ಮೃತ ಉಗ್ರ ಬುರ್ಹಾನ್ ವಾನಿಯ ತಂದೆ ರವಿಶಂಕರ್ ಆಶ್ರಮದಲ್ಲಿ!

ಬೆಂಗಳೂರು, ಆ.28: ಜಮ್ಮು-ಕಾಶ್ಮೀರದಲ್ಲಿ ಜು.8ರಂದು ಭದ್ರತಾ ಪಡೆಗಳಿಗೆ ಬಲಿಯಾಗಿದ್ದ ಭಯೋತ್ಪಾದಕ ಬುರ್ಹಾನ್ ವಾನಿಯ ತಂದೆ ಶನಿವಾರ ಆಧ್ಯಾತ್ಮ ಗುರು ಶ್ರೀಶ್ರೀ ರವಿಶಂಕರ್‌ರನ್ನು ಬೆಂಗಳೂರಿನ ಆಶ್ರಮದಲ್ಲಿ ಭೇಟಿಯಾಗಿದ್ದಾರೆ.
ಆರ್ಟ್ ಆಫ್ ಲಿವಿಂಗ್‌ನ ಸ್ಥಾಪಕ ರವಿಶಂಕರ್, ಶನಿವಾರ ಸಂಜೆ ಅವರೊಂದಿಗಿದ್ದ ಫೊಟೊ ಒಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಬುರ್ಹಾನ್ ವಾನಿಯ ತಂದೆ ಮುಝಫ್ಫರ್ ವಾನಿ ಎರಡು ದಿನಗಳಿಂದ ಆಶ್ರಮದಲ್ಲಿದ್ದಾರೆ. ತಾವು ಅನೇಕ ವಿಷಯಗಳ ಬಗ್ಗೆ ಮಾತನಾಡಿದೆವೆಂದು ಬರೆದಿದ್ದಾರೆ.
ಈ ಭೇಟಿಯ ಸುದ್ದಿಯನ್ನು ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನವೂ ಮರುಟ್ವೀಟ್ ಮಾಡಿದೆ.
ಮುಝಫ್ಫರ್ ವಾನಿ 2 ದಿನಗಳಿಂದ ಆಶ್ರಮದಲ್ಲಿದ್ದಾರೆ. ಖಂಡಿತವಾಗಿಯೂ ಶ್ರೀಶ್ರೀ ಹಾಗೂ ವಾನಿ, ಕಾಶ್ಮೀರದ ಹಾಲಿ ಪರಿಸ್ಥಿತಿ, ಬವಣೆ ಹಾಗೂ ಕಣಿವೆಯಲ್ಲಿ ಹೇಗೆ ಶಾಂತಿ ಹಾಗೂ ಸಹಜತೆಯನ್ನು ಮರುಸ್ಥಾಪಿಸಬಹುದು ಎಂಬುದರ ಕುರಿತು ಚರ್ಚಿಸಿದ್ದಾರೆ. ಇದು ಶುದ್ಧ ವೈಯಕ್ತಿಕ ಹಾಗೂ ಮಾನವೀಯ ನೆಲೆಯ ಭೇಟಿಯಾಗಿದೆಯೆಂದು ಆರ್ಟ್ ಆಫ್ ಲಿವಿಂಗ್‌ನ ಹೇಳಿಕೆ ತಿಳಿಸಿದೆ.
ತಾನಲ್ಲಿಗೆ ಚಿಕಿತ್ಸೆಗಾಗಿ ಹೋಗಿದ್ದೆ. ಯಾವುದೋ ಕಾಯಿಲೆಯ ಚಿಕಿತ್ಸೆಗಾಗಿ ತಾನಲ್ಲಿ 2 ದಿನಗಳ ಕಾಲ ಉಳಿದುಕೊಂಡಿದ್ದೆ. ಶ್ರೀಶ್ರೀ ತನ್ನಲ್ಲಿ ಬೇರೇನನ್ನೂ ಕೇಳಿಲ್ಲ. ಅವರು ತನ್ನಲ್ಲಿ ಕೇವಲ 5 ನಿಮಿಷಗಳ ಕಾಲ ಮಾತನಾಡಿದರು. ತಾನು ಕೆಲವು ಔಷಧಗಳೊಂದಿಗೆ ಮರಳಿ ಬಂದಿದ್ದೇನೆ ಎಂದು ಬೆಂಗಳೂರಿನಿಂದ ಕಾಶ್ಮೀರದ ಟ್ರಾಲ್‌ನ ತನ್ನ ಮನೆಗೆ ಆಗಮಿಸಿದ ಬಳಿಕ ವಾನಿ, ‘ಕಾಶ್ಮೀರ್ ರೀಡರ್’ ಗೆ ದೂರವಾಣಿಯ ಮೂಲಕ ಹೇಳಿದ್ದಾರೆ.







