ವಿಭಿನ್ನವಾಗಿ ಜನತೆಗೆ ‘ಕ್ಲೀನ್ ಗಂಗಾ’ ಸಂದೇಶ ನೀಡುತ್ತಿದ್ದಾಳೆ 11ರ ಬಾಲೆ

ಕಾನ್ಪುರ್, ಆ.29: ಈಜು ಕ್ಷೇತ್ರದ ಅದ್ಭುತ ಪ್ರತಿಭೆ ‘ನನ್ಹಿ ಜಲ್ ಪರಿ’ ಎಂದೇ ಪ್ರಸಿದ್ಧಳಾಗಿರುವ 11 ವರ್ಷದ ಬಾಲೆ ಶ್ರದ್ಧಾ ಶುಕ್ಲಾ ತನ್ನ ‘ಕ್ಲೀನ್ ಗಂಗಾ’ ಸಂದೇಶವನ್ನು ಜನರಿಗೆ ತಲುಪಿಸಲು ಕಾನ್ಪುರದಿಂದ ವಾರಣಾಸಿ ತನಕದ 550 ಕಿ.ಮೀ. ದೂರವನ್ನು 70 ಗಂಟೆಗಳ ಕಾಲ ಈಜಾಡುವ ಮೂಲಕ ಕ್ರಮಿಸಲು ನಿರ್ಧರಿಸಿದ್ದಾಳೆ.
ತನ್ನ ಈ ಸಾಹಸವನ್ನು ರಾಷ್ಟ್ರೀಯ ಕ್ರೀಡಾ ದಿನವಾದ ಇಂದು ಕಾನ್ಪುರದ ಮೆಸ್ಸಾಕರ್ ಘಾಟ್ ಸಮೀಪ ಗಂಗಾ ನದಿಗಿಳಿಯುವ ಮೂಲಕ ಆರಂಭಿಸಿರುವ ಶ್ರದ್ಧಾ ಹತ್ತನೆ ದಿನದಂದು ವಾರಣಾಸಿ ತಲುಪಲಿದ್ದಾಳೆ. ಆಕೆ ಪ್ರತಿ ದಿನ ಸುಮಾರು ಏಳು ಗಂಟೆಗಳ ಕಾಲ ಈಜಲಿದ್ದಾಳೆ.
ಹಲವಾರು ಪೂಜಾ ವಿಧಿ ಹಾಗೂ ಮಂತ್ರೋಚ್ಛಾರಣೆಯ ನಡುವೆ ತನ್ನ ಗಂಗಾ ಶುದ್ಧೀಕರಣ ಸಂದೇಶವನ್ನು ಸಾರಲು ಶ್ರದ್ಧಾ ಗಂಗೆಗೆ ಧುಮುಕಿ ಈಜಾಡುವ ಸಾಹಸಕ್ಕೆ ಕೈಹಾಕಿದ್ದಾಳೆ. ಪ್ರಥಮ ದಿನವಾದ ಇಂದು ಆಕೆ ಉನ್ನಾವೋದಲ್ಲಿರುವ ಚಂದ್ರಿಕಾ ದೇವಿ ಘಾಟ್ ತನಕ ಈಜಲಿದ್ದಾಳೆಂದು ಅವಳ ತಂದೆ ಲಲಿತ್ ಶುಕ್ಲಾ ಹೇಳಿದ್ದಾರೆ.
ತನ್ನ ಈ ಸಾಹಸಮಯ ಈಜನ್ನು ಶ್ರದ್ಧಾ ಪೂರ್ತಿಗೊಳಿಸಿದರೆ ಹಾಗೆ ಮಾಡಿದ ಪ್ರಥಮ ಭಾರತೀಯ ಬಾಲಕಿ ಎಂಬ ಹೆಗ್ಗಳಿಕೆಗೆ ಆಕೆ ಪಾತ್ರಳಾಗುತ್ತಾಳೆ. 2014ರಲ್ಲಿ ಆಕೆ ಕಾನ್ಪುರದಿಂದ ಅಲಹಾಬಾದ್ ತನಕ 892 ಕಿ.ಮೀ. ದೂರವನ್ನು ಈಜುವ ಮೂಲಕ ಕ್ರಮಿಸಿದ್ದಳು.







