ರಾಜೀವ ಗಾಂಧಿ ರಾಜ್ಯ ವಿಶೇಷ ಶಿಕ್ಷಕ ಪ್ರಶಸ್ತಿಗೆ ಆಯ್ಕೆ
ಬಂಟ್ವಾಳ, ಆ.28: ತಾಲೂಕಿನ ಕೇಪು ಕಲ್ಲಂಗಳ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಮೇಶ ಎಂ. ಬಾಯಾರು ರಾಜೀವ ಗಾಂಧಿ ರಾಜ್ಯ ವಿಶೇಷ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರಾಜ್ಯ ಶಿಕ್ಷಕ ಕಲ್ಯಾಣನಿಧಿಯು ಈ ಪ್ರಶಸ್ತಿಯನ್ನು ಘೋಷಿಸಿದ್ದು, ಶಿಕ್ಷಕ ದಿನಾಚರಣೆಯಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಮೇಶ್ ಬಾಯಾರ್ ಕರ್ನಾಟಕ ಸರಕಾರದಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಪರಿಚಯ:
1957ರ ಆ.25ರಂದು ಬಾಯಾರು ಆವಳ ಮಠ ದಲ್ಲಿ ಜನಿಸಿದ ರಮೇಶ್ ಎಂಎ, ಬಿಇಡಿ ಶಿಕ್ಷಣ ಪೂರೈಸಿ 1978ರಿಂದ ಶಿಕ್ಷಕ ವೃತ್ತಿ ನಡೆಸುತ್ತಿದ್ದಾರೆ. ಈ ಮಧ್ಯೆ ಬಂಟ್ವಾಳ ಬಿಆರ್‌ಪಿಯಾಗಿ, ಇ.ಸಿ.ಒ ಆಗಿ, ವಿಟ್ಲ ಶಾಸಕರ ಸಲಹೆಗಾರರಾಗಿ ಎ.ಇ.ಒ. ಹುದ್ದೆಯನ್ನು ನಿಭಾಯಿಸಿದ್ದರು. ಸ್ಥಳೀಯ ಪತ್ರಿಕೆಯಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಇವರ ‘ಅರಳಿದ ಮುಖ’ ಎಂಬ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವೌಲ್ಯಾಧಾರಿತ ಕೃತಿ ಬಿಡುಗಡೆಯಾಗಿದ್ದು, ಈ ಕೃತಿ ‘ಜಿಲ್ಲಾ ಅಕ್ಷರ ಗೌರವ ಪ್ರಶಸ್ತಿ’ ಗಳಿಸಿದೆ.
ಪ್ರಶಸ್ತಿಗಳು: ರಮೇಶ್ ಬಾಯಾರು ಅವರ ಶೈಕ್ಷಣಿಕ, ಸಾಮಾಜಿಕ ಸೇವೆಗೆ ‘ಜಿಲ್ಲಾ ಅತ್ಯುತ್ತಮ ಶಿಕ್ಷಕ 2012’, ‘ಯೆನೆಪೊಯ ಶಿಕ್ಷಕ ಪ್ರಶಸ್ತಿ 2014’, ‘ಶ್ಯಾಮ ರಾವ್ ಪ್ರತಿಷ್ಠಾನ ಉತ್ತಮ ಶಿಕ್ಷಕ ಪ್ರಶಸ್ತಿ 2015’, ‘ಅಕ್ಷರ ಗೌರವ ಪ್ರಶಸ್ತಿ 2013’, ಜಿಲ್ಲೆ ಮತ್ತು ರಾಜ್ಯ ಹಂತದಲ್ಲಿ ಅನೇಕ ಪ್ರಬಂಧ ಬರಹಗಳಿಗೆ ಬಹುಮಾನ ಸಂದಿವೆ.





