ಎಚ್ಚರ... ಸಿರಿಂಜ್ ಗಳಿಂದ ಹರಡುತ್ತಿದೆ ರೋಗ
ದಾದಿಯರು ಚುಚ್ಚುಮದ್ದಿನ ಸಿರಿಂಜ್ ಕೊರತೆ ಸ್ಥಿತಿ ಎದುರಿಸುತ್ತಿದ್ದಾರೆ. ಅವರಿಗೆ ಇರುವುದು ಎರಡೇ ಆಯ್ಕೆ. ಸಿರಿಂಜ್‌ಗಳನ್ನು ಮರು ಬಳಕೆ ಮಾಡುವುದು ಅಥವಾ ರೋಗಿಗಳಲ್ಲಿ ಹೊಸ ಸಿರಿಂಜ್ ಖರೀದಿಸಲು ಸೂಚಿಸುವುದು. ಆದರೆ ಬಡಜನತೆ, ಇದನ್ನು ಆಸ್ಪತ್ರೆಗಳೇ ಉಚಿತವಾಗಿ ನೀಡಬೇಕು ಎಂದು ನಿರೀಕ್ಷಿಸುವುದರಿಂದ ಹೊಸದಾಗಿ ಖರೀದಿಸಿ ತರಲು ಹೇಳಿದರೆ, ವಾಗ್ವಾದಕ್ಕೆ ಅವಕಾಶವಾಗುತ್ತದೆ. ಆದ್ದರಿಂದ ಮರುಬಳಕೆ ಮಾಡುವುದೇ ಸುಲಭ ಎಂದು ದಾದಿಯರು ನಿರ್ಧಾರಕ್ಕೆ ಬಂದಿದ್ದಾರೆ.
ಮುಂಬೈನ ಅತಿದೊಡ್ಡ ತ್ಯಾಜ್ಯ ಸಂಗ್ರಹ ಮೈದಾನದ ಕೊಳಗೇರಿಯಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಯುನಾನಿ ವೈದ್ಯರ ಬಳಿಗೆ ದಿನಕ್ಕೆ ಸರಾಸರಿ 50 ರೋಗಿಗಳು ಬರುತ್ತಾರೆ. ಕೇವಲ 20 ರೂಪಾಯಿಯಲ್ಲಿ ಅವರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಔಷಧ, ಮಾತ್ರೆ ನೀಡುವ ಜತೆಗೆ ಅಗತ್ಯ ಚುಚ್ಚುಮದ್ದುಗಳನ್ನೂ ನೀಡುತ್ತಾರೆ. ಗೋವಾಂಡಿಯ ಶಿವಾಜಿ ನಗರದಲ್ಲಿರುವ ಅವರ ಕ್ಲಿನಿಕ್‌ನ ಡ್ರಾವರ್‌ನಲ್ಲಿ ಪೆಟ್ಟಿಗೆ ತುಂಬಾ ಬಳಕೆ ಮಾಡಲಾದ ಸಿರಿಂಜ್‌ಗಳಿವೆ. ಇವು ವಾಸ್ತವವಾಗಿ ಒಂದು ಬಾರಿ ಉಪಯೋಗಿಸಿ ಬಿಸಾಕುವ ಸಿರಿಂಜ್‌ಗಳು. ಒಂದು ಬಾರಿ ಚುಚ್ಚುಮದ್ದು ನೀಡಿದ ಬಳಿಕ, ಆ ವೈದ್ಯ, ಆ ಸೂಜಿಯನ್ನು ತ್ಯಾಜ್ಯ ಬುಟ್ಟಿಗೆ ಎಸೆದು ನಾಶಮಾಡುತ್ತಾರೆ. ಆದರೆ ಸಿರಿಂಜ್‌ಗಳನ್ನು ತಮ್ಮ ತುಂಬಿದ ಪೆಟ್ಟಿಗೆಗೆ ಹಾಕುತ್ತಾರೆ. ‘‘ಸೂಜಿಗಳನ್ನು ಮರುಬಳಕೆ ಮಾಡಬಾರದು ಎಂಬ ಬಗ್ಗೆ ನನಗೆ ಜಾಗೃತಿ ಇದೆ. ಆದರೆ ಸಿರಿಂಜ್‌ಗಳನ್ನು ಬಳಸಬಹುದು’’ ಎನ್ನುವುದು ಅವರ ವಾದ. ಇದರಲ್ಲಿ ಯಾವ ಹಾನಿಯೂ ಇಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾರೆ.
ಆದರೆ ವಾಸ್ತವವಾಗಿ ಈ ವೈದ್ಯರ ಅಭಿಪ್ರಾಯ ತಪ್ಪು. ಕೇವಲ ಸೂಜಿಗಳನ್ನಲ್ಲ; ಸಿರಿಂಜ್‌ಗಳನ್ನು ಕೂಡಾ ಮರುಬಳಕೆ ಮಾಡುವಂತಿಲ್ಲ. ಏಕೆಂದರೆ ಸಿರಿಂಜ್‌ಗಳು ಕೂಡಾ ರಕ್ತದಲ್ಲಿರುವ ಸೋಂಕುಗಳಾದ ಎಚ್‌ಐವಿ ಅಥವಾ ಹೆಪಟೈಟಿಸ್‌ಗಳನ್ನು ಹರಡುವ ಸಾಧ್ಯತೆ ಇರುತ್ತದೆ. ಭಾರತದ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ಪ್ರಕಾರ, ಕಳೆದ ವರ್ಷ ದೇಶದಲ್ಲಿ ಸುಮಾರು 86 ಸಾವಿರ ಹೊಸ ಏಡ್ಸ್ ಪ್ರಕರಣಗಳು ಪತ್ತೆಯಾಗಿವೆ. ವೈರಲ್ ಹೆಪಟೈಟಿಸ್, ಭಾರತವೂ ಸೇರಿದಂತೆ ಆಗ್ನೇಯ ಏಷ್ಯಾ ವಿಭಾಗದಲ್ಲಿ ವಾರ್ಷಿಕ 3.5 ಲಕ್ಷ ಮಂದಿಯನ್ನು ಬಲಿ ಪಡೆಯುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶ ಹೇಳುತ್ತದೆ. ಆದರೆ ಭಾರತದಲ್ಲಿ ಈ ಮಾರಕ ರೋಗ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ನಿಖರವಾಗಿ ತಿಳಿಸುವ ಅಧ್ಯಯನಗಳು ಇದುವರೆಗೆ ನಡೆದಿಲ್ಲ. ಹರ್ಯಾಣದ ರೋಹ್ಟಕ್‌ನಲ್ಲಿರುವ ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣ ಸಂಸ್ಥೆಯ ಗ್ಯಾಸ್ಟ್ರೊಎಂಟ್ರೋಟ್ರೆರಾಲಜಿ ವಿಭಾಗದ ಮುಖ್ಯಸ್ಥ ಡಾ.ಪ್ರವೀಣ್ ಮಲ್ಹೋತ್ರಾ ಹೇಳುವಂತೆ, ‘‘ಒಂದು ಚುಚ್ಚುಮದ್ದು ರಕ್ತದಲ್ಲಿ ಸೋಂಕು ಇರುವ ಯಾವುದೇ ವ್ಯಕ್ತಿಗೆ ನೀಡುವಾಗ, ಸೂಜಿಯಲ್ಲಿ ಇರುವ ವೈರಸ್‌ಗಳು ಸಿರಿಂಜ್‌ನಲ್ಲೂ ಅಂಟಿಕೊಳ್ಳುತ್ತವೆ. ಆದ್ದರಿಂದ ಈ ಮರುಬಳಕೆ ಮಾಡಿದ ಸಿರಿಂಜ್ ನಿರ್ವಹಿಸುವ ಇತರರಿಗೂ ಇದು ಹರಡುವ ಸಾಧ್ಯತೆ ಇದೆ’’
ಆದ್ದರಿಂದ ಯಾವುದೇ ಬಳಸಿದ ಸಿರಿಂಜ್ ಹಾಗೂ ಸೂಜಿಗಳನ್ನು ತಕ್ಷಣ ವಿಲೇವಾರಿ ಮಾಡುವುದು ಸಾಂಪ್ರದಾಯಿಕ ವೈದ್ಯಕೀಯ ಸಲಹೆ. 2012ರಲ್ಲಿ ಲಾಸ್‌ವೇಗಸ್‌ನ ನೆವಾಡ ವಿಶ್ವವಿದ್ಯಾನಿಲಯ ಒಂದು ಸಂಶೋಧನಾ ವರದಿಯನ್ನು ಇಂಡಿಯನ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟಿಸಿತು. ಇದರ ಪ್ರಕಾರ, ಭಾರತದಲ್ಲಿ ಶೇ.12ರಷ್ಟು ಎಚ್‌ಐವಿ ಸೋಂಕು ಅಸುರಕ್ಷಿತ ಚುಚ್ಚುಮದ್ದಿನಿಂದ ಹರಡುತ್ತದೆೆ. ಇದೇ ಅಧ್ಯಯನದ ಪ್ರಕಾರ, ಶೇ.46ರಷ್ಟು ಹೆಪಟೈಟಿಸ್ ಬಿ ಪ್ರಕರಣಗಳು ಹಾಗೂ ಶೇ.38ರಷ್ಟು ಹೆಪಟೈಟಿಸ್ ಸಿ ಪ್ರಕರಣಗಳು ಭಾರತದಲ್ಲಿ ಸಿರಿಂಜ್ ಹಾಗೂ ಸೂಜಿಗಳ ಮರುಬಳಕೆಯಿಂದ ಹರಡುತ್ತದೆ. ಇಂಥ ಪ್ರಕರಣಗಳನ್ನು ಸುಲಭವಾಗಿ ತಪ್ಪಿಸಬಹುದು. ಅಂದರೆ ತೀರಾ ಅಗ್ಗದ ಬಳಸಿ ಬಿಸಾಕುವ ಸಿರಿಂಜ್‌ಗೆ ಕೇವಲ ಆರು ರೂಪಾಯಿ ವೆಚ್ಚವಾಗುವುದು. ವೈದ್ಯರು, ದಾದಿಯರು ಏಕೆ ಸಿರಿಂಜ್ ಮರುಬಳಕೆ ಮಾಡುತ್ತಾರೆ? ಇದಕ್ಕೆ ಮುಖ್ಯ ಕಾರಣ ಕೊರತೆ.
ನಗ್ಮಾ ಖುರೇಷಿ ಎಂಬ 22ರ ಮಹಿಳೆ ಗೋವಂಡಿಯಲ್ಲಿ ವಾಸಿಸುತ್ತಾರೆ. ಮೊದಲ ಬಾರಿಗೆ ಗರ್ಭಿಣಿ, ಆಕೆ ಪಾಲಿಕೆಯ ಗರ್ಭಿಣಿಯರ ತಪಾಸಣಾ ವ್ಯವಸ್ಥೆಯಾದ ರಾಜೇವಾಡಿ ಆಸ್ಪತ್ರೆಗೆ ಹೋದಳು. ಸಾಮಾನ್ಯವಾಗಿ ಆಕೆಗೆ ಚುಚ್ಚುಮದ್ದು ಹಾಕಿಸಿಕೊಳ್ಳುವಂತೆ ಸಲಹೆ ನೀಡಲಾಗುತ್ತದೆ. ಆದರೆ ನರ್ಸ್ ಚುಚ್ಚುಮದ್ದು ನೀಡಿ, ಅದನ್ನು ಕಸದ ಬುಟ್ಟಿಗೆ ಬಿಸಾಕುವುದನ್ನು ಆಕೆ ನೋಡಿಯೇ ಇಲ್ಲ. ಅವರು ಬಂದು ತಕ್ಷಣ ಚುಚ್ಚುಮದ್ದು ನೀಡುತ್ತಾರೆ. ಆಕೆ ಹೊಸ ಪ್ಯಾಕ್‌ನಿಂದ ಸಿರಿಂಜ್ ತೆಗೆಯುವುದು ನಾವು ನೋಡಿಯೇ ಇಲ್ಲ ಎಂದು ಖುರೇಷಿ ಹೇಳುತ್ತಾರೆ. ಆರೋಗ್ಯ ಕ್ಷೇತ್ರದ ತಜ್ಞರು ಹೇಳುವಂತೆ ದಾದಿಯರು ಚುಚ್ಚುಮದ್ದಿನ ಸಿರಿಂಜ್ ಕೊರತೆ ಸ್ಥಿತಿ ಎದುರಿಸುತ್ತಿದ್ದಾರೆ. ಅವರಿಗೆ ಇರುವುದು ಎರಡೇ ಆಯ್ಕೆ. ಸಿರಿಂಜ್‌ಗಳನ್ನು ಮರು ಬಳಕೆ ಮಾಡುವುದು ಅಥವಾ ರೋಗಿಗಳಲ್ಲಿ ಹೊಸ ಸಿರಿಂಜ್ ಖರೀದಿಸಲು ಸೂಚಿಸುವುದು.
ಆದರೆ ಬಡಜನತೆ, ಇದನ್ನು ಆಸ್ಪತ್ರೆಗಳೇ ಉಚಿತವಾಗಿ ನೀಡಬೇಕು ಎಂದು ನಿರೀಕ್ಷಿಸುವುದರಿಂದ ಹೊಸದಾಗಿ ಖರೀದಿಸಿ ತರಲು ಹೇಳಿದರೆ, ವಾಗ್ವಾದಕ್ಕೆ ಅವಕಾಶವಾಗುತ್ತದೆ. ಆದ್ದರಿಂದ ಮರುಬಳಕೆ ಮಾಡುವುದೇ ಸುಲಭ ಎಂದು ದಾದಿಯರು ನಿರ್ಧಾರಕ್ಕೆ ಬಂದಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಸಿರಿಂಜ್ ಅಥವಾ ಸೂಜಿಗಳ ಮರುಬಳಕೆ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮುಖ್ಯಸ್ಥ ಡಾ. ಪ್ರವೀಣ್ ಸಿಂಗಾರೆ ಹೇಳುತ್ತಾರೆ. ಸಾಕಷ್ಟು ಪ್ರಮಾಣದಲ್ಲಿ ಸರಕಾರ ಇವುಗಳನ್ನು ಪೂರೈಸುತ್ತದೆ ಎನ್ನುವುದು ಅವರ ವಾದ. ಅಗತ್ಯ ಬಿದ್ದರೆ ಸ್ಥಳೀಯವಾಗಿ ಖರೀದಿಸಲು ಕೂಡಾ ಅನುಮತಿ ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸುತ್ತಾರೆ. ಆದರೆ ಭಾರತದಲ್ಲಿ ಸಿರಿಂಜ್‌ಗಳನ್ನು ಮರುಬಳಕೆ ಮಾಡಲಾಗುತ್ತಿರುವ ಅಂಶ ಹಲವು ಅಧ್ಯಯನಗಳಿಂದ ದೃಢಪಟ್ಟಿದೆ.
ವಿಷಮುಕ್ತ ಪರಿಸರ ಸ್ಥಾಪನೆ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಐಪಿಇಎನ್ ಎಂಬ ಜಾಗತಿಕ ಮಟ್ಟದ ಸಂಸ್ಥೆ, ಭಾರತದ ಚುಚ್ಚುಮದ್ದು ನೀಡಿಕೆ ವಿಧಾನದ ಬಗ್ಗೆ ಕೈಗೊಂಡ ಅಧ್ಯಯನದ ಅಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ಸೌತ್ ಈಸ್ಟ್ ಏಷ್ಯಾ ಜರ್ನಲ್ ಆಫ್ ಪಬ್ಲಿಕ್ ಹೆಲ್ತ್ ಇನ್ 2012 ವರದಿಯಲ್ಲಿ ಪ್ರಕಟಿಸಲಾಗಿದೆ. ಭಾರತದ ಆಸ್ಪತ್ರೆಗಳಲ್ಲಿ ನೀಡುತ್ತಿರುವ 10 ಚುಚ್ಚುಮದ್ದುಗಳ ಪೈಕಿ ಆರನ್ನು ಅಸುರಕ್ಷಿತ ವಿಧಾನದ ಮೂಲಕ ನೀಡಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಚುಚ್ಚುಮದ್ದು ಸುರಕ್ಷಾ ಮಾರ್ಗಸೂಚಿಯನ್ನು ವೈದ್ಯರು ಅನುಸರಿಸದಿದ್ದರೆ, ಅಂಥ ಚುಚ್ಚುಮದ್ದನ್ನು ಅಸುರಕ್ಷಿತ ವಿಧಾನದ ಚುಚ್ಚುಮದ್ದು ಎಂದು ಪರಿಗಣಿಸಲಾಗುತ್ತದೆ. ಚುಚ್ಚುಮದ್ದು ನೀಡಿದ ತಕ್ಷಣ ಸೂಜಿ ಹಾಗೂ ಸಿರಿಂಜ್‌ಗಳನ್ನು ಒಂದು ಚೀಲಕ್ಕೆ ಎಸೆಯುವುದನ್ನು ಕಡ್ಡಾಯವಾಗಿ ಎಲ್ಲ ವೈದ್ಯರೂ ಮಾಡಲೇಬೇಕು.
ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಚುಚ್ಚುಮದ್ದು ಸುರಕ್ಷಾ ಮಾರ್ಗಸೂಚಿಯನ್ನು ವೈದ್ಯರು ಅನುಸರಿಸದಿದ್ದರೆ, ಅಂಥ ಚುಚ್ಚುಮದ್ದನ್ನು ಅಸುರಕ್ಷಿತ ವಿಧಾನದ ಚುಚ್ಚುಮದ್ದು ಎಂದು ಪರಿಗಣಿಸಲಾಗುತ್ತದೆ. ಚುಚ್ಚುಮದ್ದು ನೀಡಿದ ತಕ್ಷಣ ಸೂಜಿ ಹಾಗೂ ಸಿರಿಂಜ್‌ಗಳನ್ನು ಒಂದು ಚೀಲಕ್ಕೆ ಎಸೆಯುವುದನ್ನು ಕಡ್ಡಾಯವಾಗಿ ಎಲ್ಲ ವೈದ್ಯರೂ ಮಾಡಲೇಬೇಕು.
ಛತ್ತೀಸ್‌ಗಡದ ರಾಯಪುರದಲ್ಲಿರುವ ಪಂಡಿತ್ ಜವಾಹರ್‌ಲಾಲ್ ನೆಹರೂ ಸ್ಮಾರಕ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಸಮುದಾಯ ಔಷಧ ವಿಭಾಗ ನಡೆಸಿದ ಒಂದು ಅಧ್ಯಯನದ ಪ್ರಕಾರ, ವೈದ್ಯಕೀಯ ಸಿಬ್ಬಂದಿ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಚುಚ್ಚುಮದ್ದು ಸುರಕ್ಷಾ ಮಾರ್ಗಸೂಚಿಗಳನ್ನು ಅನುಸರಿಸುವಲ್ಲಿ ವಿಫಲರಾಗಿದ್ದಾರೆ. ಸುರಕ್ಷಿತ ಚುಚ್ಚುಮದ್ದು ಪದ್ಧತಿಯನ್ನು ಸರಕಾರಿ ಆಸ್ಪತ್ರೆಗಳಲ್ಲಿ ಅನುಸರಿಸುವ ಬಗ್ಗೆ ಪರಿಶೀಲಿಸಲು ವೈದ್ಯರು ಕೈಗೊಂಡ ತಪಾಸಣೆಯಿಂದ ತಿಳಿದುಬರುವಂತೆ 10 ಪ್ರಕರಣಗಳ ಪೈಕಿ 9 ಪ್ರಕರಣಗಳಲ್ಲಿ ದಾದಿಯರು ಸೂಜಿಯನ್ನು ಚುಚ್ಚುಮದ್ದು ನೀಡಿದ ಬಳಿಕ ನಾಶಪಡಿಸುವುದಿಲ್ಲ. ಪಂಡಿತ್ ಜವಾಹರ್‌ಲಾಲ್ ನೆಹರೂ ಸ್ಮಾರಕ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಸಮುದಾಯ ಔಷಧ ವಿಭಾಗ ನ್ಯಾಷನಲ್ ಜರ್ನಲ್ ಆಫ್ ಕಮ್ಯುನಿಟಿ ಮೆಡಿಸಿನ್ ಪ್ರಕಟಿಸಿದ ಇನ್ನೊಂದು ಅಧ್ಯಯನ ವರದಿಯ ಪ್ರಕಾರ, ಅಧ್ಯಯನಕ್ಕೆ ಒಳಪಡಿಸಿದ 2,119 ಪ್ರಕರಣಗಳ ಪೈಕಿ ಶೇ.23ರಷ್ಟು ಪ್ರಕರಣಗಳಲ್ಲಿ ದಾದಿಯರು ಒಂದು ಡೋಸ್ ಚುಚ್ಚುಮದ್ದು ನೀಡಿದ ಬಳಿಕ ಮತ್ತೊಂದು ಡೋಸ್ ನೀಡುವ ಸಲುವಾಗಿ ಹಾಗೆಯೇ ಇಡುತ್ತಾರೆ. ವಾಸ್ತವವಾಗಿ ಅದನ್ನು ಒಂದು ಬಾರಿ ನೀಡಿದ ಬಳಿಕ ನಾಶಪಡಿಸಬೇಕು ಎನ್ನುವುದು ಸಮುದಾಯ ಔಷಧ ವಿಭಾಗದ ಡಾ.ದಿವ್ಯಾ ಸಾಹು ಅವರ ಸಲಹೆ.
ಅದೇ ಅಧ್ಯಯನದ ಪ್ರಕಾರ ಕೇವಲ ಸೂಜಿಯನ್ನಷ್ಟೇ ಎಸೆದು, ಸಿರಿಂಜ್‌ಗಳನ್ನು ಮರುಬಳಕೆ ಮಾಡುವುದು ಕೂಡಾ ತಿಳಿದುಬಂದಿದೆ. ಶೇ.26ರಷ್ಟು ಪ್ರಕರಣಗಳಲ್ಲಿ ಸಿರಿಂಜ್‌ಗಳನ್ನು ಮಕ್ಕಳಿಗೆ ಕೈಗೆಟುಕವ ಜಾಗಗಳಲ್ಲಿ ಇಡುವುದು ಕೂಡಾ ಅಧ್ಯಯನದಿಂದ ಬಹಿರಂಗವಾಗಿದೆ.
ವೈದ್ಯಕೀಯ ಜೈವಿಕ ತ್ಯಾಜ್ಯ ವಿಲೇವಾರಿ ಕೇವಲ ಸಿರಿಂಜ್‌ಗಳನ್ನು ಮರುಬಳಕೆ ಮಾಡುವುದಷ್ಟೇ ಆತಂಕದ ವಿಷಯವಲ್ಲ. ವೈದ್ಯರ ಸಂಶಯದಂತೆ, ಒಮ್ಮೆ ಬಳಸಿದ ಸಿರಿಂಜ್‌ಗಳನ್ನು ಮರು ಪ್ಯಾಕ್ ಮಾಡಿ, ಮತ್ತೆ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ನೀಡುವ ದೊಡ್ಡ ಉದ್ಯಮ ಜಾಲವೇ ಇದೆ. ‘‘ಸೂಜಿ ಹಾಗೂ ಸಿರಿಂಜ್ ಮರುಬಳಕೆ ಮಾಡುವುದು ನಮಗೆ ಗೊತ್ತಾಗಿದೆ. ಅಂತೆಯೇ ಇದನ್ನು ಮರುಬಳಕೆಗೆ ಪೂರೈಸುವ ಜಾಲವೇ ಇರುವುದೂ ಸ್ಪಷ್ಟ’’ ಎನ್ನುತ್ತಾರೆ ರೋಹ್ಟಕ್ ಸ್ನಾತಕೋತ್ತರ ವೈದ್ಯ ವಿಜ್ಞಾನ ಕೇಂದ್ರದ ಡಾ.ಮಲ್ಹೋತ್ರಾ, ಹರ್ಯಾಣ ವೈದ್ಯರು ಆತಂಕ ವ್ಯಕ್ತಪಡಿಸಿದ ಇಂಥ ಮರುಬಳಕೆ ಉದ್ಯಮದ ಜಾಲದ ಆತಂಕವನ್ನು ಮುಂಬೈ ವೈದ್ಯರೂ ವ್ಯಕ್ತಪಡಿಸುತ್ತಾರೆ.
ಮುಂಬೈನ ಹಲವು ಕೊಳಗೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ, ವೈದ್ಯಕೀಯ ತ್ಯಾಜ್ಯಗಳನ್ನು ಕೂಡಾ ಮನೆಗಳ ಕಸದ ಬುಟ್ಟಿಗೇ ಎಸೆದಿರುವುದು ಕೂಡಾ ತಿಳಿದುಬಂದಿದೆ. ಭರತ್‌ನಗರ ಕೊಳಗೇರಿಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುವ ದಂತವೈದ್ಯ ಕ್ಲಿನಿಕ್‌ನಲ್ಲಿ ಚಹಾ ಕಪ್ ಎಸೆಯಲು ಹಾಗೂ ಇಂಜೆಕ್ಷನ್ ಸಿರಿಂಜ್‌ಗಳನ್ನು ಎಸೆಯಲು ಒಂದೇ ಕಸದ ಬುಟ್ಟಿ ಇರುವುದು ಕಂಡುಬಂದಿದೆ. ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಕ್ಲಿನಿಕ್ ಎಂದೂ ಕಾನೂನುಬದ್ಧವಾಗಿ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ. ಮನೆಗಳ ಕಸ ಸಂಗ್ರಹಿಸುವ ವ್ಯಕ್ತಿಯೇ ವೈದ್ಯಕೀಯ ತ್ಯಾಜ್ಯವನ್ನು ಕೂಡಾ ಸಂಗ್ರಹಿಸಿ ಒಟ್ಟಿಗೇ ರಾಶಿ ಹಾಕಿ ಒಯ್ಯುತ್ತಿದ್ದಾನೆ ಎಂದು ಮೂರು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿರುವ ಸಹಾಯಕ ವಿವರಿಸಿದ್ದಾರೆ. ಇದರಲ್ಲಿ ಕೈಗವಸು, ಇಂಜೆಕ್ಷನ್ ಸಿರಿಂಜ್ ಹಾಗೂ ಹತ್ತಿ ಇರುತ್ತದೆ.
ದಿನಕ್ಕೆ 100 ಮಂದಿಗೆ ಚಿಕಿತ್ಸೆ ನೀಡುತ್ತಿರುವುದಾಗಿ ಹೇಳಿಕೊಳ್ಳುತ್ತಿರುವ ಯುನಾನಿ ಕ್ಲಿನಿಕ್ ಕೂಡಾ ಇಂಥ ವಿಧಾನದ ಮೂಲಕವೇ ತ್ಯಾಜ್ಯ ವಿಲೇವಾರಿ ಮಾಡುತ್ತಿದೆ. ಮುಂಬೈನಲ್ಲಿ ಕಾರ್ಪೊರೇಟ್ ಆಸ್ಪತ್ರೆಗಳು, ನರ್ಸಿಂಗ್‌ಹೋಮ್, ಕ್ಲಿನಿಕ್‌ಗಳು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ವೈದ್ಯಕೀಯ ಸಂಘ ಸಂಸ್ಥೆಗಳಿದ್ದು, ವೈದ್ಯಕೀಯ ತ್ಯಾಜ್ಯ ವಿಲೇವಾರಿಗೆ ನಿರ್ದಿಷ್ಟ ವ್ಯವಸ್ಥೆ ಇದೆ. ಸ್ಥಳೀಯ ಮಹಾನಗರ ಪಾಲಿಕೆ ವೈದ್ಯಕೀಯ ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ಖಾಸಗಿ ಏಜೆನ್ಸಿಯನ್ನು ನಿಯುಕ್ತಿಗೊಳಿಸಿದ್ದು, ಅದು ಅವುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. 2014ರಲ್ಲಿ 12 ಸಾವಿರ ಟನ್ ವೈದ್ಯಕೀಯ ತ್ಯಾಜ್ಯಗಳು ಉತ್ಪತ್ತಿಯಾಗಿವೆ. ಇಲ್ಲಿ ರೋಗಿಗಳು ಜಾಗೃತರಾಗಿರಬೇಕು ಎಂದು ಹೇಳುವುದು ಸರಿಯಲ್ಲ. ಇಂಥ ಅಪಾಯಕಾರಿ ತ್ಯಾಜ್ಯಗಳನ್ನು ವಿಲೇವಾರಿ ಮಾಡುವವರನ್ನೇ ಇದಕ್ಕೆ ಹೊಣೆ ಮಾಡಬೇಕಾಗುತ್ತದೆ ಎಂದು ಸೋಂಕು ರೋಗಗಳ ತಜ್ಞ ಡಾ.ಓಂ ಶ್ರೀವಾಸ್ತವ ಹೇಳುತ್ತಾರೆ. ಕೆಲವರು ಕೆಲ ಹಂತದಲ್ಲಿ ಈ ನಿಟ್ಟಿನಲ್ಲಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎನ್ನುವುದು ವೈರಲ್ ಹೆಪಟೈಟಿಸ್‌ನಿಂದ ತಿಳಿಯುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.
ಉಲ್ಲಂಘಿಸುವವರಿಗೆ ಶಿಕ್ಷೆ
ಮುಂಬೈನಲ್ಲಿ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡುವ ಸಂಸ್ಥೆಯೊಂದರ ಅಂದಾಜಿನ ಪ್ರಕಾರ, ಕೆಲ ಆಸ್ಪತ್ರೆಗಳಿಂದ ಬಳಸಿದ, ಕೈಗವಸು, ಸಿರಿಂಜ್ ಹಾಗೂ ಸೂಜಿಯಂಥ ತ್ಯಾಜ್ಯಗಳು ಬೂದು ಮಾರುಕಟ್ಟೆಗೆ ಹರಿದು, ಪುನರ್ ಬಳಕೆಯಾಗುತ್ತದೆ. 2010ರಲ್ಲಿ ಮುಂಬೈ ಪೊಲೀಸರು ಟೆಂಪೋದಲ್ಲಿ ಇಂಥ ತ್ಯಾಜ್ಯ ಒಯ್ಯುತ್ತಿದ್ದ ಪ್ರಕರಣವನ್ನು ದೇವನಾರ್‌ನಲ್ಲಿ ಪತ್ತೆ ಮಾಡಿದ್ದರು. ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೂಡಾ ಈ ಸಾಧ್ಯತೆಯನ್ನು ತಳ್ಳಿಹಾಕುವುದಿಲ್ಲ. ಯಾವುದೇ ದೂರು ಬಂದರೆ ಆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯ ವೈಜ್ಞಾನಿಕ ಅಧಿಕಾರಿ ಅಮರ್ ಸುಪಾತೆ ಹೇಳುತ್ತಾರೆ. ಇಂಥ ಮರುಬಳಕೆ ಉದ್ಯಮ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಆ ಕಂಪೆನಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯನ್ನು ತಪಾಸಣೆ ಮಾಡುವುದು ಕಷ್ಟಸಾಧ್ಯ ಎಂದು ಅವರು ಹೇಳುತ್ತಾರೆ. ಪಾಲಿಕೆ ಈ ಬಗ್ಗೆ ಎಚ್ಚರ ವಹಿಸಿದರೆ, ಅಂಥ ಗುತ್ತಿಗೆದಾರರ ಲೈಸನ್ಸ್ ರದ್ದು ಮಾಡಬಹುದು ಎಂದು ಅಭಿಪ್ರಾಯಪಡುತ್ತಾರೆ. ಆದರೆ ಮುಂಬೈ ಪಾಲಿಕೆ ಅಧಿಕಾರಿಗಳು, ಈ ಜವಾಬ್ದಾರಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೇರಿದ್ದು ಎಂದು ಹೇಳುತ್ತಿದ್ದಾರೆ. ಹೀಗೆ ಪರಸ್ಪರ ಗೂಬೆ ಕೂರಿಸುವ ವ್ಯವಸ್ಥೆಯ ದುರ್ಲಾಭವನ್ನು ವೈದ್ಯಕೀಯ ಸಂಸ್ಥೆಗಳು ಪಡೆದುಕೊಳ್ಳುತ್ತಿವೆ.
ಸ್ಮಾರ್ಟ್ ಪರಿಹಾರ
ಇಂಥ ಸಮಸ್ಯೆಗೆ ಪರಿಹಾರ ದೊರಕಿಸುವ ಪ್ರಯತ್ನವಾಗಿ ಮಲ್ಹೋತ್ರಾ ಅವರ ಇಲಾಖೆ ಹರ್ಯಾಣದಲ್ಲಿ ಹೆಪಟೈಟಿಸ್ ಬಿ ಅಧಿಕ ಇರುವ ಪ್ರದೇಶಗಳ ಎಲ್ಲ ವೈದ್ಯರಿಗೆ ಉಚಿತವಾಗಿ ಸೂಜಿ ತುಂಡರಿಸುವ ಸಾಧನವನ್ನು ವಿತರಿಸಿದೆ. ಮರುಬಳಕೆದಾರರ ಕೈಗೆ ಇದು ಸಿಕ್ಕದಂತೆ ಎಚ್ಚರ ವಹಿಸಲು ಬರ್ನರ್‌ಗಳನ್ನೂ ನೀಡಲಾಗಿದೆ. ಇಷ್ಟಾಗಿಯೂ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ವೈದ್ಯರಿಗೆ ಹಾಗೂ ದಾದಿಯರ ವಿವೇಚನೆಗೆ ಬಿಟ್ಟ ವಿಚಾರ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಅನ್ವಯ ಸುರಕ್ಷಿತ ವಿಧಾನ ಅನುಸರಿಸಲು ನೆರವಾಗುವಂತೆ ಹಲವು ರಾಜ್ಯಗಳು ಸ್ಮಾರ್ಟ್ ಇಂಜೆಕ್ಷನ್ ಪದ್ಧತಿ ಜಾರಿಗೆ ತಂದಿದೆ. ಇವುಗಳಲ್ಲಿ ಮಹಾರಾಷ್ಟ್ರ ಕೂಡಾ ಒಂದು. ಆದರೆ ಇದಕ್ಕೆ ಶೇ.20ರಷ್ಟು ಹೆಚ್ಚು ವೆಚ್ಚ ತಗುಲುತ್ತದೆ ಎಂದು ಉದ್ಯಮ ವಲಯ ಹೇಳುತ್ತದೆ. ಸರಕಾರಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಇಂಥ ಸ್ಮಾರ್ಟ್ ಇಂಜೆಕ್ಷನ್ ಖರೀದಿಸುವುದು ಸಾಧ್ಯವಾದರೆ, ಬಡವರ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯರಿಗೆ ಏಕಾಗುವುದಿಲ್ಲ?.