ಮಾನಸಿಕ ಅಸ್ವಸ್ಥೆ ಮೇಲೆ ಏಳು ವರ್ಷಗಳಿಂದ ಅತ್ಯಾಚಾರ
ಸಾಗರ, ಆ.27: ಇಲ್ಲಿನ ಶ್ರೀಧರನಗರ ವಾಸಿ ಆರ್.ಕೊಟ್ರಪ್ಪಎಂಬಾತ ಮಾನಸಿಕವಾಗಿ ಅಪ್ರಬುದ್ಧಳಾಗಿದ್ದ ಯುವತಿಯೋರ್ವಳ ಮೇಲೆ ಸತತ ಏಳು ವರ್ಷಗಳಿಂದ ಅತ್ಯಾಚಾರ ನಡೆಸುತ್ತಿದ್ದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಶ್ರೀಧರನಗರದ ವಾಸಿಯಾಗಿದ್ದ ಬಾಲಕಿಯೋರ್ವಳು ತಂದೆಯನ್ನು ಕಳೆದುಕೊಂಡು ತಾಯಿಯ ಜೊತೆ ವಾಸಿಸುತ್ತಿದ್ದಳು. ಬಾಲಕಿಯ ತಂದೆ ಮರಣ ಹೊಂದಿದ ಬಳಿಕ ಅವರ ಮನೆಯ ಹಿಂಭಾಗದಲ್ಲಿ ವಾಸಿಸುತ್ತಿದ್ದ ಸಂಬಂಧಿ ಎಪಿಎಂಸಿಯಲ್ಲಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿರುವ ಆರ್. ಕೊಟ್ರಪ್ಪ ಎಂಬವನು ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದನು. ಬಾಲಕಿ 7ನೆ ತರಗತಿ ಓದುತ್ತಿದ್ದಾಗ ಕೊಟ್ರಪ್ಪ ಅವಳ ಜೊತೆ ಸಲುಗೆಯಿಂದ ಇದ್ದು, ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಐದಾರು ವರ್ಷ ಕೊಟ್ರಪ್ಪನಿಂದ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿದ್ದ ಬಾಲಕಿಗೆ ಈಗ 18 ವರ್ಷ. ಬಾಲಕಿ ಮಾನಸಿಕವಾಗಿ ಅಪ್ರಬುದ್ಧಳಾಗಿರುವುದನ್ನು ಕೊಟ್ರಪ್ಪ ಉಪಯೋಗಿಸಿಕೊಂಡು ನಿರಂತರ ಅತ್ಯಾಚಾರ ನಡೆಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಮಾನಸಿಕವಾಗಿ ತೀವ್ರ ನೊಂದಿದ್ದ ಯುವತಿ, ಶುಕ್ರವಾರ ನಗರ ಠಾಣೆಗೆ ಕೊಟ್ರಪ್ಪವಿರುದ್ಧ ದೂರು ನೀಡಿದ್ದಾಳೆ. ಬಾಲಕಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೊಟ್ರ ಪ್ಪನ ವಿರುದ್ಧ ಫೋಸ್ಕೊ ಕಾಯ್ದೆ ದಾಖಲಿಸಿ, ವಿಚಾರಣೆ ನಡೆಸಿದ್ದಾರೆ.





