ಪ್ರವೀಣ್ ಪೂಜಾರಿ ಹತ್ಯೆಗೆ ಖಂಡನೆ: ಕುಟುಂಬಕ್ಕೆ ಪರಿಹಾರ, ಬಿಲ್ಲವ ಸಮಾಜದ ಜಾಗೃತಿಗೆ ನಿರ್ಣಯ
ಬ್ರಹ್ಮಾವರ, ಆ.28: ಕೆಂಜೂರು ಪ್ರವೀಣ್ ಪೂಜಾರಿ ಹತ್ಯೆಯನ್ನು ಖಂಡಿಸುವ ಖಂಡನಾ ಸಭೆಯನ್ನು ಸಮಸ್ತ ಬಿಲ್ಲವ ಸಮುದಾಯದ ನೇತೃತ್ವದಲ್ಲಿ ಬ್ರಹ್ಮಾವರ ನಾರಾಯಣಗುರು ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಪ್ರವೀಣ್ ಪೂಜಾರಿಯನ್ನು ಅಮಾನವೀಯವಾಗಿ ಕೊಲೆಗೈದಿರು ವುದನ್ನು ತೀವ್ರವಾಗಿ ಖಂಡಿಸಿದ ಸಭೆಯು, ಬಿಲ್ಲವ ಸಮಾಜದ ಜಾಗೃತಿ ಹಾಗೂ ಮೃತರ ಕುಟುಂಬಕ್ಕೆ ರಾಜ್ಯ ಸರಕಾರದಿಂದ ಗರಿಷ್ಠ ಪರಿಹಾರ ನೀಡುವಂತೆ ಆಗ್ರಹಿಸಿ ನಿರ್ಣಯವನ್ನು ಕೈಗೊಂಡಿತು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್‌ಮಾತನಾಡಿ, ಗೋರಕ್ಷಕರು ಗ್ರಾಮಗಳಲ್ಲಿ ಗೋಶಾಲೆಗಳನ್ನು ತೆರೆಯುವ ಮೂಲಕ ಗೋವುಗಳನ್ನು ರಕ್ಷಿಸುವ ಕೆಲಸ ಮಾಡಬೇಕು. ಅದು ಬಿಟ್ಟು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ. ಪ್ರವೀಣ್ ಪೂಜಾರಿ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಹರಿಕೃಷ್ಣ ಬಂಟ್ವಾಳ ಪ್ರಧಾನ ಭಾಷಣ ಮಾಡಿದರು.
ಶಾಸಕರಾದ ವಿನಯ ಕುಮಾರ್ ಸೊರಕೆ, ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ರಘುಪತಿ ಭಟ್ ಪ್ರವೀಣ್ ಪೂಜಾರಿ ಹತ್ಯೆಯನ್ನು ಖಂಡಿಸಿದರು.
ಬ್ರಹ್ಮಾವರ ಬಿಲ್ಲವ ಸಂಘದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ ಸ್ವಾಗತಿಸಿದರು. ಕೊಕ್ಕರ್ಣೆ ಬಿಲ್ಲವ ಸಂಘದ ಅಧ್ಯಕ್ಷ ಭಾಸ್ಕರ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಕ್ಕರ್ಣೆ ಸಂಜೀವ ಮಾಸ್ಟರ್ ವಂದಿಸಿದರು. ದಯಾನಂದ ಉಪ್ಪೂರು ಕಾರ್ಯಕ್ರಮ ನಿರೂಪಿಸಿದರು.
1,68,000 ರೂ. ಸಂಗ್ರಹ
ಬೈಂದೂರು ಶಾಸಕ ಗೋಪಾಲ ಪೂಜಾರಿ ನೀಡಿರುವ 50,500 ರೂ. ಸೇರಿದಂತೆ ಸಭೆಯಲ್ಲಿ ಸೇರಿದ್ದವರಿಂದ ಸುಮಾರು 1,68,000 ರೂ. ನಿಧಿ ಸಂಗ್ರಹಿಸಲಾಯಿತು. ಬಳಿಕ ಅದನ್ನು ಪ್ರವೀಣ್ ಪೂಜಾರಿ ತಂದೆ ವಾಸು ಪೂಜಾರಿಯವರಿಗೆ ಹಸ್ತಾಂತರಿಸಲಾಯಿತು.







