ಪೊಲೀಸ್ ಅಧಿಕಾರಿಯ ದುರ್ವರ್ತನೆ ಖಂಡಿಸಿ, ನ್ಯಾಯಾಂಗ ತನಿಖೆಗೆ ಒತ್ತಾಯ
ಮನವಿ
.jpg)
ಸಾಗರ, ಆ.27: ಚನ್ನರಾಯಪಟ್ಟಣ ನ್ಯಾಯಾಲಯದಲ್ಲಿ ಪೊಲೀಸ್ ಅಧಿಕಾರಿಯೋರ್ವರ ದುರ್ವರ್ತನೆ ಖಂಡಿಸಿ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿ ಶನಿವಾರ ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿ, ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಬಿ.ತ್ಯಾಗಮೂರ್ತಿ, ಚನ್ನರಾಯಪಟ್ಟಣ ನ್ಯಾಯಾಲಯದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ನ್ಯಾಯಾಧೀಶರ ವಿರುದ್ಧ ದುರ್ವರ್ತನೆ ತೋರಿರುವ ಕ್ರಮ ಖಂಡನೀಯ. ಕಾರ್ಯಾಂಗ, ನ್ಯಾಯಾಂಗ ಹಾಗೂ ಶಾಸಕಾಂಗ ಒಟ್ಟಾಗಿ ಹೋದರೆ ಜನರಿಗೆ ಸುಲಭವಾಗಿ ನ್ಯಾಯ ಸಿಗುತ್ತದೆ. ಆದರೆ ಪೊಲೀಸ್ ಅಧಿಕಾರಿ ನ್ಯಾಯಾಲಯದಲ್ಲಿ ದುರ್ವರ್ತನೆ ತೋರಿಸಿದ್ದು ಕಕ್ಷಿದಾರರ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದರು.
ಆ. 24ರಂದು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶರು ನೀಡಿದ ತೀರ್ಪಿನ ವಿರುದ್ಧ ಪೊಲೀಸ್ ಅಧಿಕಾರಿಯೊಬ್ಬರು ದುರ್ವರ್ತನೆ ತೋರಿಸಿದ್ದಾರೆ. ಇಂತಹ ಘಟನೆಗಳಿಂದ ಸಾರ್ವಜನಿಕರಿಗೆ ಕೆಟ್ಟ ಸಂದೇಶ ರವಾನೆಯಾಗುವ ಜೊತೆಗೆ ನ್ಯಾಯದಾನ ಸಮರ್ಪಕವಾಗುವುದಿಲ್ಲ. ಪೊಲೀಸ್ ಇಲಾಖೆ ನ್ಯಾಯಾಲಯದ ಆದೇಶವನ್ನು ಪರಿಪಾಲಿಸುವ ಮೂಲಕ ಕರ್ತವ್ಯ ಹಾಗೂ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದರು.
ಚನ್ನರಾಯಪಟ್ಟಣ ನ್ಯಾಯಾಲಯದಲ್ಲಿ ನಡೆದ ಘಟನೆ ಇಡೀ ರಾಜ್ಯದ ನ್ಯಾಯಾಲಯದಲ್ಲಿ ಕೆಲಸ ಮಾಡುವ ಸಮೂಹದ ಆತಂಕಕ್ಕೆ ಕಾರಣವಾಗಿದೆ. ಈ ಘಟನೆಯ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸುವ ಜೊತೆಗೆ ನ್ಯಾಯಾಂಗ ಇಲಾಖೆ ಹಾಗೂ ನ್ಯಾಯವಾದಿಗಳು ನಿರ್ಭೀತಿಯಿಂದ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ವಕೀಲರ ಸಂಘದ ಪ್ರಮುಖರಾದ ವಿನಯಕುಮಾರ್, ಪ್ರೇಮ್ ಸಿಂಗ್, ಮರಿದಾಸ್, ಕೆ.ಎಂ. ಕರುಣಾಕರ, ವಿ.ಶಂಕರ್, ರಮೇಶ್, ಮಹಾಬಲೇಶ್ವರ್, ಫೈಝುಲ್ಲಾ, ನವೀನಕುಮಾರ್ ಮತ್ತಿತರರಿದ್ದರು.







