ಶೌಚಾಲಯಕ್ಕಾಗಿ ಉಪವಾಸ ಕೈಗೊಂಡಿದ್ದ ಕೊಪ್ಪಳದ ಮಲ್ಲಮ್ಮನನ್ನು ಪ್ರಶಂಸಿಸಿದ ಮೋದಿ

ಹೊಸದಿಲ್ಲಿ,ಆ.28: ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ತನ್ನ ಮಾಸಿಕ ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ಶೌಚಾಲಯ ನಿರ್ಮಾಣದ ಬೇಡಿಕೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆಯನ್ನು ನಡೆಸಿದ್ದ ಕರ್ನಾಟಕದ ಶಾಲಾ ಬಾಲಕಿಯೋರ್ವಳನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪುರ ಗ್ರಾಮದ 16ರ ಹರೆಯದ ಮಲ್ಲಮ್ಮ ಪೋಷಕರ ವಿರೋಧದ ನಡುವೆಯೂ ತನ್ನ ಮನೆಯಲ್ಲಿ ಶೌಚಾಲಯ ನಿರ್ಮಾಣದ ಬೇಡಿಕೆಯೊಂದಿಗೆ ಪ್ರತಿಭಟನೆಯಲ್ಲಿ ತೊಡಗಿದ್ದಳು. ಮನ್ ಕಿ ಬಾತ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿದ ಪ್ರಧಾನಿ ಮೋದಿ ಅವರು, ಮಲ್ಲಮ್ಮ ಸತ್ಯಾಗ್ರಹ ನಡೆಸಿದ್ದು ಊಟ, ಬಟ್ಟೆ, ತಿಂಡಿಗಾಗಿ ಅಲ್ಲ. ಮನೆಯಲ್ಲಿ ಶೌಚಾಲಯ ನಿರ್ಮಿಸುವಂತೆ ಒತ್ತಾಯಿಸಿದ್ದಳು. ಆದರೆ ಅವಳ ಹೆತ್ತವರು ಬಡವರಾಗಿದ್ದು, ಮಗಳ ಬೇಡಿಕೆಯನ್ನು ಈಡೇರಿಸಲು ಅವರಿಗೆ ಸಾಧ್ಯವಿರಲಿಲ್ಲ. ಆದರೆ, ಸ್ಥಳೀಯ ಗ್ರಾಮ ಪ್ರಧಾನರ ಸಹಾಯದಿಂದ ಶೌಚಾಲಯ ನಿರ್ಮಿಸಿ ಎಲ್ಲರಿಗೂ ಆದರ್ಶಪ್ರಾಯವಾಗಿದ್ದಾಳೆ’’ ಎಂದರು.
ಮೋದಿ ಪ್ರಶಂಸೆಗೆ ಪಾತ್ರನಾದ ಗ್ರಾಮ ಪ್ರಧಾನ
ಮಲ್ಲಮ್ಮಳ ಮನೆಯಲ್ಲಿ ಶೌಚಾಲಯವನ್ನು ನಿರ್ಮಿಸಿದ್ದಕ್ಕಾಗಿ ಡಣಾಪುರ ಗ್ರಾಮ ಪ್ರಧಾನ ಮೊಹಮ್ಮದ್ ಸಯೀದ್ ಶಫಿ ಅವರನ್ನೂ ಮೋದಿ ಮುಕ್ತಕಂಠದಿಂದ ಹೊಗಳಿದ್ದಾರೆ.
ಶೌಚಾಲಯ ನಿರ್ಮಾಣದ ಬೇಡಿಕೆಯನ್ನು ಮುಂದಿಟ್ಟುಕೊಂಡು ಮಲ್ಲಮ್ಮ ಪ್ರತಿಭಟನೆ ನಡೆಸಿದ್ದ ವಿಷಯ ಶಫಿಯವರಿಗೆ ಗೊತ್ತಾದಾಗ, ಮಲ್ಲಮ್ಮನ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ 18,000 ರೂ.ಗಳ ವ್ಯವಸ್ಥೆ ಮಾಡಿದ್ದರು.
ತಮ್ಮ ಹುಟ್ಟುಹಬ್ಬಗಳಿಗೆ ಹಣವನ್ನು ವ್ಯಯಿಸುವ ಬದಲು ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವಂತೆ ಕೋರಿಕೊಂಡು ತಮ್ಮ ಹೆತ್ತವರಿಗೆ ಪತ್ರಗಳನ್ನು ಬರೆದಿದ್ದಕ್ಕಾಗಿ ಛತ್ತೀಸ್‌ಗಡದ ಕಬೀರ್‌ಧಾಮ್ ಜಿಲ್ಲೆಯ 1,700 ಶಾಲೆಗಳ 1.25 ಲ.ವಿದ್ಯಾರ್ಥಿಗಳನ್ನೂ ಮೋದಿ ತನ್ನ ಭಾಷಣದಲ್ಲಿ ಹೊಗಳಿದರು.







