ಬೆಳ್ತಂಗಡಿ: ಕೃಷ್ಣೋತ್ಸವ ಸಂದರ್ಭ ಮಾನವ ಗೋಪುರದಿಂದ ಬಿದ್ದು ಗಾಯಗೊಂಡಿದ್ದ ಯುವಕ ಮೃತ್ಯು

ಬೆಳ್ತಂಗಡಿ, ಆ.29: ಬೆಳ್ತಂಗಡಿ ನಗರದಲ್ಲಿ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ರವಿವಾರ ನಡೆದ ಗೋವಿಂದೋತ್ಸವದಲ್ಲಿ ಮಾನವ ನಿರ್ಮಿತ ಪಿರಮಿಡ್ ಅಟ್ಟಳಿಗೆಗೆ ಹತ್ತಿ ಇಳಿಯುವ ಸಂದರ್ಭ ಆಕಸ್ಮಿಕವಾಗಿ ಜಾರಿ ಬಿದ್ದು ಯುವಕನೊರ್ವ ಗಂಭೀರ ಗಾಯಗೊಂಡು ಸೋಮವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪುಂಜಾಲಕಟ್ಟೆಯ ದೈಕಿನಕಟ್ಟೆ ನಿವಾಸಿ ಪಿ.ಎಂ. ಪ್ರಭಾಕರ ಪೂಜಾರಿ ಎಂಬವರ ಪುತ್ರ ಶಿಶಿರ್ ಕುಮಾರ್ ಪಿ.(22) ಎಂಬುವರೇ ಮೃತಪಟ್ಟವರು.
ಸಂತೆಕಟ್ಟೆ ಬಳಿ ಗೋವಿಂದೋತ್ಸವದಲ್ಲಿ ಭಾಗವಹಿಸಿದ ಈತ ಎತ್ತರದ ಅಟ್ಟಳಿಗೆಗೆ ಮಾನವ ನಿರ್ಮಿತ ಪಿರಮಿಡ್ ಮೂಲಕ ಹತ್ತಿ ಮಡಕೆಗಳನ್ನು ಹೊಡೆದು ಇಳಿಯುವ ಸಂದರ್ಭ ಕಾಲು ಹಾಗೂ ಕೈ ಜಾರಿ ಕೆಳಗೆ ಬಿದ್ದಿದ್ದಾರೆ. ಗೋವಿಂದ ಸ್ಪರ್ಧೆಯ ಸಂದರ್ಭದಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿಲ್ಲ ಎನ್ನಲಾಗಿದ್ದು ರಸ್ತೆ ಬದಿಯಲ್ಲಿಯೇ ಸ್ಪರ್ಧೆಯನ್ನು ನಡೆಸಲಾಗಿತ್ತು. ಆಯತಪ್ಪಿ ಬಿದ್ದ ಈತನನ್ನು ಹಿಡಿಯಲು ಯಾವುದೇ ವ್ಯವಸ್ಥೆಗಳಿರಲಿಲ್ಲ ಎನ್ನಲಾಗಿದೆ. ಈತ ನೆಲಕ್ಕೆ ಬಿದ್ದ ಪರಿಣಾಮ ತಲೆಗೆ ತೀವ್ರದ ತರದ ಗಾಯವಾಗಿತ್ತು. ತಕ್ಷಣ ಈತನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಶಿಶಿರ್ ಸೋಮವಾರ ಮೃತಪಟ್ಟಿದ್ದಾರೆ. ಮೃತನ ತಂದೆ ಪ್ರಭಾಕರ್ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಶಿಶಿರ್ ಪ್ರತಿಭಾವಂತ ಕಲಾವಿದನಾಗಿದ್ದು ಎಳವೆಯಿಂದಲೇ ಮಿಮಿಕ್ರಿ ಕಲೆಯಲ್ಲಿ ಮಿಂಚಿದ್ದರು. ಪ್ರೌಢಶಾಲಾ ವಿಭಾಗದಲ್ಲಿ ಮಿಮಿಕ್ರಿಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು. ಕಾಲೇಜು ದಿನಗಳಲ್ಲಿ ಪ್ರಹಸನ, ನಾಟಕಗಳಲ್ಲಿ ಮುಂದಿದ್ದರು. ಶ್ರೀ ರಾಮಾಂಜನೇಯ ಭಜನ ತಂಡದ ಸದಸ್ಯರಾಗಿದ್ದರು.
ಪ್ರೆಸ್‌ನಲ್ಲಿ ಉದ್ಯೋಗಿಯಾಗಿರುವ ಪಿ.ಎಂ.ಪ್ರಭಾಕರ ಅವರ ಇಬ್ಬರು ಪುತ್ರರಲ್ಲಿ ಹಿರಿಯವರಾದ ಶಿಶಿರ್ ಮನೆಗೆ ಆಧಾರಸ್ತಂಭವಾಗಬೇಕಾಗಿದ್ದರು. ಬಿ.ಕಾಂ.ಪದವಿ ಬಳಿಕ ಬೆಂಗಳೂರು ಕಂಪೆನಿಯೊಂದರಲ್ಲಿ ಆರು ತಿಂಗಳ ಹಿಂದೆ ಉದ್ಯೋಗಕ್ಕೆ ಸೇರಿದ್ದರು. ಅಲ್ಲಿಂದ ಬಂದ ಯುವಕ ಸ್ಥಳೀಯವಾಗಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದೀಗ ಈತನ ಅಸಹಜ ಸಾವಿನೊಂದಿಗೆ ಮನೆಯ ಆಧಾರ ಸ್ಥಂಭವೇ ಕುಸಿದು ಬಿದ್ದಂತಾಗಿದೆ.
ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಸೂಕ್ತವದ ಸುರಕ್ಷಾ ಕ್ರಮಗಳನ್ನು ಅನುಸರಿಸದ ಆಯೋಜಕರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.







