ಮನೆಬಿಟ್ಟು ಬಂದ ಬಾಲಕ ಪೊಲೀಸರ ವಶಕ್ಕೆ
ಉಪ್ಪಿನಂಗಡಿ, ಆ.28: ಚಿತ್ರದುರ್ಗದಿಂದ ಮನೆ ಬಿಟ್ಟು ಬಂದ ಬಾಲಕನನ್ನು ಉಪ್ಪಿನಂಗಡಿ ಪೊಲೀಸರು ರಕ್ಷಿಸಿ, ಹೆತ್ತವರಿಗೊಪ್ಪಿಸಿದ ಘಟನೆ ಶನಿವಾರ ನಡೆದಿದೆ.
ಬಾಲಕನನ್ನು ಚಿತ್ರದುರ್ಗದ ದಾವಣಗೆರೆ ರಸ್ತೆ ನಿವಾಸಿ ದಿ.ರಮೇಶ ಹಾಗೂ ಮಮತಾ ದಂಪತಿಯ ಪುತ್ರನಾಗಿರುವ ಪುನೀತ್(14)ಎಂದು ಗುರುತಿಸಲಾಗಿದೆ. ಬಾಲಕ ತಾಯಿ ಸಾಮಾನು ಖರೀದಿಗೆಂದು ನೀಡಿದ್ದ 500 ರೂ.ಯನ್ನು ಕಿಸೆಗಿಳಿಸಿ ಧರ್ಮಸ್ಥಳ ಬಂದಿದ್ದ. ಧರ್ಮಸ್ಥಳದಿಂದ ಪೆರಿಯಶಾಂತಿ ಎಂಬಲ್ಲಿಗೆ ಬಂದು ಹಣವಿಲ್ಲದೆ, ಮುಂದೆ ಎಲ್ಲಿಗೆ ಹೋಗುವುದೆಂದು ತಿಳಿಯದೆ ಕಾಡು ಪ್ರದೇಶದಲ್ಲಿ ಅಲೆದಾಡುತ್ತಿದ್ದ.
ಈತನ ಬಗ್ಗೆ ಅನುಮಾನಗೊಂಡ ಪೊಲೀಸರು ಬಾಲಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ಪ್ರಾರಂಭದಲ್ಲಿ ಸುಳ್ಳು ವಿಳಾಸ ನೀಡಿದ್ದು, ಬಳಿಕ ತನ್ನ ನೈಜ ವಿಳಾಸವನ್ನು ಹಾಗೂ ಮನೆಯ ದೂರವಾಣಿ ಸಂಖ್ಯೆಯನ್ನು ನೀಡಿದ್ದನು. ಅದರ ಆಧಾರದಲ್ಲಿ ಪೊಲೀಸರು ಮನೆಯವರನ್ನು ಸಂಪರ್ಕಿಸಿ ಆತನ ಹೆತ್ತವರಿಗೆ ಒಪ್ಪಿಸಿದ್ದಾರೆ.
Next Story





