ಮಹಿಳಾ ಪೊಲೀಸರಿಗೆ ಹಿಜಾಬ್ ಧರಿಸಲು ಅನುಮತಿಸಿದ ಟರ್ಕಿ ಸರಕಾರ

ಇಸ್ತಾಂಬುಲ್, ಆ.29: ಟರ್ಕಿಯ ಮಹಿಳಾ ಪೊಲೀಸರಿಗೆ ತಮ್ಮ ಸಮವಸ್ತ್ರದ ಭಾಗವಾಗಿ ಹಿಜಾಬ್ ಧರಿಸಲು ಅಲ್ಲಿನ ಸರಕಾರ ಪ್ರಥಮ ಬಾರಿಗೆ ಅನುಮತಿಸಿದೆ. ‘‘ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸುವ ಮಹಿಳೆಯರು ತಮ್ಮ ಹಿಜಾಬ್ ಅನ್ನು ಕ್ಯಾಪ್ ಅಡಿಯಲ್ಲಿ ಧರಿಸಬಹುದಾದರೂ, ಅವರ ಹಿಜಾಬ್ ಅವರ ಸಮವಸ್ತ್ರದ ಬಣ್ಣವನ್ನೇ ಹೊಂದಿರಬೇಕು ಮತ್ತು ಯಾವ ಡಿಸೈನ್‌ನ್ನೂ ಹೊಂದಿರಬಾರದು’’ಎಂದು ಶನಿವಾರ ಪ್ರಕಟವಾದ ಅಧಿಕೃತ ಗಜೆಟ್‌ನಲ್ಲಿ ಹೇಳಲಾಗಿದೆ.
ಈ ಸರಕಾರಿ ಆದೇಶ ಕೂಡಲೇ ಜಾರಿಯಾಗುವುದು. ಹಿಜಾಬ್ ಧರಿಸುವ ಮಹಿಳೆಯರ ಮೇಲೆ ವಿಧಿಸಲಾದ ನಿರ್ಬಂಧವನ್ನು ಅಧಿಕೃತವಾಗಿ ಜಾತ್ಯತೀತವಾಗಿರುವ ದೇಶದಿಂದ ತೆಗೆದು ಹಾಕಬೇಕೆಂದು ಆಡಳಿತ ಜಸ್ಟಿಸ್ ಆ್ಯಂಡ್ ಡೆವಲಪ್‌ಮೆಂಟ್ ಪಾರ್ಟಿ (ಎಕೆಪಿ) ಬಹಳ ಕಾಲದಿಂದ ಒತ್ತಾಯಿಸುತ್ತಿದೆ.
2010 ರಲ್ಲಿ ದೇಶದ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸುಗಳಲ್ಲಿ ಹಿಜಾಬ್ ಮೇಲೆ ವಿಧಿಸಲಾದ ನಿರ್ಬಂಧವನ್ನು ತೆಗೆದು ಹಾಕಲಾಗಿತ್ತು. ಇತರ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು 2013ರಲ್ಲಿ ಅನುಮತಿಸಲಾಗಿದ್ದರೆ, ಹೈಸ್ಕೂಲುಗಳಲ್ಲಿ 2014 ರಿಂದ ಹಿಜಾಬ್ ಅನುಮತಿಸಲಾಗಿತ್ತು.
ಟರ್ಕಿಶ್ ರಿಪಬ್ಲಿಕ್ ದೇಶವನ್ನು 1923ರಲ್ಲಿ ಸ್ಥಾಪಿಸುವಾಗ ಅದರ ಸ್ಥಾಪಕ ಮುಸ್ತಾಫ ಕೆಮಲ್ ಅತಾತುರ್ಕ್ ಅಳವಡಿಸಿದ್ದ ಆಧುನಿಕ ಟರ್ಕಿಯ ಜಾತ್ಯತೀತ ಆಧಾರಸ್ಥಂಭಗಳನ್ನು ದೇಶದ ಈಗಿನ ಅಧ್ಯಕ್ಷ ಎರ್ದೊಗಾನ್ ಅವರು ಇಲ್ಲವಾಗಿಸುತ್ತಿದ್ದಾರೆಂಬ ಆರೋಪ ಬಹಳ ಸಮಯದಿಂದ ಕೇಳಿ ಬಂದಿತ್ತು.
ಈ ತಿಂಗಳ ಆರಂಭದಲ್ಲಿ ಸ್ಕಾಟ್‌ಲ್ಯಾಂಡ್ ಕೂಡ ಲಂಡನ್ನಿನ ಮಹಿಳಾ ಪೊಲೀಸರಂತೆ ತನ್ನ ಮಹಿಳಾ ಪೊಲೀಸರಿಗೆ ಹಿಜಾಬ್ ಧರಿಸಲು ಅನುಮತಿಸಿದ್ದರೆ, ಕೆನಡಾ ಸರಕಾರ ಕೂಡ ರಾಯ್ ಕೆನಡಿಯನ್ ಮೌಂಟೆಡ್ ಪೊಲೀಸ್ ಪಡೆಯಲ್ಲಿರುವ ಮಹಿಳೆಯರಿಗೆ ಸಮವಸ್ತ್ರದ ಭಾಗವಾಗಿ ಹಿಜಾಬ್ ಧರಿಸುವುದನ್ನು ಅನುಮತಿಸಿತ್ತು.







