ಸಿರಿಯದ ಕುರ್ದಿಶ್ ನೆಲೆಗಳ ಮೇಲೆ ಟರ್ಕಿಯಿಂದ ವಾಯು ದಾಳಿ
ಕರ್ಕಾಮಿಸ್ (ಟರ್ಕಿ), ಆ. 28: ಉತ್ತರ ಸಿರಿಯದಲ್ಲಿನ ಕುರ್ದಿಶ್ ವೈಪಿಜಿ ಬಂಡುಕೋರರ ನೆಲೆಗಳ ಮೇಲೆ ಟರ್ಕಿಯ ಯುದ್ಧ ವಿಮಾನಗಳು ಮತ್ತು ಫಿರಂಗಿಗಳು ರವಿವಾರ ದಾಳಿ ನಡೆಸಿವೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ದಾಳಿಯ ಬಗ್ಗೆ ವೈಪಿಜಿ ಬಂಡುಕೋರರಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ. ಆದರೆ, ಟರ್ಕಿಯ ಪಡೆಗಳು ಅಥವಾ ಅದರ ಮಿತ್ರಪಕ್ಷಗಳಿಂದ ದಾಳಿ ನಡೆಯುತ್ತಿರುವ ಪ್ರದೇಶಗಳಲ್ಲಿ ಕುರ್ದಿಶ್ ಬಂಡುಕೋರರಿಲ್ಲ ಎಂದು ಕುರ್ದಿಶ್ ಬಂಡುಕೋರರಿಗೆ ನಿಕಟವಾಗಿರುವ ಪಡೆಗಳು ತಿಳಿಸಿವೆ.
ತನ್ನ ದಾಳಿಯು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳನ್ನು ಗುರಿಯಾಗಿಸಿದ್ದು, ಕುರ್ದಿಶ್ ಪಡೆಗಳು ತಮ್ಮ ನಿಯಂತ್ರಣದ ಪ್ರದೇಶಗಳನ್ನು ವಿಸ್ತರಿಸುವುದನ್ನು ನಿಲ್ಲಿಸುವ ಉದ್ದೇಶವನ್ನೂ ಹೊಂದಿದೆ ಎಂದು ಟರ್ಕಿ ಹೇಳಿದೆ.
ಜರಾಬ್ಲಸ್‌ನ ದಕ್ಷಿಣಕ್ಕಿರುವ ನಗರ ಮನ್‌ಬಿಜ್‌ನ ಉತ್ತರದ ಭಾಗಗಳ ಮೇಲೆ ಟರ್ಕಿಯ ಯುದ್ಧ ವಿಮಾನಗಳು ದಾಳಿ ನಡೆಸಿವೆ ಎಂದು ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ರವಿವಾರ ತಿಳಿಸಿದೆ. ಈ ತಿಂಗಳು ನಡೆದ ಅಮೆರಿಕ ಬೆಂಬಲಿತ ಕಾರ್ಯಾಚರಣೆಯೊಂದರಲ್ಲಿ, ಕುರ್ದಿಶ್ ಬಂಡುಕೋರರೊಂದಿಗೆ ಮೈತ್ರಿ ಹೊಂದಿರುವ ಸಿರಿಯನ್ ಡೆಮಾಕ್ರಟಿಕ್ ಪಡೆಗಳು ಜರಾಬ್ಲಸ್ ಪ್ರದೇಶವನ್ನು ವಶಪಡಿಸಿಕೊಂಡಿದ್ದವು.





