ಅದೇ ಹಾದಿಯಲ್ಲಿ ಹೊಸ ಚೈತನ್ಯದೊಂದಿಗೆ

ಈ ನಿಮ್ಮ 'ವಾರ್ತಾಭಾರತಿ' ಇಂದು ಹದಿನಾಲ್ಕನೆ ವರ್ಷವನ್ನು ಪ್ರವೇಶಿಸುತ್ತಿದೆ. ಈ ನಮ್ಮ ಯಾತ್ರೆಯ ಹಾದಿಯುದ್ದಕ್ಕೂ ನಮ್ಮ ಜೊತೆ ನಿಂತು ನಮ್ಮನ್ನು ಎಳೆಯುತ್ತಾ, ತಳ್ಳುತ್ತಾ ಕೆಲವೊಮ್ಮೆ ನಮ್ಮನ್ನು ತಮ್ಮ ಹೆಗಲ ಮೇಲೇರಿಸಿಕೊಂಡು ಕೂಡಾ, ನಾವೆಲ್ಲೂ ದಣಿದು ನಿಲ್ಲದಂತೆ, ಹಳಿ ತಪ್ಪದಂತೆ ನೋಡಿಕೊಂಡವರು ನೀವು. ಇಂದು ನಮ್ಮನ್ನು ಇನ್ನೊಂದು ಮಜಲು ದಾಟಿಸಿರುವ ನಿಮಗೆಲ್ಲ ನಾವು ಋಣಿಗಳು. ಪತ್ರಿಕೆ ನಿಮ್ಮದಾದ್ದರಿಂದ ಅಭಿನಂದನೆಗಳೂ ನಿಮಗೇ ಸಲ್ಲಬೇಕು. ಯಾವುದನ್ನೂ ಮತ್ತೆ ಮತ್ತೆ ಮಾಡಿದರೆ ಅದು ಅಭ್ಯಾಸವೆನಿಸಿಕೊಳ್ಳುತ್ತದೆ. ಹಾಗೆಯೇ ಪ್ರತಿ ದಿನ, ಪ್ರತಿ ವಾರ, ಅಥವಾ ಪ್ರತಿ ವರ್ಷ ಒಂದು ನಿರ್ದಿಷ್ಟ ಸಮಯದಲ್ಲೇ ಒಂದು ಕಾರ್ಯವನ್ನು ಪುನರಾವರ್ತಿಸಿದರೆ ಅದು ಸಂಪ್ರದಾಯವೆನಿಸಿಕೊಳ್ಳುತ್ತದೆ. ಈ ಅರ್ಥದಲ್ಲಿ, ಪ್ರತಿಬಾರಿ, ಒಂದೊಂದು ವಾರ್ಷಿಕ ಮೈಲುಗಲ್ಲನ್ನು ದಾಟುವಾಗಲೂ ನಮ್ಮ ಧ್ಯೇಯ, ಗುರಿ, ಧೋರಣೆ, ನಮ್ಮ ಬದ್ಧತೆ, ನಮ್ಮ ಅನನ್ಯತೆ, ನಮ್ಮ ಋಣಗಳು, ಸಾಧನೆಗಳು, ವೈಫಲ್ಯಗಳು ಇತ್ಯಾದಿಗಳನ್ನು ಓದುಗರಿಗೆಲ್ಲ ಕೇಳಿಸುವಂತೆ ತುಸು ಏರಿದ ಧ್ವನಿಯಲ್ಲಿ ಸ್ಮರಿಸಿಕೊಳ್ಳುವುದನ್ನು ಇದೀಗ ನಾವು ಬಹುತೇಕ ನಮ್ಮ ಸಂಪ್ರದಾಯವಾಗಿಸಿ ಕೊಂಡಿದ್ದೇವೆ. ತಮ್ಮ ಪ್ರೋತ್ಸಾಹಕ್ಕೆ ಪಾತ್ರವಾದ ಸಂಪ್ರದಾಯ ಇದು. ಒಂದಿಷ್ಟು ಬಂಡವಾಳವನ್ನು ಕೈಯಲ್ಲಿ ಹಿಡಿದುಕೊಂಡು ಅದನ್ನು ಎಲ್ಲಿ ಹೂಡಿದರೆ ಹೆಚ್ಚು ಲಾಭವಾದೀತೆಂದು ಲೆಕ್ಕ ಹಾಕುತ್ತಾ, ಕೊನೆಗೆ ಪತ್ರಿಕಾ ರಂಗದಲ್ಲಿ ಹೂಡಿ ನೋಡೋಣ ಎಂದು ತಮ್ಮ ಭಾಗ್ಯವನ್ನು ಪರೀಕ್ಷಿಸಲು ಈ ರಂಗಕ್ಕೆ ಬಂದು ಮೈ ಕೈ ಸುಟ್ಟುಕೊಂಡ ಹುಂಬರು ಹಲವರಿದ್ದಾರೆ. ಹಾಗೆಯೇ ಯಾವುದಾದರೂ ಜಾತಿ, ಪಕ್ಷ, ನಾಯಕ ಅಥವಾ ಪಂಗಡದ ಹಿತಾಸಕ್ತಿಯನ್ನು ಬಲಪಡಿಸುವುದಕ್ಕಾಗಿ ಈ ಕ್ಷೇತ್ರಕ್ಕೆ ಬಂದ ಜಾಣರೂ ಓಣಿಗೊಬ್ಬರೆಂಬಂತೆ ಸಿಗುತ್ತಾರೆ. ಒಂದು ಬಲಿಷ್ಠ ಮಾಧ್ಯಮ ನಮ್ಮ ಕೈಯಲ್ಲಿದ್ದರೆ, ಪುಢಾರಿಗಳನ್ನು ಮತ್ತು ಅಧಿಕಾರಿಗಳನ್ನು ಸುಲಭವಾಗಿ ಜೇಬಿಗಿಳಿಸಿಕೊಂಡು ಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳಬಹುದು ಮತ್ತು ಬೇಡದ ಹಲವನ್ನು ಮುಚ್ಚಿ ಹಾಕಬಹುದು ಎಂಬ ಲೆಕ್ಕಾಚಾರದೊಂದಿಗೆ ರಂಗಕ್ಕಿಳಿದ ಠಕ್ಕರೂ ಸಾಕಷ್ಟಿದ್ದಾರೆ. ನಾವು ಈ ಪೈಕಿ ಯಾವ ತರಗತಿಗೂ ಸೇರಿದವರಲ್ಲ ಎಂದು ಅಭಿಮಾನದಿಂದಲೇ ಹೇಳಿಕೊಂಡು ಬಂದಿದ್ದೇವೆ. ನಮ್ಮ ಹಿನ್ನೆಲೆ ಬಲ್ಲವರಿಗೆ ಇದು ಮೊದಲೇ ಗೊತ್ತು. ಇನ್ನು, ನಮ್ಮ ಹಿನ್ನೆಲೆ ಸಂಶೋಧಿಸಲು ಒಂದಷ್ಟು ಕೆದಕಿ ನೋಡಿದವರು ಕಂಡುಕೊಂಡದ್ದೂ ಇಷ್ಟನ್ನೇ. ಹಿನ್ನೆಲೆಯನ್ನು ಸ್ಮರಿಸುವಾಗ ಹಲವು ನೆನಪುಗಳು ಚಿಗುರುವುದುಂಟು. ಅವೆಲ್ಲ ನೇರವಾಗಿ ನಿಮ್ಮ ಪತ್ರಿಕೆಯ ಜನನಕ್ಕೆ ಸಂಬಂಧಿಸಿದ ನೆನಪುಗಳು. ತೊಂಬತ್ತರ ದಶಕದಲ್ಲಿ ದೇಶದೆಲ್ಲೆಡೆ ಹಿಂಸಾತ್ಮಕ ಕೋಮುವಾದದ ತಾಂಡವ ಮೆರೆದಿತ್ತು. ಅದನ್ನು ಹಲವರು ಸರಳೀಕರಿಸಿ ಹಿಂದೂ-ಮುಸ್ಲಿಮ್ ಸಮಸ್ಯೆ ಅಥವಾ ಮಂದಿರ - ಮಸೀದಿ ವಿವಾದ ಎಂಬಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದರು. ಆದರೆ ನಿಜವಾಗಿ ಅದು ಈ ಹಿಂದಿನ, ಅಂದರೆ ಎಂಬತ್ತರ ದಶಕದಲ್ಲಿ ಮಂಡಲ್ ಚಳವಳಿಯ ಮೂಲಕ ದೇಶದ ಹಿಂದುಳಿದ ವರ್ಗಗಳಲ್ಲಿ ಪೌರೋಹಿತ್ಯ ವ್ಯವಸ್ಥೆ ಮತ್ತದರ ಕಠೋರ ಇತಿಹಾಸ ಹಾಗೂ ಕರಾಳ ವರ್ತಮಾನದ ವಿರುದ್ಧ ಬೆಳೆದಿದ್ದ ಸಾಮೂಹಿಕ ಜಾಗೃತಿಗೆ ಪ್ರತ್ಯಸ್ತ್ರವಾಗಿತ್ತು. ಜೊತೆಗೆ ಅದು ಉದಾರೀಕರಣ, ಜಾಗತೀಕರಣ ಹಾಗೂ ಖಾಸಗೀಕರಣ ಎಂಬ ತಳಿರು ತೋರಣಗಳೊಂದಿಗೆ ಭಾರತೀಯರನ್ನು ಮರುಳುಗೊಳಿಸಿ ಅವರನ್ನು ಹೊಸ ವೇಷ ಧರಿಸಿದ, ಹಿಂದಿನದಕ್ಕಿಂತ ತುಂಬಾ ಸಂಕೀರ್ಣವಾದ ನೂತನ ವಸಾಹತು ಶಾಹಿ ತಿಮಿಂಗಲದ ಬಾಯಿಗೆ ತಳ್ಳಲು ಹುನ್ನಾರ ನಡೆಸುತ್ತಿದ್ದವರ ಅಗತ್ಯವಾಗಿತ್ತು. ಈ ದೇಶದ ಬಡವರ, ರೈತರ, ಕಾರ್ಮಿಕರ, ಸಣ್ಣ ಪ್ರಮಾಣದ ವ್ಯಾಪಾರಿಗಳ ಮತ್ತು ಎಲ್ಲ ಜನಸಾಮಾನ್ಯರ ಪಾಲಿಗೆ ವಿಷವಾಗಿದ್ದ ಈ ನೂತನ ವ್ಯವಸ್ಥೆಗೆ ಇಲ್ಲಿನ ಪ್ರಧಾನ ಧಾರೆಯ ರಾಜಕೀಯ ವಲಯದಿಂದ ಯಾವುದೇ ಪರಿಣಾಮಕಾರಿ ಪ್ರತಿರೋಧ ಪ್ರಕಟವಾಗದಂತೆ ಯಶಸ್ವಿಯಾಗಿ ನೋಡಿಕೊಳ್ಳಲಾಗಿತ್ತು. ಆದರೆ ಯಾವ ಬೆಲೆಗೂ ಹರಾಜಾಗದ ಕೆಲವು ಸಾಮಾಜಿಕ ಕಾರ್ಯಕರ್ತರು ಮತ್ತು ಸ್ವಯಂಸೇವಕ ಸಂಘಟನೆಗಳ ಶ್ರಮದಿಂದಾಗಿ ಜನಸಾಮಾನ್ಯರು ಹೊಸ ಬಲೆ, ಸಂಕೋಲೆಗಳ ವಿರುದ್ಧ ಬಂಡೇಳುವ ಸಕಲ ಸಾಧ್ಯತೆಗಳು ಜೀವಂತವಾಗಿದ್ದವು. ಇದು ನೂತನ ವಸಾಹತುಶಾಹಿಯ ಪ್ರತಿಪಾದಕರು ಮತ್ತು ಫಲಾನುಭವಿಗಳ ಪಾಲಿಗೆ ಒಂದು ದೊಡ್ಡ ಸವಾಲಾಗಿತ್ತು. ಇದನ್ನು ಮಟ್ಟ ಹಾಕುವುದಕ್ಕೆ ಕೋಮು ಧ್ರುವೀಕರಣಕ್ಕಿಂತ ಬಲಿಷ್ಠ ಅಸ್ತ್ರ ಬೇರೆ ಇರಲಿಲ್ಲ. ಆದ್ದರಿಂದ ಪುಢಾರಿಗಳು, ಪುರೋಹಿತರು ಮತ್ತು ಬಂಡವಾಳಶಾಹಿಗಳು ತಮ್ಮ ಪ್ರಾಚೀನ ಮೈತ್ರಿಯನ್ನು ಮತ್ತೆ ನವೀಕರಿಸಿಕೊಂಡು ಜೊತೆಗೂಡಿ ಕೋಮು ಧ್ರುವೀಕರಣ ಅಥವಾ ಹಿಂಸಾತ್ಮಕ ಕೋಮುವಾದವೆಂಬ ಅಮಲು ಪದಾರ್ಥದ ಸಾಮೂಹಿಕ ವಿತರಣೆ ಆರಂಭಿಸಿದರು. ತೊಂಬತ್ತರ ದಶಕದಲ್ಲಿ ಅವರ ಈ ಕಾರ್ಯಾಚರಣೆಯ ಫಲಗಳು ಎಲ್ಲೆಡೆ ಕಾಣಿಸಿಕೊಳ್ಳತೊಡಗಿದವು. ಸರಕಾರ ನಡೆಸುವವರು ನಮ್ಮ ಸ್ವಾಭಾವಿಕ ಗ್ರಾಮಗಳನ್ನೆಲ್ಲ ನೆಲಸಮ ಮಾಡುವ 'ಜಾಗತಿಕ ಗ್ರಾಮ'ದ ನಿರ್ಮಾಣಕ್ಕೆ ದಾರಿ ಸುಗಮಗೊಳಿಸುವ ಎಲ್ಲ ಜನದ್ರೋಹಿ ಅಂತಾರಾಷ್ಟ್ರೀಯ ಒಡಂಬಡಿಕೆಗಳಿಗೆ ಸಹಿ ಹಾಕಿದರು. ಕೋಮು ಗಲಭೆಗಳು, ಸ್ಫೋಟಗಳು, ಉದ್ವಿಗ್ನತೆ, ಕರ್ಫ್ಯೂ, ನಿಷೇಧಾಜ್ಞೆ, ಬಂಧನಗಳು ಇತ್ಯಾದಿಗಳಲ್ಲೇ ಮಗ್ನರಾಗಿದ್ದ ಜನಸಾಮಾನ್ಯರು ಇದಾವುದನ್ನೂ ಗಮನಿಸುವ ಸ್ಥಿತಿಯಲ್ಲಿರಲಿಲ್ಲ. ಧರ್ಮ ದೇವರುಗಳನ್ನು ರಕ್ಷಿಸುವ ಗುಂಗಿನಲ್ಲಿ ಅವರು ತಮ್ಮ ಪ್ರಾಥಮಿಕ ಹಿತಾಸಕ್ತಿಗಳನ್ನೂ ಮರೆತುಬಿಟ್ಟರು. ನವ ವಸಾಹತು ಶಾಹಿಯ ವಕ್ತಾರರು ಬಯಸಿದ್ದೆಲ್ಲವೂ ನಿರಾಯಾಸವಾಗಿ ನಡೆಯಿತು. ಜನಾಭಿಪ್ರಾಯವು ಭಾವನಾತ್ಮಕ ನಕಲಿ ಸಮಸ್ಯೆಗಳ ಧಾರೆಯಲ್ಲಿ ಕೊಚ್ಚಿ ಹೋಯಿತು. ಈ ಒಟ್ಟು ಪ್ರಕ್ರಿಯೆಯಲ್ಲಿ ಕಣ್ಣು ಕೋರೈಸುವಂತೆ ಎದ್ದು ಕಂಡದ್ದು ಪ್ರಧಾನ ಧಾರೆಯ ಮಾಧ್ಯಮಗಳ ಪಾತ್ರ. ಅವು ದೇಶದ ಜನಸಾಮಾನ್ಯರು ಮತ್ತವರ ಹಕ್ಕುಗಳು ಹಾಗೂ ಹಿತಾಸಕ್ತಿಗಳ ಕಾವಲಿಗೆ ನಿಂತು ಅವರನ್ನು ರಕ್ಷಿಸುವ ಬದಲು, ಬೇಟೆಗಾರರ ದಲ್ಲಾಳಿಗಳಾಗಿ, ತಮ್ಮ ಧಣಿಗಳ ಪಾಲಿಗೆ ಎಲ್ಲವನ್ನೂ ಸುಗಮಗೊಳಿಸಿ ಕೊಡುವ ಕಾಯಕದಲ್ಲಿ ತೊಡಗಿಕೊಂಡವು. ಧ್ರುವೀಕರಣದ ವಿಷವನ್ನು ಮುಗ್ಧ ಜನರ ಮಿದುಳಿಗೆ ತಳ್ಳುವ ಸೇವೆಯನ್ನು ಬಹಳ ದಕ್ಷತೆಯಿಂದ ನಿರ್ವಹಿಸಿದವು. ಮಾಧ್ಯಮಗಳ ಸಕ್ರಿಯ ಸಹಕಾರ ಹಾಗೂ ಅಮಿತೋತ್ಸಾಹದ ಸಹಭಾಗಿತ್ವ ಇಲ್ಲದಿರುತ್ತಿದ್ದರೆ ಅಕ್ಕಪಕ್ಕದವರನ್ನು ಅನ್ಯರಾಗಿಸುವ ಹಾಗೂ ಪರಸ್ಪರ ವಿಶ್ವಾಸವನ್ನು ಕೆಡವಿ ಎಲ್ಲೆಡೆ ಸಂಶಯವೇ ಮೆರೆಯುವಂತೆ ಮಾಡುವ ಕಾರ್ಯವು ಅಷ್ಟೊಂದು ಪರಿಣಾಮಕಾರಿಯಾಗಿ ಮತ್ತು ಅಷ್ಟು ವ್ಯಾಪಕ ಪ್ರಮಾಣದಲ್ಲಿ ನಡೆಯಲು ಸಾಧ್ಯವೇ ಇರಲಿಲ್ಲ. ಇದು ಒಟ್ಟು ದೇಶದ ಕತೆಯಾದರೆ ಆ ಹಂತದಲ್ಲಿ ನಮ್ಮ ಕನ್ನಡ ನಾಡಿನಲ್ಲಿ ಅದರಲ್ಲೂ ನಮ್ಮ ಅಡಿಗರು, ಕಾರಂತರುಗಳ ನಾಡಿನಲ್ಲಿ ಪರಿಸ್ಥಿತಿ ಇನ್ನಷ್ಟು ಕೊಳಕಾಗಿತ್ತು. ಇಲ್ಲಿ ಮಾಧ್ಯಮ ರಂಗವು ಮೌಲ್ಯನಿಷ್ಠೆ, ತಾತ್ವಿಕ ಬದ್ಧತೆ ಇತ್ಯಾದಿಗಳನ್ನು ಮಾತ್ರವಲ್ಲ, ಪ್ರಾಮಾಣಿಕತೆಯ ಬಾಲ ಪಾಠಗಳನ್ನು ಕೂಡಾ ರದ್ದಿಗೆಸೆದು, ಪರಂಪರಾಗತ ಪ್ರಬಲ ಜಾತಿಗಳ ಪಲ್ಲಕ್ಕಿ ಹೊರುವ, ಸ್ಪರ್ಧಾತ್ಮಕ ಕೋಮು ವಾದವನ್ನು ಸಾಂಕ್ರಾಮಿಕವಾಗಿಸುವ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳನ್ನು ಬಲಪಡಿಸುವ ಸೇವೆಯಲ್ಲಿ ನಿರತವಾಗಿತ್ತು. ಈ ಸನ್ನಿವೇಶವು ಸ್ವಲ್ಪವಾದರೂ ಜಾಗೃತಿ, ಸಂವೇದನೆ ಮತ್ತು ಜನಪರ ಹಿತಚಿಂತನೆ ಇರುವ ಯಾರನ್ನಾದರೂ ನಿದ್ದೆಗೆಡಿಸಿ ಹುಚ್ಚೆಬ್ಬಿಸುವಂತಿತ್ತು. ಪರ್ಯಾಯ ಮಾಧ್ಯಮ ಜಾಲವೊಂದನ್ನು ಬೆಳೆಸಬೇಕೆಂಬ ಭಾವುಕ ತವಕ ಎಲ್ಲೆಲ್ಲೂ ಕಂಡು ಬರುತ್ತಿತ್ತು. ತೊಂಬತ್ತರ ದಶಕದಲ್ಲಿ ಕೆರಳಿದ ಆ ಹುಚ್ಚು ಕನಸು ಮುಂದೆ ಹೊಸ ಸಹಸ್ರಮಾನದಲ್ಲಿ ನಿಜರೂಪ ತಾಳಿ 'ವಾರ್ತಾಭಾರತಿ' ಎಂಬ ಹೆಸರು ಹೊತ್ತು ಸಮಾಜದ ಕೈ ಸೇರಿತ್ತು. ಯಾರಿಗೂ ನಂಬಲಾಗದಷ್ಟು ಸೀಮಿತ ಬಂಡವಾಳದೊಂದಿಗೆ ಆರಂಭವಾದ 'ವಾರ್ತಾ ಭಾರತಿ' ಕಳೆದ ಹದಿಮೂರು ವರ್ಷಗಳ ಅವಧಿಯಲ್ಲಿ ಹಲವಾರು ತೊಡಕುಗಳನ್ನು ಎದುರಿಸಿದ್ದರೂ ಎಂದೂ ಒಂದು ಹೆಜ್ಜೆಯನ್ನು ಕೂಡಾ ಹಿಂದಕ್ಕಿಡದೆ ಮುನ್ನಡೆಯುತ್ತಾ ಬಂದಿದೆ. ಔಪಚಾರಿಕ ಸರಕಾರಿ ಭಾಷೆಯಲ್ಲಿ ಹೇಳುವುದಾದರೆ ಆರಂಭದಲ್ಲಿ 'ಸಣ್ಣ' ಎಂಬ ವರ್ಗಕ್ಕೆ ಸೇರಿದ್ದ ಈ ನಿಮ್ಮ ದಿನಪತ್ರಿಕೆ ಶೀಘ್ರವೇ 'ಮಧ್ಯಮ' ಎಂಬ ವರ್ಗಕ್ಕೆ ಭಡ್ತಿ ಪಡೆಯಿತು. ಸದ್ಯ ಅದು 'ದೊಡ್ಡ' ಪತ್ರಿಕೆಗಳ ಸಾಲಲ್ಲಿ ನಿಂತಿದೆ. ಅದೇ ರೀತಿ ಆರಂಭದಲ್ಲಿ ಸರಕಾರದ ಜಾಹೀರಾತು ನಿಯಮಾವಳಿಯ ಪ್ರಕಾರ 'ಸ್ಥಳೀಯ' ಎಂಬ ಬಿರುದು ಹೊತ್ತಿದ್ದ ಪತ್ರಿಕೆ ಕ್ರಮೇಣ 'ಪ್ರಾದೇಶಿಕ' ಎಂಬ ಸ್ಥಾನಕ್ಕೆ ಭಡ್ತಿ ಪಡೆದು ಇದೀಗ 'ರಾಜ್ಯಮಟ್ಟದ ಪತ್ರಿಕೆ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಾಹೀರಾತು ಕ್ಷೇತ್ರದಲ್ಲೂ ಮುನ್ನಡೆ ಸಾಧ್ಯವಾಗಿದೆ. ಪತ್ರಿಕೆಗೆ ಈ ಹಿಂದೆ ಮರೀಚಿಕೆಯಾಗಿದ್ದ ಕೆಲವು ಪ್ರತಿಷ್ಠಿತ ಉತ್ಪನ್ನಗಳ ಜಾಹೀರಾತುಗಳು ಇದೀಗ ಬರಲಾರಂಭಿಸಿವೆ. ಪತ್ರಿಕೆ ಭಾರೀ ಲಾಭದಲ್ಲಿ ನಡೆಯುತ್ತಿದೆ ಎಂಬ ವದಂತಿಗಳಿಗೆ ಶಕ್ತಿ ತುಂಬುವ ಕೆಲವು ಬೆಳವಣಿಗೆಗಳೂ ಆಗಿವೆ. ಹೊಸ ವೆಬ್ ಆಫ್ ಸೆಟ್ ಯಂತ್ರ ಖರೀದಿಸುವ ಹಾಗೂ ಮುದ್ರಣಾಲಯ ಮತ್ತು ಸಂಪಾದಕೀಯ ಕಚೇರಿಗಾಗಿ ಹೊಸ ಕಟ್ಟಡ ಕಟ್ಟುವ ಸಿದ್ಧತೆ ಆರಂಭವಾಗಿದೆ. ಅದಕ್ಕಾಗಿ ಮಂಗಳೂರು ನಗರದ ಮಧ್ಯಭಾಗದಲ್ಲೇ ಜಮೀನನ್ನು ಖರೀದಿಸಲಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ, ಬಹು ಕಾಲ ಆಮೆಗತಿಯಲ್ಲಿ ಸಾಗಿದ್ದ ನಮ್ಮ ಆನ್‌ಲೈನ್ ಆವೃತ್ತಿಯು ಈ ವರ್ಷ ಅಸಾಮಾನ್ಯ ಜನಮನ್ನಣೆ ಪಡೆದಿದೆ. ಲಕ್ಷಾಂತರ ಮಂದಿ ತಮ್ಮ ಅಂಗೈಯಲ್ಲಿನ ಮೊಬೈಲ್ ಫೋನ್‌ಗಳಲ್ಲಿ ಅಥವಾ ತಮ್ಮ ಮೇಜಿನ ಮೇಲಿನ ಕಂಪ್ಯೂಟರ್‌ಗಳಲ್ಲಿ 'ವಾರ್ತಾಭಾರತಿ'ಯನ್ನು ಓದುತ್ತಿದ್ದಾರೆ. ದೇಶ ವಿದೇಶಗಳ ತಾಜಾ ಸುದ್ದಿಯನ್ನು ಆನ್‌ಲೈನ್ ಆವೃತ್ತಿಯ ಮೂಲಕ ಒದಗಿಸುವ ನಮ್ಮ ಕೊಡುಗೆಗೆ ಲೋಕದೆಲ್ಲೆಡೆಯ ಕನ್ನಡಿಗರಿಂದ ಭಾರೀ ಉತ್ಸಾಹದ ಪ್ರತಿಕ್ರಿಯೆ ಸಿಕ್ಕಿದೆ. ಈ ರೀತಿ ತನ್ನ ತಾತ್ವಿಕ ಗಟ್ಟಿತನಕ್ಕೆ ಖ್ಯಾತವಾಗಿದ್ದ ನಿಮ್ಮ 'ವಾರ್ತಾ ಭಾರತಿ' ಇದೀಗ ತಾಂತ್ರಿಕ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದೆ. ಆನ್ ಲೈನ್ ಆವೃತ್ತಿಯ ಜನಪ್ರಿಯತೆ ಹೆಚ್ಚಿದಂತೆ, ಸಂಪಾದಕರಿಗೆ ಪತ್ರ, ಪ್ರತಿಕ್ರಿಯೆ, ವಿಮರ್ಶೆ, ಸಲಹೆ ಸೂಚನೆ ಇತ್ಯಾದಿ ರೂಪಗಳಲ್ಲಿ ಓದುಗರ ಸಕ್ರಿಯ ಪಾಲುದಾರಿಕೆ ಗಣನೀಯವಾಗಿ ವೃದ್ಧಿಸಿದೆ.
ಯಾವ ಸನ್ನಿವೇಶಕ್ಕೆ ಉತ್ತರವಾಗಿ 'ವಾರ್ತಾ ಭಾರತಿ' ಹುಟ್ಟಿಕೊಂಡಿತ್ತೋ ಅದು ಇಂದು ಮತ್ತಷ್ಟು ಜಟಿಲ ಸ್ವರೂಪದಲ್ಲಿ ನಮ್ಮನ್ನು ಕೆಣಕುತ್ತಿದೆ. ಇಂತಹ ಸನ್ನಿವೇಶದಲ್ಲಿ ನಾವು ನಮ್ಮ ಪ್ರಯಾಣದುದ್ದಕ್ಕೂ ಸಮಾಜಕ್ಕೆ ನಮ್ಮಿಂದಾಗುವ ಚಿಕ್ಕಪುಟ್ಟ ಗುಣಾತ್ಮಕ ಕೊಡುಗೆಗಳನ್ನು ನೀಡುತ್ತಾ ಬಂದಿದ್ದೇವೆ. ಹಾಗೆಯೇ ನಾವು ನಮ್ಮ ಮೊದಲ ದಿನದ ಬದ್ಧತೆಯನ್ನು ಇಂದಿಗೂ ಉಳಿಸಿಕೊಂಡಿದ್ದೇವೆ. ಈ ಮಧ್ಯೆ ನಮ್ಮಿಂದ ಸಾವಿರ ತಪ್ಪುಗಳಾಗಿವೆ. ಅವು ನಮ್ಮ ಗಮನಕ್ಕೆ ಬಂದಾಗಲೆಲ್ಲ ಅಥವಾ ಯಾರಾದರೂ ಅವುಗಳನ್ನು ನಮ್ಮ ಗಮನಕ್ಕೆ ತಂದಾಗಲೆಲ್ಲ ನಾವು ಒಪ್ಪಿಕೊಂಡಿದ್ದೇವೆ, ತಿದ್ದಿಕೊಂಡಿದ್ದೇವೆ. ಅದೇ ವೇಳೆ ವಿವಿಧ ಬಗೆಯ ಒತ್ತಡ, ಬೆದರಿಕೆ ಇತ್ಯಾದಿಗಳನ್ನು ಯಶಸ್ವಿಯಾಗಿ ಪ್ರತಿರೋಧಿಸಿದ್ದೇವೆ. ಯಾರ ಒತ್ತಡಕ್ಕೂ ಮಣಿಯದೆ ಯಾರ ಜೊತೆಗೂ ರಾಜಿಗಿಳಿಯದೆ ಮುಂದೆ ಸಾಗಿದ್ದೇವೆ. ಇದು ನಾವು ಮಾತ್ರ ಅಲ್ಲ, ಪತ್ರಿಕೆಯ ನೈಜ ಧಣಿಗಳಾದ ನೀವೂ ಅಭಿಮಾನ ಪಡಬಹುದಾದ ವಿಚಾರ.





