ಭಾವೋದ್ವೇಗದ ರಾಷ್ಟ್ರೀಕರಣದಿಂದ ಜಾತಿ ದೌರ್ಜನ್ಯ: ಬರಗೂರು

ಬೆಂಗಳೂರು, ಆ.28: ತರ್ಕಹೀನ ಭಾವೋದ್ವೇಗದ ರಾಷ್ಟ್ರೀಕರಣವನ್ನು ಪ್ರತಿಪಾದಿಸುತ್ತಿರುವವರಿಂದ ದೇಶದಲ್ಲಿ ಜಾತಿ ದೌರ್ಜನ್ಯಗಳು ಹೆಚ್ಚಾಗುತ್ತಿವೆ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ನವಕರ್ನಾಟಕ ಪ್ರಕಾಶನ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಡಾ.ಎನ್.ಚಿನ್ನಸ್ವಾಮಿ ಸೋಸಲೆರವರ ‘ಕರ್ನಾಟಕ ಸಮಗ್ರ ದಲಿತ ಚರಿತ್ರೆ’ ಹಾಗೂ ಚಂದ್ರಕಾಂತ ಪೋಕಳೆ ಅವರ ‘ಹಿಂದೂ:ಬದುಕಿನ ಸಮೃದ್ಧ ಅಡಕಲು’ ಅನುವಾದ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಭಾವೋದ್ವೇಗದ ಮೂಲಕ ರಾಷ್ಟ್ರೀಕರಣವನ್ನು ಬಿತ್ತುತ್ತಿರು ವುದರಿಂದ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಕಳೆದ ಆ.15ರ ಸ್ವಾತಂತ್ರ ದಿನಾಚರಣೆಯಂದು ಚಿತ್ರದುರ್ಗದ ಶಾಲೆಯೊಂದರ ಎಸ್‌ಡಿಎಂಸಿ ಅಧ್ಯಕ್ಷ ದಲಿತನೆಂಬ ಕಾರಣಕ್ಕೆ ಧ್ವಜಾರೋಹಣ ಮಾಡಲು ಜಾತಿವಾದಿಗಳು ಬಿಡಲಿಲ್ಲ. ಹೀಗೆ ಪ್ರತೀ ಹಂತದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿರುವುದು ಆತಂಕವನ್ನು ಮೂಡಿಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಭಾವೋದ್ವೇಗದ ರಾಷ್ಟ್ರೀಕರಣದಿಂದ ದಲಿತ ಸಮುದಾ ಯ ಅಪಾಯವನ್ನು ಎದುರಿಸುತ್ತಿದೆ. ಇಂತಹ ಸಮಯ ದಲ್ಲಿ ದಲಿತರು ಒಗ್ಗಟ್ಟಾಗಬೇಕಾಗಿತ್ತು. ಆದರೆ, ದಲಿತ ಸಮುದಾಯ ದಲ್ಲೂ ಶ್ರೇಣೀಕರಣವುಂಟಾಗಿರುವುದು ನೋವಿನ ಸಂಗತಿಯಾಗಿದೆ ಎಂದು ಬರಗೂರು ವಿಷಾದಿಸಿದರು.
ಹಿಂದಿನ ದಿನಗಳಲ್ಲಿ ಜಾತಿಯನ್ನು ಬ್ರಾಹ್ಮಣ ಮತ್ತು ಶೂದ್ರ ಎಂಬ ಎರಡೇ ವಿಭಾಗಗಳಲ್ಲಿ ಗುರುತಿಸಲಾಗುತ್ತಿತ್ತು. ಆದರೆ, ಈಗ ಹಿಂದುಳಿದ, ದಲಿತ ಹಾಗೂ ಉಪಜಾತಿಗಳಾಗಿ ವಿಂಗಡಿಸಲಾಗಿದೆ. ಇದರಿಂದ ಜಾತಿ-ಜಾತಿಗಳೊಳಗಿನ ಕಂದಕಗಳು, ಸಂಘರ್ಷಗಳು ಹೆಚ್ಚಾಗಿವೆ. ಇದರಿಂದ ವೈದಿಕ ಸಂಘಟನೆಗಳು ಮತ್ತಷ್ಟು ವಿಜೃಂಭಿಸಲು ಕಾರಣವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಚರಿತ್ರೆ ಎಂಬುದು ಭೂತಕಾಲದ ಬದುಕು ಹಾಗೂ ವರ್ತಮಾನದ ವಿವೇಕವನ್ನು ಒಳಗೊಂಡಿರುತ್ತದೆ. ಈ ಹಿನ್ನೆಲೆಯಲ್ಲಿ ಡಾ.ಎನ್.ಚಿನ್ನಸ್ವಾಮಿ ಸೋಸಲೆ ಸಂಗ್ರಹಿಸಿರುವ ‘ಕರ್ನಾಟಕ ಸಮಗ್ರ ದಲಿತ ಚರಿತ್ರೆ’ ಇತಿಹಾಸಕ್ಕೆ ಸಂಬಂಧಿಸಿ ದಂತೆ ಮಹತ್ವದ ಕೃತಿಯಾಗಿದ್ದು, ದಲಿತರ ಕುರಿತು ಸಂಶೋಧನೆ ಮಾಡುವವರಿಗೆ ಆಕರ ಗ್ರಂಥವಾಗಲಿದೆ ಎಂದರು.
ಚರಿತ್ರೆ ರಚಿಸಬೇಕಾದರೆ ವಸ್ತುನಿಷ್ಠತೆಯನ್ನು ಕಾಯ್ದು ಕೊಳ್ಳಬೇಕಾಗುತ್ತದೆ. ಇಲ್ಲಿ ಯಾವುದೇ ಪೂರ್ವಾಗ್ರಹಕ್ಕೆ ಅವಕಾಶ ಇರಬಾರದು. ಚರಿತ್ರೆ ಎನ್ನುವುದು ವ್ಯಾಖ್ಯಾನವೇ ಹೊರತು ಅಸಹನೆ ವ್ಯಕ್ತಪಡಿಸುವ ಜಾಗವಲ್ಲ. ಈ ನಿಟ್ಟಿನಲ್ಲಿ ಚರಿತ್ರೆಯಲ್ಲಿ ಬರುವ ವ್ಯಕ್ತಿಗಳ, ಪ್ರದೇಶಗಳ ಕುರಿತು ಬರೆಯುವಾಗ ಬಳಸುವ ಭಾಷೆಯಲ್ಲಿ ಅತ್ಯಂತ ಜಾಗ್ರತೆ ವಹಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಲೇಖಕ ಡಾ.ಎನ್.ಚಿನ್ನಸ್ವಾಮಿ ಸೋಸಲೆ, ಅನುವಾದಕ ಚಂದ್ರಕಾಂತ ಪೋಕಳೆ, ವಿಮರ್ಶಕ ಡಾ.ಎಚ್.ಎಸ್.ಗೋಪಾಲ ರಾವ್, ವಿಮರ್ಶಕಿ ಡಾ.ಗೀತಾ ಶೆಣೈ, ವಸತು ಪತ್ರಿಕೆಯ ಸಂಪಾದಕ ಸಿದ್ದನಗೌಡ ಪಾಟೀಲ ಮತ್ತಿತರರಿದ್ದರು.
ಸಮಾಜಕ್ಕೆ ವೈದಿಕಧರ್ಮದ ಅಗತ್ಯವೇ ಇಲ್ಲ
ನಮ್ಮ ಸಮಾಜಕ್ಕೆ ವೈದಿಕ ಧರ್ಮದ ಅಗತ್ಯವೇ ಇಲ್ಲ. ಆದರೂ, ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಹರಡುತ್ತಿವುದು ಅತಂಕವನ್ನು ಮೂಡಿಸಿದೆ. ಮುಖ್ಯವಾಗಿ ಬ್ರಾಹ್ಮಣೇತರರು ವೈದಿಕ ಆಚರಣೆಯಲ್ಲಿ ತೊಡಗಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ’’
-ಡಾ.ಎಚ್.ಎಸ್.ಗೋಪಾಲರಾವ್, ಹಿರಿಯ ವಿಮರ್ಶಕ
ಹಿಂದುಳಿದ ವರ್ಗದವರ ಒಗ್ಗಟ್ಟು ಕೇವಲ ವರದಿಯಲ್ಲಿದೆಯೇ ಹೊರತು ವಾಸ್ತವದಲ್ಲಿಲ್ಲ. ಹೀಗಾಗಿಯೇ ಹಿಂದುಳಿದ ಸಮುದಾಯ ಸಣ್ಣ ಸಣ್ಣ ಗುಂಪುಗಳಾಗಿ ಒಡೆದು ಹೋಗಿ, ಕೆಲವು ದುಷ್ಟಶಕ್ತಿಗಳ ಹಿಡಿತದಲ್ಲಿ ಸಿಕ್ಕಿವೆ. ಇವೆಲ್ಲವುಗಳನ್ನು ಒಟ್ಟುಗೂಡಿಸಬೇಕಾದ ಅಗತ್ಯವಿದೆ’’
-ಪ್ರೊ.ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ







