ಎಬಿವಿಪಿಯ ‘ಕರಾಳ ಸಿದ್ಧಾಂತ ಹಾಗೂ ರಾಜಕೀಯವನ್ನು’ ಬಿಚ್ಚಿಟ್ಟ ಸಂಘಟನೆಯ ಜೆಎನ್‌ಯು ಘಟಕದ ಮಾಜಿ ಉಪಾಧ್ಯಕ್ಷ ಜತಿನ್

ಇತ್ತೀಚೆಗೆ ಎಬಿವಿಪಿಯ ಜೆಎನ್‌ಯು ಘಟಕದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಜತಿನ್ ಗೊರಯ ತಮ್ಮ ರಾಜೀನಾಮೆ ಪತ್ರದಲ್ಲಿ ಎಬಿವಿಪಿಯ ‘ಕರಾಳ ಸಿದ್ಧಾಂತ ಹಾಗೂ ರಾಜಕೀಯ’’ವನ್ನು ಬಿಚ್ಚಿಟ್ಟಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರವನ್ನು ಫೇಸ್‌ಬುಕ್‌ನಲ್ಲೂ ಪೋಸ್ಟ್ ಮಾಡಿದ್ದಾರೆ. ಅದರ ಅನುವಾದ ಹೀಗಿದೆ.
‘‘ನಾನು ಎಬಿವಿಪಿಯ ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿ ಈ ಜಾತೀವಾದಿ, ಅಸಂಬದ್ಧ ಹಾಗೂ ಪುರುಷ ಪ್ರಧಾನ ಸಂಘಟನೆಯಿಂದ ನನ್ನನ್ನು ದೂರ ಸರಿಸುತ್ತಿದ್ದೇನೆ. ಎಬಿವಿಪಿಯ ನಡೆಯು ಅದರ ಫ್ಯಾಸಿಸ್ಟ್ ಹಾಗೂ ಸಂಕುಚಿತ ಮುಖವನ್ನು ಬಹಿರಂಗಪಡಿಸಿದೆ. ಅವರು ರೋಹಿತ್ ವೇಮುಲಾನ ಸಾಂಘಿಕ ಹತ್ಯೆಯಿಂದ ಹಿಡಿದು ಫೆಬ್ರವರಿ 9 ರ ಜೆಎನ್‌ಯು ಘಟನೆ ಹಾಗೂ ಉನಾದಲ್ಲಿ ದಲಿತರು ಸಾಮಾಜಕಿಕ ನ್ಯಾಯ ಹಾಗೂ ಆತ್ಮಸಮ್ಮಾನಕ್ಕಾಗಿ ಸಿಡಿದೆದ್ದ ಘಟನೆಗಳಲ್ಲಿ ಪುರೋಗಾಮಿ ನಿಲುವು ತಳೆದಿದ್ದಾರೆ. ರಾಷ್ಟ್ರೀಯತೆ, ರಾಷ್ಟ್ರ-ವಿರೋಧಿ ಇವುಗಳ ಬಗ್ಗೆ ನಕಲಿ ಉಪಮೆಗಳನ್ನು ಸೃಷ್ಟಿಸಿ ತಮ್ಮದೇ ಆದ ಹೇಸಿಗೆ ಹುಟ್ಟಿಸುವಂತಹ ರಾಷ್ಟ್ರೀಯತೆಯ ವಾದವನ್ನು ನಮ್ಮ ಮೇಲೆ ಹೇರಿ ನಮ್ಮ ಸಂಘಟನೆಯನ್ನೇ ಅಪಮಾನಿಸುತ್ತಿದ್ದಾರೆ.
ರೋಹಿತ್ ವೇಮುಲಾನ ಸಾಂಘಿಕ ಹತ್ಯೆಯನ್ನು ಆತ್ಮಹತ್ಯೆಯೆಂದು ಬಿಂಬಿಸಿ ಅದರಲ್ಲಿ ಶಾಮೀಲಾದವರನ್ನು ರಕ್ಷಿಸಲು ಅವರು ಯತ್ನಿಸುತ್ತಿರುವುದು ಅವರು ಯಾವತ್ತೂ ಸಾಮಾಜಿಕ ನ್ಯಾಯ ಸಿದ್ಧಾಂತಕ್ಕೆ ಬದ್ಧರಾಗಿಲ್ಲವೆಂಬುದನ್ನು ತಿಳಿಸುತ್ತದೆ.
ಗೋ ರಕ್ಷಣೆಯ ಹೆಸರಿನಲ್ಲಿ ದೇಶದೆಲ್ಲೆಡೆ ದಲಿತರು ಹಾಗೂ ಮುಸ್ಲಿಮರ ಹತ್ಯೆ ನಡೆಯುತ್ತಿದೆ. ದಲಿತರನ್ನು ತುಳಿದು, ಅವಮಾನಿಸಿ, ಹಲ್ಲೆಗೈದು ಕೊಲ್ಲಲು ಈ ಗೋ ರಕ್ಷಕರಿಗೆ ಫ್ಯಾಸಿಸ್ಟ್ ಶಕ್ತಿಗಳು ಪೂರ್ಣ ಸ್ವಾತಂತ್ರ್ಯ ನೀಡಿವೆ. ಅಸಮಾನತೆ, ಭೇದಭಾವ ಹಾಗೂ ಅವಕಾಶವಾದಿ ಸಿದ್ಧಾಂತದ ಮೇಲೆ ಕಟ್ಟಲಾಗಿರುವ ಸಂಘಟನೆಯೊಂದು ತಾನು ರಾಷ್ಟ್ರೀಯವಾದಿ ಎಂದು ಯಾವ ವಿಧದಲ್ಲೂ ಹೇಳುವ ಹಾಗಿಲ್ಲ.
ಬ್ರಾಹ್ಮಣತ್ವ ಹಾಗೂ ಸಂಕುಚಿತ ರಾಷ್ಟ್ರೀಯವಾದವು ಅವರ ಸಿದ್ಧಾಂತದಲ್ಲಿ ಹಾಸುಹೊಕ್ಕಾಗಿವೆ. ಅವರ ರಾಜಕೀಯ ಕೇವಲ ಭಾವನಾತ್ಮಕ ಮನವಿ ಹಾಗೂ ವಾಕ್ಚಾತುರ್ಯದ ಮೇಲೆ ಅವಲಂಬಿತವಾಗಿದೆ. ಆರೆಸ್ಸೆಸ್ ಮುಖ್ಯಸ್ಥರ ಹಾಗೂ ಅವರ ಸಂಘಟನೆ ಹಾಗೂ ಸಂಯೋಜಿತ ಪಕ್ಷಗಳ ಸ್ತ್ರೀ ದ್ವೇಷಿ ಹೇಳಿಕೆಗಳು ನನ್ನ ‘ಸ್ವಂತಿಕೆ’ಯನ್ನು ಪ್ರಶ್ನಿಸುತ್ತಿದೆ ಹಾಗೂ ನಾನು ಈ ಸಮಾಜ ವಿರೋಧಿ ಹಾಗೂ ದೇಶ ವಿರೋಧಿ ವಿದ್ಯಾರ್ಥಿ ಘಟಕದ ಭಾಗವಾಗಿರಬೇಕೇ ಎಂದು ಪ್ರಶ್ನಿಸುತ್ತಿದೆ.
ಈ ದೇಶದ ದಲಿತರು, ಮಹಿಳೆಯರು ಹಾಗೂ ತುಳಿತಕ್ಕೊಳಗಾದವರ ಪರವಾಗಿ ಹಾಗೂ ಅವರ ಸಮಾನತೆಗಾಗಿ ಎದ್ದು ನಿಲ್ಲುವ ಸಮಯ ಬಂದಿದೆ. ಆದರೆ ಪುರುಷ ಪ್ರಧಾನ ಸಂಘ ಪರಿವಾರ ಸಂಘಟನೆಗಳು ಮಹಿಳೆಯರನ್ನು ಮನೆಯೊಳಗೇ ಇರಿಸುವ, ಅವರ ಮೇಲೆ ಪ್ರಭುತ್ವ ಸಾಧಿಸುವ ಹಾಗೂ ಧರ್ಮದ ಸಂಕೋಲೆಯಲ್ಲಿ ಅವರನ್ನು ಬಂಧಿಯಾಗಿಸುವ ಬಗ್ಗೆ ವಿವರಣೆ ನೀಡುತ್ತವೆ.
ಜೆಎನ್‌ಯು ವಿದ್ಯಾರ್ಥಿ ಯೂನಿಯನ್ ಚುನಾವಣೆಯ ಹಿನ್ನೆಲೆಯಲ್ಲಿ ನಾವೆಲ್ಲರೂ ಸಂಘಟಿತರಾಗಿ ಇಂತಹ ಫ್ಯಾಸಿಸ್ಟ್ ಬ್ರಾಹ್ಮಣವಾದಿ ಸಂಘಟನೆಗಳನ್ನು ಕಿತ್ತೊಗೆಯಬೇಕಾಗಿದೆ. ಧಾರ್ಮಿಕ, ತಾರತಮ್ಯ ನೀತಿ ಹಾಗೂ ಸರ್ವಾಧಿಕಾರಿ ನೀತಿಯ ಮೇಲೆ ದೇಶವನ್ನು ಕಟ್ಟುವ ನಿಮ್ಮ ಪರಿಕಲ್ಪನೆಯನ್ನು ನಾವು ಯಾವತ್ತೂ ಒಪ್ಪುವುದಿಲ್ಲವೆಂದು ಅವರಿಗೆ ಹೇಳುವ ಸಮಯ ಬಂದಿದೆ.
ರೋಹಿತ್ ನನ್ನು ಅಷ್ಟು ಸುಲಭವಾಗಿ ಸಾಯಲು ನಾವು ಬಿಡುವುದಿಲ್ಲ. ಅವರು ಪ್ರತಿಪಾದಿಸಿದ ಸಾಮಾಜಿಕ ನ್ಯಾಯ, ಮಾನವೀಯತೆ ಹಾಗೂ ಸಮಾನತೆಯ ಸಿದ್ಧಾಂತಗಳನ್ನು ಮೂಲೆಗುಂಪಾಗಿಸಿದ ಎಬಿವಿಪಿ, ಬಿಜೆಪಿ ಹಾಗೂ ಫ್ಯಾಸಿಸ್ಟ್ ಶಕ್ತಿಗಳನ್ನು ಕಾಡಿ ಅವರ ಗೋಡೆಗಳನ್ನು ಅಲುಗಾಡಿಸಲಿವೆ.
ಅವರಿಗೆ ಸೊಲುಣಿಸಲು ಸಕಲ ಪ್ರಯತ್ನಗಳನ್ನೂ ಮಾಡುವ ಸಮಯ ಬಂದಿದೆ. ಜೆಎನ್‌ಯು ವಿದ್ಯಾರ್ಥಿ ಯೂನಿಯನ್ ಚುನಾವಣೆ ಇದಕ್ಕೆ ಒಂದು ಅವಕಾಶವೊದಗಿಸಿದೆ. ಅವರನ್ನು ಈ ಕ್ಯಾಂಪಸ್ಸಿನಿಂದ ತೊಡೆದು ಹಾಕಿ ಮುಂದೆ ಯಾವ ಸಂಘಟನೆಯೂ ಸಾಮಾಜಿಕ ನ್ಯಾಯದ ಚಿಂತನೆಯನ್ನು ಹರಿದು ಹಾಕದಂತೆ ಮಾಡಬೇಕಿದೆ.
ನಾವು ಚರ್ಚೆ ನಡೆಸುತ್ತೇವೆ, ಅಸಮ್ಮತಿ ವ್ಯಕ್ತಪಡಿಸುತ್ತೇವೆ ಹಾಗೂ ಪ್ರತಿಯೊಬ್ಬರೂ ಗೌರವದ ಬದುಕು ಬಾಳುವಂತಹ ಯಾರನ್ನೂ ಶೋಷಿಸದಂತಹ ಹಾಗೂ ಯಾರ ಹಕ್ಕು ಅಥವಾ ಸ್ವಾತಂತ್ರ್ಯವನ್ನು ದಮನಿಸದಂತಹ ಸಮಾಜದ ಬಗ್ಗೆ ಕನಸು ಕಾಣುತ್ತೇವೆ. ನನ್ನ ರಾಜೀನಾಮೆ ರೋಹಿತ್ ವೇಮುಲ ಪ್ರತಿಪಾದಿಸಿದ ಸಿದ್ಧಾಂತಗಳಿಗೆ ಸಂದ ಗೌರವ. ಭಗ್ವ ಬ್ರಿಗೇಡ್ ವಿರುದ್ಧ ರೋಹಿತ್ ನಡೆಸಿದ ಹೋರಾಟ ನಮ್ಮೆಲ್ಲರಲ್ಲೂ ಜೀವಂತವಾಗಿದ್ದು ಈ ಶಕ್ತಿಗಳ ವಿರುದ್ಧ ನಮ್ಮ ಕೊನೆಯುಸಿರಿರುವ ತನಕವೂ ಹೋರಾಡಿ ಅವರ ಬೋಗಸ್ ಅಭಿಯಾನಗಳನ್ನು ಪ್ರತಿ ಬಾರಿಯೂ ಸೋಲಿಸುತ್ತೇವೆ.’’
ಜತಿನ್ ಗೊರಯ
ಜೆಎನ್‌ಯು ವಿಲ್ ಫೈಟ್‌ಬ್ಯಾಕ್! ರೋಹಿತ್ ವಿಲ್ ಫೈಟ್‌ಬ್ಯಾಕ್! ಸ್ಟ್ಯಾಂಡ್ ವಿದ್ ಜೆಎನ್‌ಯು! ಸ್ಟ್ಯಾಂಡ್ ವಿದ್ ರೋಹಿತ್ ವೇಮುಲ! ಜೈ ಭೀಮ್! ಇಂಕ್ವಿಲಾಬ್ ಜಿಂದಾಬಾದ್!







