ಶೆಟ್ಟಿಗಾರ್ ಜಾತಿ ಪ್ರವರ್ಗ 2ಎಗೆ ಸೇರಿಸಲು ಯತ್ನ: ಅಭಯಚಂದ್ರ ಜೈನ್
ಕರಾವಳಿ ಶೆಟ್ಟಿಗಾರ್ ಸಮಾವೇಶ ಸಮಾರೋಪ ಸಮಾರಂಭ

ಉಡುಪಿ, ಆ.28: ಶೆಟ್ಟಿಗಾರ್ ಜಾತಿಯನ್ನು ಆದಷ್ಟು ಶೀಘ್ರ ಪ್ರವರ್ಗ 2ಎಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕರಾವಳಿಯ ಶಾಸಕ ರೊಂದಿಗೆ ಸೇರಿ ಪ್ರಯತ್ನ ನಡೆಸಲಾಗುವುದು. ಅದೇ ರೀತಿ ಈ ಸಮುದಾಯಕ್ಕೆ ಸರಕಾರದಿಂದ ಅನುದಾನ ಒದಗಿಸಲು ಶ್ರಮಿಸಲಾಗುವುದೆಂದು ಶಾಸಕ, ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ.
ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾದ 70ರ ಸಂಭ್ರಮಾಚರಣೆ ಪ್ರಯುಕ್ತ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ರವಿವಾರ ನಡೆದ ಕರಾವಳಿ ಶೆಟ್ಟಿಗಾರ್ ಸಮಾವೇಶದ ಸಮಾ ರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಯಾವುದೇ ಒಂದು ಸಮುದಾಯ ಬೆಳೆಯಬೇಕಾದರೆ ಆ ಸಮುದಾಯದವರು ಸರಕಾರದಲ್ಲಿರಬೇಕಾಗಿದೆ. ಈ ನಿಟ್ಟಿನಲ್ಲಿ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಆಡಳಿತಾತ್ಮಕ ಪರೀಕ್ಷೆಗಳ ಕುರಿತು ತರಬೇತಿ ನೀಡುವ ಕಾರ್ಯ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಶೆಟ್ಟಿಗಾರ್ ಸಮುದಾಯದ ಕುಲಕಸುಬಾಗಿರುವ ಕೈಮಗ್ಗವನ್ನು ತಾಂತ್ರಿಕತೆಯತ್ತ ವರ್ಗಾವಣೆ ಮಾಡಿ ಕೊಳ್ಳಬೇಕು. ಯಾಂತ್ರೀಕರಣದಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಬೇಡಿಕೆ ಬರುವಂತೆ ಮಾಡಬಹುದು. ಇದರಿಂದ ಉದ್ದಿಮೆಗೆ ಬಲ ತರಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಮಹಾಸಭಾದ ಅಧ್ಯಕ್ಷ ಪುರಂದರ ಡಿ.ಶೆಟ್ಟಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಸರಕಾರ ಐದು ಕೋಟಿ ರೂ. ಅನುದಾನ ನೀಡಿದರೆ ಒಟ್ಟು 10 ಕೋಟಿ ರೂ. ವೆಚ್ಚದಲ್ಲಿ ಕರಾವಳಿ ಶೆಟ್ಟಿಗಾರ್ ಭವನ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಅದೇ ರೀತಿ ಸರಕಾರ ಶೀಘ್ರ ಪದ್ಮಶಾಲಿಗೆ ಪರ್ಯಾಯವಾಗಿರುವ ಶೆಟ್ಟಿಗಾರ್ ಜಾತಿಯನ್ನು ಜಾತಿಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಸಮಾವೇಶದ ಗೌರವ ಸಂಚಾಲಕ ಅಂಬಾತನಯ ಮುದ್ರಾಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಮಹಾಸಭಾದ ಕಾರ್ಯದರ್ಶಿ ಜಯರಾಮ ಶೆಟ್ಟಿಗಾರ್ ಮಣಿಪಾಲ ಸ್ವಾಗತಿಸಿದರು. ರಾಜೇಂದ್ರ ಶೆಟ್ಟಿಗಾರ್ ಬಸ್ರೂರು ಕಾರ್ಯಕ್ರಮ ನಿರೂಪಿಸಿದರು.







