ತನಗೊಂದು ಕಿಡ್ನಿ ಕೊಡಿಸಿ ಎಂದು ಪ್ರಧಾನಿಗೆ ಮೊರೆ ಇಟ್ಟ ರಾಜಸ್ಥಾನದ ಬಾಲಕಿ

ಭಿಲ್‌ವಾಡಾ,ಆ.29: ರಾಜಸ್ಥಾನದ ಓರ್ವ ಬಾಲಕಿ ಪ್ರಧಾನಿ ನರೇಂದ್ರ ಮೋದಿಗೆ ತನಗೊಂದು ಕಿಡ್ನಿ ಕೊಡಿಸಿ ಎಂದು ಮೊರೆಯಿಟ್ಟಿದ್ದಾಳೆ. ಸಾವು ಬದುಕಿನ ನಡುವೆ ಹೊಯ್ದಾಡುತ್ತಿರುವ ಖುಶಿ ಎಂಬ ಹದಿನಾರು ವರ್ಷದ ಬಾಲೆಯ ಎರಡು ಕಿಡ್ನಿಗಳು ವಿಫಲವಾಗಿದ್ದು,ಕಿಡ್ನಿಜೋಡಣೆ ಶಸ್ತ್ರಚಿಕಿತ್ಸೆ ಅಗತ್ಯವಿದೆ. ಆದ್ದರಿಂದ ತನಗೊಂದು ಕಿಡ್ನಿ ಕೊಡಿಸುವಂತೆ ಅವಳು ಪ್ರಧಾನಿಯ ಮೊರೆ ಹೋಗಿದ್ದಾಳೆಂದು ವರದಿಯಾಗಿದೆ.
ವರದಿಯಾಗಿರುವ ಪ್ರಕಾರ ಬಿಲ್‌ವಾಡಾದ ಖುಶಿ ಕಲಿತು ತಾನು ವೈದ್ಯೆಯಾಗಲು ಬಯಸುತ್ತಿದ್ದಾಳೆ. ಆದರೆ ಅವಳ ಕನಸ್ಸಿಗೆ ಅವಳಿಗಂಟಿರುವ ರೋಗ ಅಡ್ಡಲಾಗಿದೆ. ಕುಟುಂಬದ ಇತರರ ಕಿಡ್ನಿ ಅವಳಿಗೆ ಹೊಂದಾಣಿಕೆಯಾಗುತ್ತಿಲ್ಲ ಎನ್ನಲಾಗಿದೆ. ಶೀಘ್ರ ಕಿಡ್ನಿಜೋಡಣೆ ಶಸ್ತ್ರಚಿಕಿತ್ಸೆ ಮಾಡಿಸದಿದ್ದರೆ ಅವಳು ಉಳಿಯುವುದು ತೀರಾ ಕಷ್ಟವೆನ್ನಲಾಗಿದೆ.
ಆರುವರ್ಷಗಳ ಹಿಂದೆ ಅವಳ ಎರಡು ಕಿಡ್ನಿಗಳು ವಿಫಲಗೊಂಡಿವೆ ಎಂದು ಪತ್ತೆಯಾಗಿತ್ತು. ಆನಂತರ ಮಗಳಿಗೆ ಚಿಕಿತ್ಸೆ ಕೊಡಿಸಿಅವಳ ಕುಟುಂಬ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದೆ. ವಾರದಲ್ಲಿ ಎರಡು ಬಾರಿ ಡಯಾಲಿಸಿಸ್ ಮಾಡಿಸಲು ಅವಳು ಅಹ್ಮದಾಬಾದ್‌ಗೆ ಹೋಗಬೇಕಾಗಿದೆ. ಪ್ರತಿಸಲವೂ ಏಳೆಂಟು ಸಾವಿರ ರೂಪಾಯಿ ಖರ್ಚಾಗುತ್ತಿದ್ದು, ಅವಳ ತಂದೆಗೆ ಹೆಚ್ಚು ಸಂಬಳದ ಕೆಲಸವೂಇಲ್ಲ. ಆದರೂ ಅವರು ಮಗಳ ಚಿಕಿತ್ಸೆಯನ್ನು ಭಾರೀ ಕಷ್ಟದಲ್ಲಿ ಮಾಡಿಸುತ್ತಿದ್ದಾರೆ. ಆದ್ದರಿಂದ ಖುಶಿ ತನಗೆ ನೆರವಾಗುವಂತೆ ಪ್ರಧಾನಿಯಲ್ಲಿ ನಿರೀಕ್ಷೆಯಿರಿಸಿ ಪ್ರಧಾನಿ ನರೇಂದ್ರಮೋದಿಗೆ ಸಂದೇಶ ಕಳುಹಿಸಿದ್ದಾಳೆ ಎಂದು ವರದಿ ತಿಳಿಸಿದೆ.







