ಕಡೂರು: ಸೇವಾ ದೀಕ್ಷಾ ಸಮಾರಂಭ

ಕಡೂರು, ಆ.28: ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಮಾಯಾವಾಗಿ ವಿಭಕ್ತ ಕುಟುಂಬಗಳಾಗುತ್ತಿರುವುದು ಆಘಾತಕಾರಿ ವಿಚಾರ ಎಂದು ಆರ್ಯವೈಶ್ಯ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಶೇಷಾಚಲ ಹೇಳಿದರು.
ಅವರು ಪಟ್ಟಣದ ವಾಸವಿ ಕಲ್ಯಾಣಮಂಟಪದಲ್ಲಿ ಏರ್ಪಡಿಸಲಾಗಿದ್ದ ಚಿಕ್ಕಮಗಳೂರು ಜಿಲ್ಲಾ ಕಾರ್ಯಾಕಾರಿ ಮಂಡಳಿ ಸೇವಾ ದೀಕ್ಷಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನೂರು ವರ್ಷಗಳ ಇತಿಹಾಸವಿರುವ ಆರ್ಯವೈಶ್ಯ ಮಹಾಸಭಾ ಕ್ರಾಂತಿಕಾರಕ ಬದಲಾವಣೆ ಮಾಡಿದೆ, ಈ ಸಾಲಿನಲ್ಲಿ ಮಹಾಸಭಾದ ಚುನಾವಣೆಯಲ್ಲಿ ಗೆದ್ದವರು ಜೊತೆಗೆ ಸೋತವರನ್ನು ಜೊತೆಯಲ್ಲಿ ಇಟ್ಟುಕೊಂಡಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಕಳೆದ ಒಂದು ದಶಕದಿಂದ ಹೆಚ್ಚು ಅಭಿವೃದ್ದಿಗೊಂಡಿದೆ, ಸಾಧನೆಯ ಹಾದಿಯಲ್ಲಿ ನಮ್ಮ ಸಮಾಜ ನಡೆಯುತ್ತಿದೆ ಎಂದರು.
ಆರ್ಯವೈಶ್ಯ ಮಹಾಸಭಾದ ರಾಜ್ಯ ಉಪಾಧ್ಯಕ್ಷ ರವಿಕುಮಾರ್ ನೂತನ ಪದಾಧಿಕಾರಿಗಳಿಗೆ ಸೇವಾದೀಕ್ಷೆ ನೀಡಿ ಮಾತನಾಡಿ, ಸಮಾಜದಲ್ಲಿ ನಾಯಕತ್ವ ಗುಣ ಬೆಳೆಸಲು ಜಿಲ್ಲಾ ಸಮಿತಿಗಳನ್ನು ರಚಿಸಲಾಗಿದೆ. ಬಡ ವಿದ್ಯಾರ್ಥಿಗಳು ಸವಲತ್ತು ಪಡೆಯಲು ಜಿಲ್ಲಾ ಸಮಿತಿಗಳಲ್ಲಿ ಮನವಿ ಸಲ್ಲಿಸಬೇಕಿದೆ ಎಂದರು.
ಆರ್ಯವೈಶ್ಯ ಮಹಾಸಭಾ ರಾಜ್ಯ ಕಾರ್ಯದರ್ಶಿ ಎಸ್.ವಿ. ವಾಸುದೇವಮೂರ್ತಿ ಮಾತನಾಡಿ, ಇತ್ತೀಚೆಗೆ ಸಂಬಂಧಗಳೇ ಬೇಡ ಎಂಬ ಮಟ್ಟಕ್ಕೆ ಬಂದಿದ್ದೇವೆ, ವೇಗವಾಗಿ ಬದಲಾಗುತ್ತಿರುವ ಪ್ರಪಂಚದಲ್ಲಿ ಸಮಾಜ ಬದಲಾವಣೆಯಾಗುತ್ತಿದೆ, ವ್ಯಾಪಾರ ಕುಟುಂಬಗಳು ಇಲ್ಲದಂತಾಗುತ್ತಿವೆ, ಮಹಾಸಭಾದ ವತಿಯಿಂದ ವರ್ಷಕ್ಕೊಮ್ಮೆ ಉದ್ಯೋಗಮೇಳ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಎಂ. ಸುರೇಂದ್ರನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳಿಗೆ ಸಮಿತಿ ರಚನೆಯಾಗಿದೆ. ಜಿಲ್ಲೆಯ ಎಲ್ಲ ಸಮಾಜದವರು ಒಂದು ಕಡೆ ಸೇರಿಸುವ ಕೆಲಸ ಮಾಡಲಾಗುವುದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪುರಸ್ಕರಿಸಲಾಗುವುದು. ಸಮಾಜದ ಮಕ್ಕಳು ಹೆಚ್ಚು ಅಂಕ ಪಡೆದವರಿಗೂ ಪುರಸ್ಕರಿಸಲಾಗುವುದು, ಇದಲ್ಲದೆ ಸ್ವಾತಂತ್ರ ಹೋರಾಟಗಾರರಿಗೆ ಗೌರವಿಸಲಾಗುವುದು ಎಂದುಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಆರ್ಯವೈಶ್ಯ ಮಹಾಸಭಾ ತಾಲೂಕು ಅಧ್ಯಕ್ಷ ಎಂ. ಉಪೇಂದ್ರನಾಥ್ ವಹಿಸಿದ್ದರು. ಕೆ.ಎನ್.ವೀರಣ್ಣಗುಪ್ತ, ಜಿಲ್ಲಾ ಅಧ್ಯಕ್ಷ ವೆಂಕಟೇಶ್, ಶಾಂತಕುಮಾರ್ ಶೆಟ್ಟಿ ತರೀಕೆರೆ, ದಿನೇಶ್ ಗುಪ್ತ ಚಿಕ್ಕಮಗಳೂರು, ಎಂ.ಎಲ್. ಆಶೋಕ್‌ಮುಕಾರ್ ಎನ್.ಆರ್. ಪುರ ಮತ್ತಿತರರು ಉಪಸ್ಥಿತರಿದ್ದರು.







