ಕಲಬುರ್ಗಿ ಹತ್ಯೆಯ ಹಿಂದೆ ವೈದಿಕ ಶಕಿ್ತಗಳು: ಪ್ರೊ.ಚಂಪಾ

ಬೆಂಗಳೂರು, ಆ.28: ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಯವರು ವೈದಿಕ ಹಿನ್ನೆಲೆಯ ವೀರಶೈವ ಧರ್ಮದ ಬದಲಿಗೆ ‘ಲಿಂಗಾಯಿತ ಧರ್ಮ’ವನ್ನು ಸಂಶೋಧನೆಯ ಗ್ರಂಥದ ಮೂಲಕ ಉಲ್ಲೇಖಿಸಿದ ಹಿನ್ನೆಲೆಯಲ್ಲಿಯೇ ಅವರ ಹತ್ಯೆ ನಡೆದಿದೆ ಎಂದು ಕಸಾಪ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಲೇಖಕ ಪ್ರೊ. ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಸಿಎಸ್‌ಐ ಆವರಣದಲ್ಲಿ ಫ್ಯಾಶಿಸ್ಟ್ ವಿರೋಧಿ ಒಕ್ಕೂಟ ಆಯೋಜಿಸಿದ್ದ ‘ಪ್ರಜಾಪ್ರಭುತ್ವ ಹಾಗೂ ಅಭಿವ್ಯಕ್ತಿ ಸ್ವಾತಂತ್ರದ ಮೇಲಿನ ಫ್ಯಾಶಿಸ್ಟ್ ದೌರ್ಜನ್ಯ ಖಂಡಿಸಿ’ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಚಾರವಾದಿಗಳಾದ ಎಂ.ಎಂ.ಕಲಬುರ್ಗಿ, ನರೇಂದ್ರ ದಾಭೋಲ್ಕರ್ ಹಾಗೂ ಗೋವಿಂದ ಪನ್ಸಾರೆ ಅವರ ಹತ್ಯೆಗಳ ಹಿಂದಿನ ಶಕ್ತಿಗಳ ಬಗ್ಗೆ ಯುವ ಪೀಳಿಗೆಗೆ ತಿಳಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಹೊಸ ಆಂದೋಲನವೊಂದನ್ನು ಸೃಷ್ಟಿಸಬೇಕಾಗಿದೆ ಎಂದು ಕರೆ ನೀಡಿದರು. ದೇಶಕ್ಕೆ ಸ್ವಾತಂತ್ರ ಸಿಕ್ಕಾಗ ಬಲಪಂಥೀಯ ಕೋಮುವಾದ ಯಾವುದೂ ಇರಲಿಲ್ಲ. ಆದರೆ, ಈಗ 5 ಸಾವಿರ ವರ್ಷಗಳಿಂದ ದೇಶವನ್ನು ಆಳಿದ ಶಕ್ತಿಗಳು ಒಂದಾಗಿ ವೇದಿಕೆಯನ್ನು ಮಾಡಿಕೊಳ್ಳುತ್ತಿವೆ.
ಈ ವೇದಿಕೆಯನ್ನು ತಡೆಗಟ್ಟದಿದ್ದರೆ ನಮ್ಮ ದೇಶಕ್ಕೆ ಭವಿಷ್ಯವಿಲ್ಲ ಎಂದು ಅವರು ನುಡಿದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ಗೋವಿಂದ ಪನ್ಸಾರೆ, ನರೇಂದ್ರ ದಾಭೋಲ್ಕರ್ ಅವರ ಹತ್ಯೆಯಾದ ಬಳಿಕ ಹಿಂದೂ ಮಹಾಸಭಾದವರು ಸಾಮಾಜಿಕ ಜಾಲತಾಣಗಳಲ್ಲಿ ಮುಂದಿನ ಹತ್ಯೆ ಕಲಬುರ್ಗಿ ಅವರದೇ ಎಂದು ತಿಳಿಸಿದ್ದರು.
ಆದರೂ ಕಲಬುರ್ಗಿ ಅವರನ್ನು ಹತ್ಯೆಗೈದವರು ಇನ್ನೂ ಸಿಕ್ಕಿಲ್ಲ ಎಂದು ತಿಳಿಸಿದರು. ಹಿಂದೂ ಧರ್ಮೀಯರು ಮಹಿಳೆಯರು ಹೆಚ್ಚು ಮಕ್ಕಳನ್ನು ಹೆರಬೇಕೆಂದು ಹೇಳುತ್ತಾರೆ. ಆದರೆ, ಈಗಲೇ ದೇಶದ ಜನಸಂಖ್ಯೆ 100ಕೋಟಿ ಮೀರಿದ್ದು ಗೊತ್ತಾಗುತ್ತಿಲ್ಲವೆ ಎಂದ ಅವರು, ಈಗಲೂ ಪಠ್ಯ ಪುಸ್ತಕ ಹಾಗೂ ಜಾಹೀರಾತುಗಳಲ್ಲಿ ಮಹಿಳೆಯರನ್ನು ಎರಡನೆ ದರ್ಜೆಯವರನ್ನಾಗಿ ಬಿಂಬಿಸುತ್ತಾರೆಂದು ಕಿಡಿಕಾರಿದರು.
ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಮಾತನಾಡಿ, ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅವರನ್ನು ಸಂಘಪರಿವಾರದವರೇ ಕೊಲೆ ಮಾಡಿದರು. ಆದರೆ, ಅವರ ವಿರುದ್ಧ ಬಿಜೆಪಿಯವರೂ ಯಾರೂ ಮಾತನಾಡಲಿಲ್ಲ. ಆದರೆ, ಮುಸ್ಲಿಮರು ಬಾಳಿಗರನ್ನು ಕೊಲೆ ಮಾಡಿದ್ದರೆ, ಮುಸ್ಲಿಮರು ಹಸುವೊಂದನ್ನು ಹತ್ಯೆಗೈದಿದ್ದರೆ ಇಡೀ ಮಂಗಳೂರನ್ನೇ ಬಿಜೆಪಿಯವರು ಉದ್ವಿಗ್ನತೆಗೆ ತಳ್ಳುತ್ತಿದ್ದರು ಎಂದು ಆಪಾದಿಸಿದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ಧ ಹೇಳಿಕೆಗಳನ್ನು ನೀಡಿದಾಗ ಆರೆಸ್ಸೆಸ್‌ನವರು ಸಮರ್ಥಿ ಸಿಕೊಳ್ಳುತ್ತಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾರಾದರೂ ಹೇಳಿಕೆಗಳನ್ನು ನೀಡಿದರೆ ಆ ಹೇಳಿಕೆಗಳನ್ನು ಆರೆಸ್ಸೆಸ್ ನವರು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಪಿ. ಮಹೇಶ್ ಚಂದ್ರಗುರು, ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಶಾಫೀ ಬೆಳ್ಳಾರೆ, ಫ್ಯಾಶಿಸ್ಟ್ ವಿರೋಧಿ ಒಕ್ಕೂಟದ ಅಧ್ಯಕ್ಷ ಲಕ್ಷ್ಮಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ದಲಿತರ ಮೇಲಿನ ದೌರ್ಜನ್ಯ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ, ಅರುಣ್ ಶೌರಿ ಅವರು ಮಾತನಾಡಿದಾಗ ಆರೆಸ್ಸೆಸ್‌ನವರು ಅವರ ಬಾಯಿ ಮುಚ್ಚಿಸಿದ್ದಾರೆ. ಹಾಗೆಯೇ ಯಡಿಯೂರಪ್ಪ ಅವರನ್ನು ಈಗ ಮಾತನಾಡಲು ಬಿಟ್ಟು, ಮುಂದಿನ ದಿನಗಳಲ್ಲಿ ಅವರ ಬಾಯಿಯನ್ನೂ ಮುಚ್ಚಿಸುತ್ತಾರೆ.
-ಪ್ರೊ.ನರೇಂದ್ರ ನಾಯಕ್, ವಿಚಾರವಾದಿ







