38 ರೈಲುಗಳ ವೇಳಾಪಟ್ಟಿಯ ಫಲಕ ಅನಾವರಣ
ಉಡುಪಿ, ಆ.28: ಉಡುಪಿ ರೈಲ್ವೆ ಯಾತ್ರಿ ಸಂಘದ ವತಿಯಿಂದ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್‌ನಲ್ಲಿ ಆಳವಡಿಸಲಾದ ಉಡುಪಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ರೈಲುಗಳ ವೇಳಾಪಟ್ಟಿಯ ಫಲಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ರವಿವಾರ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಅವರು, ಅತ್ಯಂತ ಸುರಕ್ಷೆ ಹಾಗೂ ಸುಖಕರ ಪ್ರಯಾಣ ನೀಡುವ ಸಾರಿಗೆ ಎಂದರೆ ರೈಲ್ವೆ. ಆದ್ದರಿಂದ ಇದನ್ನು ಹೆಚ್ಚು ಜನರು ಬಳಸುವಂತಾಗಲು ಅದರ ಮಾಹಿತಿ ಅತ್ಯಗತ್ಯ. ಮಾಹಿತಿ ಇಲ್ಲದಿದ್ದರೆ ಯಾವುದೇ ಸೇವೆ ಜನರಿಗೆ ಲಭ್ಯವಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್.ಡಯಾಸ್ ಮಾತನಾಡಿ, ಈ ಬೋರ್ಡ್‌ನಲ್ಲಿ ಉಡುಪಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ 38 ರೈಲುಗಳ ವೇಳಾಪಟ್ಟಿಯನ್ನು ಹಾಕಲಾಗಿದೆ. ಅಲ್ಲದೆ ಇದರಲ್ಲಿ ಮಳೆಗಾಲದ ರೈಲುಗಳ ವೇಳಾಪಟ್ಟಿ ಕೂಡ ಇದೆ. ಮುಂದೆ ಸಿಟಿಬಸ್ ನಿಲ್ದಾಣ ಹಾಗೂ ನಗರಸಭೆ ಕಚೇರಿ ಮುಂದೆ ಕೂಡ ಇಂತಹ ಬೋರ್ಡ್ ಹಾಕಲಾಗುವುದು ಎಂದರು.
ಬೋರ್ಡ್‌ನ ಪ್ರಾಯೋಜಕ ಉಡುಪಿ ಹರ್ಷ ಸಂಸ್ಥೆಯ ನಿರ್ದೇಶಕ ಅಶೋಕ್ ಕುಮಾರ್, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಉಪಸ್ಥಿತರಿದ್ದರು. ಉಪಾಧ್ಯಕ್ಷ ಕೆ.ಆರ್.ಮಂಜ ಸ್ವಾಗತಿಸಿ ದರು. ಕೋಶಾಧಿಕಾರಿ ರಾಮಚಂದ್ರ ಆಚಾರ್ಯ ವಂದಿಸಿದರು. ಎಂ.ಪ್ರಭಾಕರ ಆಚಾರ್ ಕಾರ್ಯಕ್ರಮ ನಿರೂಪಿಸಿದರು.







