ಆಫ್ ಡಾಟಾ ಸ್ಟ್ರಕ್ಚರ್’ ಕುರಿತ ತರಬೇತಿ ಕಾರ್ಯಾಗಾರ

ಚಿಕ್ಕಮಗಳೂರು, ಆ.27: ಆಧುನಿಕ ಜಗತ್ತಿನಲ್ಲಿ ಕಂಪ್ಯೂಟರ್ ಜ್ಞಾನ ವಿಸ್ತಾರಗೊಳ್ಳುತ್ತಿದ್ದು ಅದನ್ನು ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ದಾವಣಗೆರೆ ಯುಬಿಡಿಟಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಕೆ.ಎಸ್.ಶ್ರೀಧರ್ ಹೇಳಿದ್ದಾರೆ. ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಬಿಜಿಎಸ್ ಸಭಾಂಗಣದಲ್ಲಿ ಶನಿವಾರ ಗಣಕಯಂತ್ರ ವಿಭಾಗದಿಂದ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಸಿಬ್ಬಂದಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನಮಗೆ ಗೊತ್ತಿಲ್ಲದಂತಹ ಅಂಶಗಳನ್ನು ಗಣಕಯಂತ್ರದಲ್ಲಿ ಕ್ಷಣಾರ್ಧದಲ್ಲಿ ಜಾಲಾಡಿ ಮಾಹಿತಿ ಪಡೆಯಬಹುದು. ಅದರಲ್ಲಿ ನಮಗೆ ಬೇಕಾದ ದತ್ತಾಂಶಗಳ ಮಾಹಿತಿ ಸಂಗ್ರಹ ಮಾಡುವುದರ ಜೊತೆಗೆ ನಿರ್ವಹಣೆ ಮಾಡಬಹುದು ಎಂದು ತಿಳಿಸಿದರು. ಗಣಕ ಯಂತ್ರವನ್ನು ಕೇವಲ ಮಾಹಿತಿ ಕಲೆ ಹಾಕಲು ಬಳಸಬೇಕೆ ಹೊರತು ಸಾಮಾಜಿಕ ಜಾಲತಾಣಗಳಲ್ಲಿ ದಿನಗಟ್ಟಲೆ ಕುಳಿತು ಹರಟೆ ಹೊಡೆಯಲು ಉಪಯೋಗಿಸಬಾರದು. ತಂತ್ರಜ್ಞ್ಞಾನ ಮುಂದುವರಿದಂತೆ ಅದರಿಂದ ಆಗುವ ಅನುಕೂಲದ ಜೊತೆಗೆ ಅನಾನುಕೂಲ ಆಗುತ್ತಿದೆ ಎಂದು ಸೂಚ್ಯವಾಗಿ ನುಡಿದರು. ಕೆನರಾ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಡೇಮಿಯನ್ ಅಂಥೋಣಿ ಡಿಮೆಲ್ಲೋ, ದತ್ತಾಂಶಗಳ ನಿರ್ವಹಣೆಗೆ ಮೂಲಭೂತ ಡಾಟಾ ಸ್ಟ್ರಕ್ಚರ್ಸ್‌ಗಳ ಉಪಯೋಗ, ಎಐಟಿ ಕಾಲೇಜು ಪ್ರಾಚಾರ್ಯ ಡಾ.ಸಿ.ಕೆ.ಸುಬ್ಬರಾಯ ಆಧುನಿಕ ಯುಗದಲ್ಲಿ ಡಾಟಾ ಸ್ಟ್ರಕ್ಚರ್ಸ್‌ಗಳ ಸದ್ಬಳಕೆ ಕುರಿತು ಮಾತನಾಡಿದರು.
ವಿದ್ಯಾರ್ಥಿ ಸೂರಜ್ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಗಣಕಯಂತ್ರ ವಿಭಾಗದ ಮುಖ್ಯಸ್ಥೆ ಡಾ.ಪುಷ್ಪಾ ರವಿಕುಮಾರ್ ಸ್ವಾಗತಿಸಿದರು. ಅನನ್ಯ, ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಸಹ ಪ್ರಾಧ್ಯಾಪಕಿ ಎಂ.ಆರ್. ಸುನೀತಾ ವಂದಿಸಿದರು.





