ಧಾರ್ಮಿಕ ಕ್ಷೇತ್ರದ ಬಳಿ ಬಾರ್‌ಗೆ ಪರವಾನಿಗೆ: ದಲಿತ ಸೇವಾ ಸಮಿತಿಯಿಂದ ಹೋರಾಟದ ಎಚ್ಚರಿಕೆ
ಬಂಟ್ವಾಳ, ಆ. 27: ಸಾರ್ವಜನಿಕರ ವಿರೋಧವಿದ್ದರೂ ಕನ್ಯಾನ ಗ್ರಾಮದ ಬಾಳೆಕೋಡಿ ಕಾಶೀ ಕಾಳಬೈರವೇಶ್ವರ ಕ್ಷೇತ್ರದ ಬಳಿ ಬಾರ್ ತೆರೆಯಲು ಪರವಾನಿಗೆ ನೀಡಿರುವ ಗ್ರಾಮ ಪಂಚಾಯತ್‌ನ ಕ್ರಮವನ್ನು ಖಂಡನೀಯವಾಗಿದೆ. ಕೂಡಲೇ ಬಾರ್‌ನ ಪರವಾನಿಗೆಯನ್ನು ರದ್ದುಪಡಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಗೆ ಮನವಿ ಸಲ್ಲಿಸಲಾಗುವುದು. ಆ ಬಳಿಕವೂ ಬಾರ್‌ನ ಪರವಾನಿಗೆ ರದ್ದುಪಡಿಸದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ಹೇಳಿದ್ದಾರೆ.
ಶನಿವಾರ ವಿಟ್ಲದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾರ್‌ಗೆ ನೀಡಿರುವ ಪರವಾನಿಗೆಯನ್ನು ರದ್ದು ಪಡಿಸುವಂತೆ ಕೂಡಲೇ ಸಚಿವ ರಮಾನಾಥ ರೈ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರಿಗೆ ಮನವರಿಕೆ ಮಾಡಬೇಕು. ಕನ್ಯಾನ ಗ್ರಾಪಂನ ಸರ್ವ ಸದಸ್ಯರು ಒಂದೇ ಪಕ್ಷದವರಾಗಿದ್ದು ಇದು ಗ್ರಾಮದ ಜನತೆ ಪಕ್ಷದ ಮೇಲೆ ಇಟ್ಟಿರುವ ಭರವಸೆಯಾಗಿದೆ. ಇದನ್ನು ಅರಿತು ಜನಪ್ರತಿನಿಧಿಗಳು ಕೆಲಸ ನಿರ್ವಹಿಸಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಬಾರ್ ತೆರೆಯಲು ಪರವಾನಿಗೆ ನೀಡಿ ಗ್ರಾಮವನ್ನು ಅಭಿವೃದ್ಧಿ ಪಡಿಸುವ ಬದಲು ಸಾರ್ವಜನಿಕರಿಗೆ ಹಿತವಾಗುವಂತ ಬೇರೆ ಉತ್ತಮ ಯೋಜನೆಗಳನ್ನು ತಂದು ಗ್ರಾಮವನ್ನು ಅಭಿವೃದ್ಧಿ ಪಡಿಸಲು ಜನಪ್ರತಿನಿಧಿಗಳು ಶ್ರಮಿಸಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಯು., ಉಪಾಧ್ಯಕ್ಷೆ ದಿವ್ಯಶ್ರೀ ಕಲ್ಲಜೇರ ಅಳಿಕೆ, ಸಂಚಾಲಕ ಗೋಪಾಲ ನೇರಳಕಟ್ಟೆ, ಕಲಾ ಸಂಘದ ಅಧ್ಯಕ್ಷ ಮೋಹನದಾಸ್ ಯು, ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ಕೋಶಾಧಿಕಾರಿ ಸುಪ್ರೀತ ಪಿಲಿಂಜ, ರಾಮ ಮುಗೇರ ಕಲ್ಲಜೇರ ಅಳಿಕೆ, ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಜಯಪ್ರಸಾದ್, ಸೋಮಪ್ಪ ಸುರುಳಿಮೂಲೆ, ಅಶೋಕ್ ಒಡಿಯೂರು, ದಿನೇಶ್ ಪಟ್ರೆಕಲ್ಲು ಉಪಸ್ಥಿತರಿದ್ದರು.







