ಸಾಹಿತ್ಯ, ಸಂಸ್ಕೃತಿ, ಶಿಕ್ಷಣದಿಂದ ಸಮಾಜದ ಏಳಿಗೆ: ತೇಜೇಶ್ವ್ವರಿ
 mdg news ph 1.jpg)
ಮೂಡಿಗೆರೆ, ಆ.28: ಮನುಷ್ಯ ಮನುಷ್ಯನ ನಡುವೆ ಪ್ರೀತಿ ಇರಬೇಕು. ಆಗ ಮಾತ್ರ ಈ ಸಮಾಜದಲ್ಲಿ ಪ್ರತಿಯೊಬ್ಬರೂ ಒಳ್ಳೆಯವರಾಗಿ ಸಹಬಾಳ್ವೆ ನಡೆಸಲು ಸಾಧ್ಯ ಎಂದು ಸಾಹಿತಿ ರಾಜೇಶ್ವರಿ ತೇಜಸ್ವಿ ಅಭಿಪ್ರಾಯಪಟ್ಟರು.
ಯುರೇಕಾ ಅಕಾಡಮಿ ವತಿಯಿಂದ ಪಟ್ಟಣದಲ್ಲಿ ಶಿಕ್ಷಣ ಮತ್ತು ಉದ್ಯೋಗ ಮಾರ್ಗದರ್ಶನ ಸಂಸ್ಥೆಯ ಮೂಡಿಗೆರೆ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಏಳಿಗೆಯನ್ನು ಕಾಣಬೇಕಾದರೆ ಸಾಹಿತ್ಯ, ಸಂಸ್ಕೃತಿ ಹಾಗೂ ಶಿಕ್ಷಣದಿಂದ ಮಾತ್ರ ಸಾಧ್ಯ. ಇಂತಹ ಪ್ರಮುಖ ಅಂಶಗಳಿಂದ ದೂರವಿದ್ದರೆ ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಿ ಬದುಕಲು ಸಾಧ್ಯವಾಗುವುದಿಲ್ಲ ಎಂದರು.
ಮಾನವ ತನ್ನ ಸ್ವಾರ್ಥಕ್ಕಾಗಿ ಪರಿಸರ ನಾಶಪಡಿಸುತ್ತಿದ್ದಾನೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ತೀವ್ರ ರೀತಿಯಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಮಾನವೀಯ ವೌಲ್ಯಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಪರಿಸರವನ್ನು ಉಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ವಿ.ಎಸ್.ಶಾಲೆಯ ಆಡಳಿತಾಧಿಕಾರಿ ವಿಶ್ವನಾಥ್ ರೈ ಮಾತನಾಡಿ, ಪ್ರತಿಯೊಂದು ಮಗುವೂ ಸಮಾಜದಲ್ಲಿ ಒಳ್ಳೆಯ ಹಾಗೂ ಕೆಟ್ಟವನಾಗಿ ಪರಿವರ್ತನೆಯಾಗಲು ಬೆಳೆಯುವ ವಾತಾವರಣ ಮುಖ್ಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದಿಸೆಯಿಂದಲೆ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಒಳ್ಳೆಯ ಗುರಿಯನ್ನಿಟ್ಟುಕೊಂಡು ಮುನ್ನಡೆಯಬೇಕು. ಸಜ್ಜನರ ಸಹವಾಸ ಹೆಚ್ಚಾಗಿ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆದರೆ ಈ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ಗುರಿ ಮುಟ್ಟಲೆಂದೇ ಅನೇಕ ವಿದ್ಯಾ ಸಂಸ್ಥೆಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗ ಮಾರ್ಗದರ್ಶನ ತರಬೇತಿ ನೀಡಲಾಗುತ್ತಿದೆ. ಮೂಡಿಗೆರೆಯಲ್ಲಿ ಇಂತಹ ಒಂದು ಸಂಸ್ಥೆ ಪ್ರಾರಂಭವಾಗಿರುವುದು ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಇಂತಹ ಸಂಸ್ಥೆಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಅಕಾಡಮಿ ಪ್ರಾಂಶುಪಾಲ ದೀಪಕ್ ದೊಡ್ಡಯ್ಯ, ಜನಜಾಗೃತಿ ಸಮಿತಿಯ ಜಿಲ್ಲಾಧ್ಯಕ್ಷ ಚಿಪ್ರಗುತ್ತಿ ಪ್ರಶಾಂತ್, ನೇಚರ್ ಕ್ಲಬ್ ಕಾರ್ಯದರ್ಶಿ ಧನಂಜಯ ಜೀವಾಳ, ಪತ್ರಕರ್ತ ಎಂ.ಜಿ.ದಿನೇಶ್, ಸಿಪಿಐ ಪಕ್ಷದ ಮುಖಂಡ ಲಕ್ಷ್ಮಣ್ ಕುಮಾರ್, ವಿನೋದ್ ಕಣಚೂರು ಮತ್ತಿತರರು ಉಪಸ್ಥಿತರಿದ್ದರು.







