ಸ್ವಾಭಿಮಾನದ ಕೊರತೆಯಿಂದ ಒಕ್ಕಲಿಗರು ಮೂಲೆಗುಂಪು: ನಂಜಾವಧೂತ ಸ್ವಾಮಿ ಕಳವಳ
‘ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಪುನರ್ ಪರಿಶೀಲಿಸಿ’

ಬೆಂಗಳೂರು, ಆ.28: ಒಕ್ಕಲಿಗ ಸಮುದಾದವರಲ್ಲಿನ ಬದ್ಧತೆ, ಸ್ವಾಭಿಮಾನದ ಕೊರತೆಯಿಂದಾಗಿ ಪ್ರಸಕ್ತ ವ್ಯವಸ್ಥೆಯಲ್ಲಿ ಒಕ್ಕಲಿಗರು ಮೂಲೆ ಗುಂಪಾಗಿದ್ದಾರೆ ಎಂದು ಪಟ್ಟನಾಯನಕಹಳ್ಳಿಯ ಸ್ಪಟಿಕಪುರಿ ಮಠದ ನಂಜಾವಧೂತ ಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ರಾಜ್ಯ ಒಕ್ಕಲಿಗರ ಒಕ್ಕೂಟ ಟ್ರಸ್ಟ್ ಆಯೋಜಿಸಿದ್ದ ಜಾನಪದ ಉತ್ಸವ, ಹಿರಿಯ ಸಾಧಕರಿಗೆ ಸನ್ಮಾನ, ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಒಕ್ಕಲಿಗರಲ್ಲಿನ ಸಣ್ಣ ಸಮಸ್ಯೆ ಮತ್ತು ನ್ಯೂನತೆಗಳನ್ನ ಗಮನಿಸಿಯೇ ಸಮಾಜ ನಮ್ಮನ್ನು ಕಡೆಗಣಿಸಲಾಗುತ್ತಿದೆ.ಎಲ್ಲಾ ಜನಾಂಗಗಳಲ್ಲಿನ ಸಾಧಕ-ಸುಧಾರಕರ ಹೆಸರಿನಲ್ಲಿ ಸರಕಾರವೇ ಜಯಂತಿ ಆಚರಣೆ ಮಾಡುತ್ತದೆ. ಆದರೆ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆಗೆ ಅಸಡ್ಡೆ ತೋರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು
ರಾಜ್ಯದಲ್ಲಿ ಎಲ್ಲ ವರ್ಗಗಳಿಗೂ ಎಲ್ಲ ರೀತಿಯಾದ ಭಾಗ್ಯಗಳನ್ನು ನೀಡಿದೆ. ಆದರೆ ಸರಕಾರ ರೈತರಿಗೆ(ಒಕ್ಕಲಿಗರಿಗೆ) ಯಾವ ಭಾಗ್ಯವೂ ಕೊಟ್ಟಿಲ್ಲ. ಬದಲಿಗೆ ರೈತರ ವಿರುದ್ಧ ಪಿತೂರಿ ನಡೆಸಿ ಅವರನ್ನು ಒಕ್ಕಲೇಬಿಸಲಾಗುತ್ತಿದೆ.ಭ್ರಷ್ಟಾಚಾರ,ಕೊಲೆ ಯತ್ನ ಪ್ರಕರಣಗಳಲ್ಲಿ ಅಮಾಯಕ ರೈತರನ್ನು ಬಂಧಿಸಲಾಗುತ್ತಿದೆ ಎಂದು ದೂರಿದರು.
ಮೀಸಲಾತಿಯಲ್ಲಿ ಅನ್ಯಾಯ: ನಮ್ಮಲ್ಲಿಯೂ ಬಡವ, ನಿರ್ಗತಿಕ, ಅಸಹಾಯಕರಿದ್ದಯ ಪ್ರತಿಭಾವಂತರು ಇದ್ದಾರೆ. ಆದರೆ, ಮೀಸಲಾತಿಯಲ್ಲಿ ನಮಗೆ ಅನ್ಯಾಯ ಮಾಡಲಾಗಿದೆ. ನಮಗೂ ಸೂಕ್ತ ಮೀಸಲಾತಿಯನ್ನು ಸರಕಾರ ಕಲ್ಪಿಸಬೇಕು. ಇಲ್ಲವಾದಲ್ಲಿ ಗುಜರಾತ್‌ನ ‘ಜಾಟ್’ ಜನಾಂಗದ ಮಾದರಿಯಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಮೀಕ್ಷೆ ಪುನರ್ ಪರಿಶೀಲಿಸಲಿ: ದೇಶದಲ್ಲಿ ಮತ್ತು ರಾಜ್ಯದಲ್ಲಿ ಒಕ್ಕಲಿಗರೆ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೆ, ರಾಜ್ಯ ಸರಕಾರ ನಡೆಸಿರುವ ಶೈಕ್ಷಣಿಕ,ಸಾಮಾಜಿಕ ಸಮೀಕ್ಷೆಯಲ್ಲಿ ಗಣತಿ ಸರಿಯಾಗಿ ನಡೆದಿಲ್ಲ. ಸಮೀಕ್ಷೆಯಿಂದ ಸೋರಿಕೆಯಾಗಿರುವ ಅಂಕಿ-ಅಂಶಗಳನ್ನು ನಂಬುವಂತದಲ್ಲ. ಕೂಡಲೆ ಈ ಸಮೀಕ್ಷೆಯನ್ನು ಸರಕಾರ ಪುನರ್ ಪರಿಶೀಲಿಸಬೇಕೆಂದು ಒತ್ತಾಯಿಸಿದರು.
ಟ್ರಸ್ಟ್‌ನ ಗೌರವಾಧ್ಯಕ್ಷ ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಸ್ವಾತಂತ್ರ ಹೋರಾಟಗಾರ ಸಂಗ್ಗೊಳ್ಳಿ ರಾಯಣ್ಣನ ಹೆಸರನ್ನು ರಾಜಕೀಯ ಲಾಭಕ್ಕೆ ದುರಪಯೋಗ ಪಡಿಸಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ರಾಯಣ್ಣ ಬ್ರಿಗೇಡ್ ಕಟ್ಟುವುದೆ ಆದರೆ, ಬ್ರಿಗೇಡ್ ಹೆಸರಿನಲ್ಲಿ ಕಾಶ್ಮೀರ ರಕ್ಷಣೆಗೆ ಹೋರಾಟ ಮಾಡೋಣ ಬದಲಾಗಿ ರಾಜಕಾರಣಕ್ಕೆ ರಾಯಣ್ಣ ನ ಹೆಸರು ಕಟ್ಟುವುದು ಬೇಡ ಎಂದರು.
ಮೀಸಲಾತಿಯಲ್ಲಿ 20 ವರ್ಷಗಳಲ್ಲಿ ಒಕ್ಕಲಿಗರೇ ಭಾರಿ ಹಿನ್ನಡೆಯಾಗಿದೆ. ಇದರಿಂದ ಪ್ರತಿಭಾವಂತರು ಅವಕಾಶ ವಂಚಿತರಾಗಿದ್ದಾರೆಂದು ಬೇಸರ ವ್ಯಕ್ತಪಡಿಸಿದ ಅವರು, ನಾವೂ ಎಲ್ಲ ಜಾತಿಗಳನ್ನು ಸಮಸ್ತ ಹಿಂದೂಗಳೆಂದು ಸ್ವೀಕಾರ ಮಾಡುತ್ತಿವೆ. ಆದರೆ ನಮ್ಮನ್ನು ಸಮಾಜದಲ್ಲಿ ನಿರ್ಲಕ್ಷ ಮಾಡಲಾಗುತ್ತಿದೆ. ನಮ್ಮ ಜನಾಂಗದ ಸಾಧಕರು ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಶ್ರಮಿಸಿರುವ ಕುರಿತು ದಾಖಲೆಗಳಲ್ಲಿ ಉಲ್ಲೇಖಿಸಿದರೂ ಅವರು ಸಾಧನೆಗಳು ಕಾಲ ಕ್ರಮೇಣ ಗೌಣವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಪಿ.ಎನ್.ಸದಾಶಿವ, ನಟ ಶ್ರೀನಗರ ಕಿಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ, ಜೆಡಿಎಸ್‌ನ ಮೋಹನ್ ಕುಮಾರ್, ಸಮಾಜ ಸೇವಕ ಡಾ.ರವೀಂದ್ರ ಕೆ.ಲಕ್ಕಪ್ಪ, ಸಂಖ್ಯಾಶಾಸ್ತ್ರ ತಜ್ಞ ಆರ್ಯವರ್ಧನ್ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು.
ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು. ಈ ವೇಳೆ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ತಿಮ್ಮಯ್ಯ, ಅಧ್ಯಕ್ಷ ಸಿ.ವಿ.ದೇವರಾಜ್, ಪ್ರಧಾನ ಕಾರ್ಯದರ್ಶಿ ಆರ್. ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.





