ಮುಧೋಳ: ಅನ್ನಸಂತರ್ಪಣೆ ಪಂಕ್ತಿಯಲ್ಲಿ ಎಲ್ಲರ ಜೊತೆ ದಲಿತರಿಗೆ ಅವಕಾಶವಿಲ್ಲ
ಹೊರಗೆ ಕೂರಿಸಿ ಊಟ; ಪೊಲೀಸರ ಎದುರಲ್ಲೇ ಅಸ್ಪಶ್ಯ
ಬಾಗಲಕೋಟೆ, ಆ.28: ಮುಧೋಳ ತಾಲೂಕಿನ ರಂಜಣಗಿ ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮಯೊಂದರಲ್ಲಿ ದಲಿತ ಜನಾಂಗದವರನ್ನು ಹೊರಗೆ ಕೂರಿಸಿ ಅವರದ್ದೇ ತಟ್ಟೆಯಲ್ಲಿ ಊಟ ಮಾಡಿಸಿರುವ ಘಟನೆ ನಡೆದಿದೆ. ಈ ಮೂಲಕ ಜಿಲ್ಲೆಯಲ್ಲಿ ಅಸ್ಪಶ್ಯತೆ ಜೀವಂತವಾಗಿರುವುದು ಇದರಿಂದ ಬೆಳಕಿಗೆ ಬಂದಿದೆ. ಮುಧೋಳ ತಾಲೂಕಿನ ರಂಜಣಗಿ ಗ್ರಾಮದಲ್ಲಿ ಲಕ್ಷ್ಮೀ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಏರ್ಪಡಿಸಲಾಗಿತ್ತು. ಈ ವೇಳೆ ಅಲ್ಲಿನ ಕೆಲ ದಲಿತ ಜನಾಂಗದವರನ್ನು ಹೊರಗೆ ಕೂರಿಸಿ ಅವರು ತಂದಿದ್ದ ತಟ್ಟೆ, ತಂಬಿಗೆ ಇತರ ವಸ್ತುಗಳಲ್ಲಿ ಊಟ ಮಾಡಿಸಿದ್ದಾರೆ ಎನ್ನಲಾಗಿದೆ.
ಇಂದಿನ ಆಧುನಿಕ ಯುಗದಲ್ಲಿ ಜಾತಿ ಪದ್ಧತಿ ಗ್ರಾಮೀಣ ಮಟ್ಟದಲ್ಲಿ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೇ ಈ ಗ್ರಾಮವೇ ಸಾಕ್ಷಿಯಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಕಣ್ಣು ತೆರೆದು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ದಲಿತ ಜನಾಂಗದ ಮುಖಂಡರು ಆಗ್ರಹಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಇಂತಹ ಅನಿಷ್ಟ ಪದ್ಧತಿ ನಡೆಯುತ್ತಿದ್ದರೂ ವೌನ ವಹಿಸಿರುವುದಕ್ಕೆ ದಲಿತ ಜನಾಂಗದ ಆಕ್ರೋಶಕ್ಕೆ ಕಾರಣವಾಗಿದೆ.





