ಮೂರನೆ ಏಕದಿನ :ಲಂಕೆಗೆ ಸೋಲು

ಡಂಬುಲಾ, ಆ.28: ಆಸ್ಟ್ರೇಲಿಯ ತಂಡ ಇಲ್ಲಿ ನಡೆದ ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 2 ವಿಕೆಟ್‌ಗಳ ಜಯ ಗಳಿಸಿದೆ.
ಈ ಗೆಲುವಿನೊಂದಿಗೆ ಆಸ್ಟ್ರೇಲಿಯ 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
ಕೊನೆಯ ಪಂದ್ಯವನ್ನಾಡಿದ ಆಲ್‌ರೌಂಡರ್ ತಿಲಕರತ್ನೆ ದಿಲ್ಶನ್ ಅವರಿಗೆ ಗೆಲುವಿನ ಉಡುಗೊರೆ ನೀಡುವಲ್ಲಿ ಶ್ರೀಲಂಕಾ ಎಡವಿತು.
ಶ್ರೀಲಂಕಾ ತಂಡ ಚಾಂಡಿಮಾಲ್ ಶತಕ(102) ಮತ್ತು ದಿಲ್ಶನ್ (42) ಕೊಡುಗೆ ನೆರವಿನಿಂದ 226 ರನ್ ಗಳಿಸಿತ್ತು. ಗೆಲುವಿಗೆ 227 ರನ್‌ಗಳಿಸಬೇಕಿದ್ದ ಆಸ್ಟ್ರೇಲಿಯ ತಂಡ ಇನ್ನೂ 24 ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್ ನಷ್ಟದಲ್ಲಿ 227 ರನ್ ಗಳಿಸಿತು. ಜಾರ್ಜ್ ಬೈಲಿ 70 ರನ್, ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ 42 ರನ್, ಹೆಡ್ 36 ರನ್ ಮತ್ತು ಫಿಂಚ್ 30 ರನ್ ಗಳಿಸಿ ಆಸ್ಟ್ರೇಲಿಯ ತಂಡದ ಗೆಲುವಿಗೆ ನೆರವಾದರು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ 49.2 ಓವರ್‌ಗಳಲ್ಲಿ ಆಲೌಟ್ 226(ಚಾಂಡಿಮಾಲ್ 102, ದಿಲ್ಶನ್ 42; ಝಾಂಪ 38ಕ್ಕೆ 3).
ಆಸ್ಟ್ರೇಲಿಯ 46 ಓವರ್‌ಗಳಲ್ಲಿ 227/8( ಬೈಲಿ 70, ವೇಡ್ 42, ಹೆಡ್ 30, ಫಿಂಚ್ 30; ಮ್ಯಾಥ್ಯೂಸ್ 30ಕ್ಕೆ 2).
ಪಂದ್ಯಶ್ರೇಷ್ಠ : ಜಾರ್ಜ್ ಬೈಲಿ.
,,,,,,,,,,,,,
ವಿದಾಯದ ಏಕದಿನ ಪಂದ್ಯದಲ್ಲಿ ದಿಲ್ಶನ್ 42ಕ್ಕೆ ಔಟ್
ಡಂಬುಲಾ, ಆ.28: ವಿದಾಯದ ಪಂದ್ಯವನ್ನಾಡಿದ ಶ್ರೀಲಂಕಾದ ಆಲ್‌ರೌಂಡರ್ ತಿಲಕರತ್ನ ದಿಲ್ಶನ್ ಅವರು ಆಸ್ಟ್ರೇಲಿಯ ವಿರುದ್ಧದ ಮೂರನೆ ಏಕದಿನ ಪಂದ್ಯದಲ್ಲಿ 42 ರನ್ ಗಳಿಸಿ ಔಟಾಗಿದ್ದಾರೆ.
65 ಎಸೆತಗಳನ್ನು ಎದುರಿಸಿ 5 ಬೌಂಡರಿಗಳ ನೆರವಿನಲ್ಲಿ 42 ರನ್ ಗಳಿಸಿದ ದಿಲ್ಶನ್ ಅವರು ಝಂಪಾ ಎಸೆತದಲ್ಲಿ ಜಾರ್ಜ್ ಬೈಲಿಗೆ ಕ್ಯಾಚ್ ನೀಡುವುದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ತನ್ನ ಬ್ಯಾಟಿಂಗ್‌ಗೆ ಇತಿಶ್ರೀ ಹಾಡಿದರು.
330ನೆ ಏಕದಿನ ಪಂದ್ಯವನ್ನಾಡಿದ 39ರ ಹರೆಯದ ದಿಲ್ಶನ್ 1999, ಡಿ.11ರಂದು ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದರು. ಹದಿನೇಳು ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ಅವರು ಏಕದಿನ ಕ್ರಿಕೆಟ್‌ನ 302 ಇನಿಂಗ್ಸ್‌ಗಳಲ್ಲಿ 10,290 ರನ್ ಗಳಿಸಿದ್ದಾರೆ. 22 ಶತಕ ಮತ್ತು 47 ಅರ್ಧಶತಕ ಗಳಿಸಿರುವ ದಿಲ್ಶನ್ ಅವರು ಏಕದಿನ ಕ್ರಿಕೆಟ್‌ನಲ್ಲಿ ದಾಖಲಿಸಿರುವ ಗರಿಷ್ಠ ವೈಯಕ್ತಿಕ ಸ್ಕೋರ್ ಔಟಾಗದೆ 161 ರನ್.
ದಿಲ್ಶನ್ 2011ರ ವಿಶ್ವಕಪ್‌ನಲ್ಲಿ ಗರಿಷ್ಠ ರನ್ ದಾಖಲಿಸಿದ ಸಾಧನೆ ಮಾಡಿದ್ದರು. ಎಲ್ಲ್ಲ ವಿಧದ ಕ್ರಿಕೆಟ್‌ನಲ್ಲಿ ಶತಕ ದಾಖಲಿಸಿದ ಲಂಕಾದ ಏಕೈಕ ಕ್ರಿಕಟಿಗ ಎನಿಸಿಕೊಂಡಿರುವ ದಿಲ್ಶನ್25 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಆಲ್‌ರೌಂಡರ್ ದಿಲ್ಶನ್ 106 ವಿಕೆಟ್ ಪಡೆದಿದ್ದಾರೆ. ವಿಕೆಟ್ ಕೀಪರ್ ಆಗಿಯೂ ಕಾರ್ಯನಿರ್ವಹಿಸಿದ್ದ ದಿಲ್ಶನ್ 1 ಸ್ಟಂಪ್ ಮತ್ತು 122 ಕ್ಯಾಚ್ ಪಡೆದಿದ್ದಾರೆ.
87 ಟೆಸ್ಟ್‌ಗಳಲ್ಲಿ 16 ಶತಕ ಮತ್ತು 23 ಅರ್ಧಶತಕಗಳನ್ನು ಒಳಗೊಂಡ 5,492 ರನ್, ವೈಯಕ್ತಿಕ ಗರಿಷ್ಠ ಸ್ಕೋರ್ 193. 78 ಟ್ವೆಂಟಿ-20 ಪಂದ್ಯಗಳಲ್ಲಿ 1 ಶತಕ ಮತ್ತು 13 ಅರ್ಧಶತಕ ಒಳಗೊಂಡ 1,884 ರನ್ ಗಳಿಸಿದ್ದಾರೆ.







