ಕೇಂದ್ರದ ಬಡವರ ಪರ ಕಾರ್ಯಸೂಚಿಯ ಅನುಷ್ಠಾನಕ್ಕೆ ಬಿಜೆಪಿ ಸಿಎಂ ಗಳಿಗೆ ಶಾ ಕರೆ
ಹೊಸದಿಲ್ಲಿ,ಆ.27: ಬಿಜೆಪಿಯು ಸಾಧನೆಯ ರಾಜಕೀಯದ ಯುಗದಲ್ಲಿ ಕಾಲಿರಿಸಿದೆ ಎಂದು ಇಲ್ಲಿ ಶನಿವಾರ ಪ್ರತಿಪಾದಿಸಿದ ಪಕ್ಷಾಧ್ಯಕ್ಷ ಅಮಿತ್ ಶಾ ಅವರು, ಕೇಂದ್ರ ಬಡವರ ಪರ ಮತ್ತು ಉತ್ತಮ ಆಡಳಿತ ಕಾರ್ಯಸೂಚಿಯನ್ನು ಅನುಷ್ಠಾನಿಸುವಲ್ಲಿ ತಮ್ಮ ರಾಜ್ಯಗಳನ್ನು ಪರಿಣಾಮಕಾರಿ ಸಾಧನಗಳನ್ನಾಗಿಸುವಂತೆ ಬಿಜೆಪಿ ಆಡಳಿತದ ರಾಜ್ಯಗಳಿಗೆ ಸೂಚಿಸಿದರು.
ದೇಶದ ಶೇ.51ಕ್ಕೂ ಅಧಿಕ ಭೂಭಾಗದಲ್ಲಿ ಮತ್ತು ಶೇ.37ರಷ್ಟು ಜನಸಂಖ್ಯೆಯ ವ್ಯಾಪ್ತಿಯಲ್ಲಿ ಪಕ್ಷವು ಆಡಳಿತ ನಡೆಸುತ್ತಿದೆ ಎಂದ ಅವರು,ಮೋದಿ ಸರಕಾರದ ಅಭಿವೃದ್ಧಿ ನೀತಿಗಳ ಯಶಸ್ಸಿನಲ್ಲಿ ರಾಜ್ಯಗಳು ಮಹತ್ವದ ಪಾತ್ರವನ್ನು ಹೊಂದಿವೆ. ಇಂತಹ 80 ಯೋಜನೆಗಳ ಪ್ಯಕಿ 65 ಯೋಜನೆಗಳ ಅನುಷ್ಠಾನ ರಾಜ್ಯಗಳ ಹೊಣೆಯಾಗಿದೆ ಎಂದರು. ಅವರು ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು,ಉಪ ಮುಖ್ಯಮಂತ್ರಿಗಳು ಮತ್ತು ಪಕ್ಷದ ರಾಜ್ಯಾಧ್ಯಕ್ಷರ ಒಂದು ದಿನದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇದು ಬಿಜೆಪಿಯು 2014,ಮೇ ತಿಂಗಳಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಇಂತಹ ಮೊದಲ ಸಮಾವೇಶ ವಾಗಿದೆ. ಬಿಜೆಪಿಯು ರಾಷ್ಟ್ರದಲ್ಲಿ ಸಾಧನೆಯ ಯುಗವೊಂದನ್ನು ಆರಂಭಿಸಿದೆ. ಸಾಧನೆಯ ಆಧಾರದಲ್ಲಿ ಬಿಜೆಪಿಯ ರಾಜ್ಯ ಸರಕಾರಗಳು ಪುನರಾಯ್ಕೆಗೊಳ್ಳುತ್ತಲೇ ಇವೆ. ಬಡವರ ಪರವಾದ ಅಭಿವೃದ್ಧ ರಾಜ್ಯವನ್ನು ನಿರ್ಮಿಸುವುದು ಮತ್ತು ಶ್ರೀಸಾಮಾನ್ಯನ ಬದುಕಿನಲ್ಲಿ ಬದಲಾವಣೆಗಳನ್ನು ತರುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಜಂಟಿ ಹೊಣೆಗಾರಿಕೆಯಾಗಿದೆ ಎಂದೂ ಶಾ ಹೇಳಿದರು.





