ಹಳಿ ತಪ್ಪಿದ ತಿರುವನಂತಪುರಂ-ಮಂಗಳೂರು ಎಕ್ಸ್ ಪ್ರೆಸ್ ರೈಲು, ತಪ್ಪಿದ ಭಾರೀ ದುರಂತ

ತಿರುವನಂತಪುರಂ, ಆ.28: ಕೇರಳದ ತಿರುವನಂತಪುರದಿಂದ ಮಂಗಳೂರಿಗೆ ಹೋಗುತ್ತಿದ್ದ ಎಕ್ಸ್ ಪ್ರೆಸ್ ರೈಲೊಂದು ಕರುಕುಟ್ಟಿ ನಿಲ್ದಾಣದ ಬಳಿ ರವಿವಾರ ಬೆಳಗ್ಗಿನ ಜಾವ 2:30ಕ್ಕೆ ಹಳಿತಪ್ಪಿದ್ದು, 12 ಬೋಗಿಗಳು ಮುಗುಚಿ ಬಿದ್ದಿದೆ. ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ತೊಂದರೆಗೊಳಗಾಗಿರುವ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಲಾಗಿದ್ದು, ಈ ಮಾರ್ಗದಲ್ಲಿ ಸಂಚರಿಸಬೇಕಾದ ಕೆಲವು ರೈಲುಗಳ ಪಥ ಬದಲಿಸಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ತಿರುವನಂತಪುರ-ಮುಂಬೈ, ಕನ್ಯಾಕುಮಾರಿ-ಬೆಂಗಳೂರು, ಆಲಪುಳ-ಧನ್ಬಾದ್, ತಿರುವನಂತಪುರ-ಗೋರಕ್ಪುರ ರಪ್ತಿಸಾಗರ್, ತಿರುವನಂತಪುರ-ಹೈದರಾಬಾದ್ ಶತಾಬ್ಜಿ ಎಕ್ಸ್ ಪ್ರೆಸ್ ರೈಲುಗಳ ಪಥ ಸಂಚಾರವನ್ನು ಬದಲಿಸಲಾಗಿದೆ. ಅಮೃತಾ ಎಕ್ಸ್ ಪ್ರೆಸ್, ನಿಲಂಬೂರ್ ರಾಜ್ಯರಾಣಿ ಎಕ್ಸ್ ಪ್ರೆಸ್, ಎಗ್ಮೋರ್ - ಗುರುವಾಯೂರ್ ಎಕ್ಸ್ ಪ್ರೆಸ್ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ದಕ್ಷಿಣ ರೈಲ್ವೆ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೈಲ್ವೆ ಇಲಾಖೆಯ ಸಹಾಯವಾಣಿ ಸಂಖ್ಯೆ: 0471-2320012 ಮತ್ತು 9746769960.





