ಸಂಶೋಧಕರು ಅಧ್ಯಯನಶೀಲರಾಗಿರಬೇಕು: ಡಾ.ಗೋಪ ಕುಮಾರ್
ವಿ.ವಿ. ಕಾಲೇಜಿನಲ್ಲಿ ಗ್ರಂಥಾಲಯ ದಿನಾಚರಣೆ

ಮಂಗಳೂರು, ಆ.27: ನಿರಂತರ ಅಧ್ಯಯನಶೀಲರಾಗಿದ್ದರೆ ಮಾತ್ರ ಸಂಶೋಧಕರು ಪ್ರಬಂಧ ಮಂಡನೆಯಲ್ಲಿ ಮಹತ್ವದ ವಿಚಾರಗಳನ್ನು ದಾಖಲಿಸಲು ಸಾಧ್ಯವಾಗುತ್ತದೆ ಎಂದು ಗೋವಾ ವಿಶ್ವ ವಿದ್ಯಾನಿಲಯದ ಗ್ರಂಥಪಾಲಕ ಡಾ.ಗೋಪ ಕುಮಾರ್ ಅಭಿಪ್ರಾಯಪಟ್ಟರು.
ಗ್ರಂಥಾಲಯ ಪಿತಾಮಹಾ ಡಾ.ಎಸ್.ಆರ್.ರಂಗನಾಥನ್‌ರ ಸಂಸ್ಮರಣಾರ್ಥ ನಗರದ ಹಂಪನಕಟ್ಟೆಯ ಮಂಗಳೂರು ವಿವಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಗ್ರಂಥಾಲಯ ದಿನಾಚರಣೆಯಲ್ಲಿ ‘ಸಂಶೋಧನಾ ಬರವಣಿಗೆ’ ಕುರಿತು ಅವರು ಉಪನ್ಯಾಸ ನೀಡಿದರು.
ಸಂಶೋಧಕರು ಪ್ರಬಂಧಗಳಲ್ಲಿ ಹೊಸತನವನ್ನು ತರಲು ಪ್ರಯತ್ನಿಸುವ ಮೂಲಕ ತಮ್ಮ ಪ್ರಬಂಧ ಇತರ ಸಂಶೋಧನೆಗಳಿಗಿಂತ ಭಿನ್ನ ಎಂಬುದನ್ನು ತೋರಿಸಿಕೊಡಬೇಕು. ಸಂಶೋಧನೆಯಲ್ಲಿ ಕೃತಿ ಚೌರ್ಯ ಸಲ್ಲದು. ಸ್ವತಂತ್ರ ಅಧ್ಯಯನ, ಸಂಶೋಧನಾತ್ಮಕ ಚಿಂತನಾ ಕ್ರಮ ಸಂಶೋಧಕನಿಗೆ ಅತಿಮುಖ್ಯ ಎಂದು ಡಾ. ಗೋಪ ಕುಮಾರ್ ವಿವರಿಸಿದರು.
ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಉದಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಗ್ರಂಥಪಾಲಕಿ ವನಜಾ ಉಪಸ್ಥಿತರಿದ್ದರು.
Next Story





