ಸ್ಮೃತಿ ಇರಾನಿಯ ಸೀರೆಯ ಲಕ್ಷಗಟ್ಟಲೆ ಬಿಲ್ ಪಾವತಿಸಲು ನಿರಾಕರಣೆ
ಪ್ರಧಾನಿ ಕಚೇರಿ ತಲುಪಿದ ಜವಳಿ ಸಚಿವೆ-ಕಾರ್ಯದರ್ಶಿ ಜಟಾಪಟಿ

ಹೊಸದಿಲ್ಲಿ,ಆ.28: ಮಾಜಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿಯವರು ವಿವಿಧ ವಿಷಯಗಳ ಕುರಿತು, ಅದು ಟ್ವಿಟರ್‌ನಲ್ಲಿ ಮೂದಲಿಕೆಯಾಗಿರಲಿ ಅಥವಾ ಹೈದ್ರಾಬಾದ್ ವಿವಿಯ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣವಾಗಿರಲಿ..,ವಿವಾದಗಳನ್ನು ಸೃಷ್ಟಿಸುವ ಮೂಲಕ ಆಗಾಗ್ಗೆ ಮಾಧ್ಯಮಗಳಲ್ಲಿ ಸುದ್ದಿಗೆ ಗ್ರಾಸವಾಗುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ ಅವರ ಖಾತೆಯನ್ನು ಬದಲಿಸಿ ಜವಳಿ ಸಚಿವೆಯನ್ನಾಗಿ ಮಾಡಿದ್ದಾರೆ.
ಜವಲಿ ಸಚಿವಾಲಯದಲ್ಲಿನ ಮೂಲಗಳನ್ನು ನಂಬುವುದಾದರೆ ಸ್ಮತಿ ಇತ್ತೀಚಿಗೆ ತನ್ನ ಸಚಿವಾಲಯದ ಕಾರ್ಯದರ್ಶಿಯಾಗಿರುವ ಹಿರಿಯ ಐಎಎಸ್ ಅಧಿಕಾರಿ ರಷ್ಮಿ ವರ್ಮಾ ಜೊತೆ ಜಟಾಪಟಿ ಮಾಡಿಕೊಂಡಿದ್ದಾರೆ. ವರ್ಮಾ ಈ ಬಗ್ಗೆ ಸಂಪುಟ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದು,ವಿಷಯ ಮೋದಿಯವರ ಕಿವಿಗೂ ಬಿದ್ದಿದೆಯೆನ್ನಲಾಗಿದೆ.
ತನ್ಮಧ್ಯೆ ವರ್ಮಾ ಅವರು, ಸ್ಮತಿಯವರ ಇದೇ ಧೋರಣೆ ಮುಂದುವರಿದರೆ ಅವರೊಂದಿಗೆ ಒಂದೇ ಇಲಾಖೆಯಲ್ಲಿ ಕೆಲಸ ಮಾಡುವುದು ತನಗೆ ಕಷ್ಟವಾಗುತ್ತದೆ ಎಂದು ಹಿರಿಯ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದಾರೆ.
ಈ ಜಟಾಪಟಿಗೆ ಕಾರಣವಿಲ್ಲಿದೆ. ಸ್ಮೃತಿ ಇತ್ತೀಚಿಗೆ ಜವಳಿ ಸಚಿವಾಲಯವು ನಡೆಸುತ್ತಿರುವ ಗುಡಿ ಕೈಗಾರಿಕೆಯೊಂದಕ್ಕೆ ಪರಿಶೀಲನೆಗಾಗಿ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅಲ್ಲಿಯ ಶೋರೂಮ್‌ನಿಂದ ಕೆಲವು ದುಬಾರಿ ಸೀರೆಗಳು ಮತ್ತು ಗಣೇಶನ ವಿಗ್ರಹವೊಂದನ್ನು ಖರೀದಿಸಿದ್ದರು. ಸಚಿವೆಯ ಈ ಶಾಪಿಂಗ್ ಬಿಲ್‌ನ ಮೊತ್ತ ಸುಮಾರು ಎಂಟು ಲ.ರೂ.ಗಳಾಗಿದ್ದವು ಎಂದು ಮೂಲಗಳು ಹೇಳಿವೆ.
ಇಷ್ಟಾದ ಬಳಿಕ ಸ್ಮತಿಯವರ ಆಪ್ತ ಸಹಾಯಕ ಈ ಬಿಲ್ ಪಾವತಿಸುವಂತೆ ಜವಳಿ ಕಾರ್ಯದರ್ಶಿ ವರ್ಮಾರಿಗೆ ಕಳುಹಿಸಿದ್ದ. ಆದರೆ ಸೀರೆಗಳು ಮತ್ತು ವಿಗ್ರಹವನ್ನು ಸಚಿವೆ ತನ್ನ ಖಾಸಗಿ ಬಳಕೆಗಾಗಿ ಖರೀದಿಸಿದ್ದಾರೆ,ಹೀಗಾಗಿ ಈ ಬಿಲ್ ಮೊತ್ತವನ್ನು ಸರಕಾರವು ಪಾವತಿಸುವ ಪ್ರಶ್ನೆಯೇ ಇಲ್ಲ ಎಂದು ವರ್ಮಾ ಖಡಾಖಂಡಿತವಾಗಿ ಹೇಳಿದ್ದರು.
ವರ್ಮಾರ ಹೇಳಿಕೆಯಿಂದ ಕೆರಳಿದ ಸ್ಮೃತಿ, ಇಲಾಖೆಯ ಸಚಿವೆಯಾಗಿ ಸಚಿವಾಲಯದ ಅಧೀನದಲ್ಲಿರುವ ಗುಡಿ ಕೈಗಾರಿಕೆಯು ತಯಾರಿಸುವ ಬಟ್ಟೆಗಳನ್ನು ಧರಿಸುವ ಹಕ್ಕು ತನಗೆ ಇದೆ. ಇದರ ಬಿಲ್ ಪಾವತಿ ಸಮಸ್ಯೆಯಾಗಬಾರದು ಎಂದಿದ್ದಾರೆ.
ಇಡೀ ಪ್ರಹಸನ ಈ ಇಬ್ಬರು ಗಣ್ಯ ಮಹಿಳೆಯರ ನಡುವೆ ಕಚ್ಚಾಟಕ್ಕೆ ಕಾರಣವಾಗಿದೆ. ವರ್ಮಾ ಸಂಪುಟ ಕಾರ್ಯದರ್ಶಿಗೆ ಆಪ್ತ ಸಹಾಯಕರು ಎಂದೇ ಪರಿಗಣಿಸಲಾಗಿದೆ. ಅವರು ಪಿಎಂಒಗೂ ಈ ಬಗ್ಗೆ ದೂರು ಸಲ್ಲಿಸಿದ್ದಾರೆನ್ನಲಾಗಿದೆ.
ತನ್ಮಧ್ಯೆ ಸಚಿವೆ ಮತ್ತು ಕಾರ್ಯದರ್ಶಿ ನಡುವೆ ಯಾವುದೇ ಜಟಾಪಟಿಯನ್ನು ಸ್ಮತಿಯವರ ನಿಕಟವರ್ತಿಗಳು ತಳ್ಳಿಹಾಕಿದ್ದಾರೆ. ಕೆಲವರು ಸ್ಮತಿಯವರ ವರ್ಚಸ್ಸಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ, ಹೀಗಾಗಿ ಅವರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.





