ಸಾಕ್ಷ್ಯನಾಶಗೈದ ಇಬ್ಬರು ಆರೋಪಿಗಳಿಗೆ ಮತ್ತೆ 3 ದಿನಗಳ ಸಿಐಡಿ ಕಸ್ಟಡಿ
ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ

ಉಡುಪಿ, ಆ.29: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಸಾಕ್ಷ ನಾಶಪಡಿಸಿರುವ ಆರೋಪಿಗಳಾದ ಶ್ರೀನಿವಾಸ ಭಟ್ ಹಾಗೂ ರಾಘವೇಂದ್ರ ಅವರಿಗೆ ಉಡುಪಿ ನ್ಯಾಯಾಲಯ ಮತ್ತೆ ಮೂರು ದಿನಗಳ ಸಿಐಡಿ ಕಸ್ಟಡಿಯನ್ನು ವಿಸ್ತರಿಸಿದೆ.
ಆ.24ರಿಂದ ಆರು ದಿನಗಳ ಕಾಲ ಸಿಐಡಿ ಕಸ್ಟಡಿಯಲ್ಲಿದ್ದ ಶ್ರೀನಿವಾಸ ಭಟ್ ಮತ್ತು ರಾಘವೇಂದ್ರ ಅವರನ್ನು ಪ್ರಕರಣದ ತನಿಖಾಧಿಕಾರಿಯಾಗಿರುವ ಸಿಐಡಿ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಇಂದು ಬೆಳಗ್ಗೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಧೀಶರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು.
ಈ ವೇಳೆ ಆರೋಪಿಗಳ ಪರ ವಕೀಲ ವೈ.ವಿಕ್ರಂ ಹೆಗ್ಡೆ ಆರೋಪಿಗಳ ಜಾಮೀನು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರೆ, ಆರೋಪಿಗಳನ್ನು ಮತ್ತೆ ಮೂರು ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡುವಂತೆ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಪ್ರವೀಣ್ ಕುಮಾರ್ ಆರ್.ಎನ್. ಮನವಿ ಮಾಡಿದರು. ನ್ಯಾಯಾಧೀಶ ರಾಜೇಶ್ ಕರ್ಣಂ ಈ ಬಗ್ಗೆ ಪರಿಶೀಲಿಸಿ ಇದರ ವಿಚಾರಣೆಯನ್ನು ಮಧ್ಯಾಹ್ನ 3ಗಂಟೆಗೆ ಮುಂದೂಡಿದರು.
ಮಧ್ಯಾಹ್ನ ಮತ್ತೆ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಆರೋಪಿ ಪರ ವಕೀಲ ವೈ.ವಿಕ್ರಂ ಹೆಗ್ಡೆ, ಸಾಕ್ಷನಾಶಪಡಿಸಿರುವ ಆರೋಪದಲ್ಲಿ ಬಂಧಿತರಾಗಿರುವ ಇವರು ಕೊಲೆ ಪ್ರಕರಣದಲ್ಲಿ ನೇರವಾಗಿ ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಹಾಗೂ ಇವರ ವಿರುದ್ಧ ಹೂಡಿರುವ ಪ್ರಕರಣಗಳು ಜಾಮೀನು ನೀಡುವಂತಹದ್ದಾಗಿರುವುದರಿಂದ ಅವರಿಗೆ ಜಾಮೀನು ನೀಡಬೇಕೆಂದು ವಾದ ಮಂಡಿಸಿದರು.
ಇದಕ್ಕೆ ಪ್ರತಿಯಾಗಿ ವಾದಿಸಿದ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಪ್ರವೀಣ್ ಕುಮಾರ್ ಆರ್.ಎನ್., ತನಿಖೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಮತ್ತು ಆರೋಪಿಗಳು ಸಾಕ್ಷನಾಶಪಡಿಸುವ ಸಾಧ್ಯತೆ ಇರುವುದರಿಂದ ಅವರ ಜಾಮೀನು ಅರ್ಜಿ ತಿರಸ್ಕೃತಗೊಳಿಸಿ ಮತ್ತೆ ಮೂರು ದಿನಗಳ ಸಿಐಡಿ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡಿದರು. ಇಬ್ಬರ ವಾದವನ್ನು ಆಲಿಸಿದ ನ್ಯಾಯಾಧೀಶ ರಾಜೇಶ್ ಕರ್ಣಂ, ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕೃತಗೊಳಿಸಿ, ಅವರನ್ನು ಆ.31ರ ಸಂಜೆ ಐದು ಗಂಟೆಯ ವರೆಗೆ ಮತ್ತೆ ಸಿಐಡಿ ಪೊಲೀಸರ ಕಸ್ಟಡಿಗೆ ನೀಡಿ ಆದೇಶಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಪಿಗಳ ಪರ ವಕೀಲ ವೈ.ವಿಕ್ರಂ ಹೆಗ್ಡೆ, ಈ ನ್ಯಾಯಾಲಯದಲ್ಲಿ ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದು, ಮುಂದೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಮತ್ತೆ ಆಗಮಿಸಿದ ಸಿಐಡಿ ಅಧಿಕಾರಿಗಳು
ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಒಂದು ಹಂತದ ತನಿಖೆ ಮುಗಿಸಿ ಬೆಂಗಳೂರಿಗೆ ತೆರಳಿದ ಸಿಐಡಿ ಪೊಲೀಸ್ ಮಹಾನಿರ್ದೇಶಕ ಕಿಶೋರ್ ಚಂದ್ರ, ಎಡಿಜಿಪಿ ಪ್ರತಾಪ್ ರೆಡ್ಡಿ, ಡಿಐಜಿ ಸೋನಿಯಾ ನಾರಂಗ್ ಮತ್ತೆ ಉಡುಪಿಗೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಮಹತ್ತರ ಸಾಕ್ಷಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಹಾಗೂ ತನಿಖೆಯನ್ನು ಚುರುಕುಗೊಳಿಸುವುದ ಕ್ಕಾಗಿ ಹಿರಿಯ ಅಧಿಕಾರಿಗಳು ಮತ್ತೆ ಉಡುಪಿಗೆ ಬಂದಿದ್ದಾರೆ. ಇದೀಗ ಪೊಲೀಸ್ ವಶದಲ್ಲಿರುವ ಸಾಕ್ಷನಾಶ ಆರೋಪಿಗಳಾದ ಶ್ರೀನಿವಾಸ ಭಟ್ ಹಾಗೂ ರಾಘವೇಂದ್ರ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಿರುವರು ಎಂದು ತಿಳಿದುಬಂದಿದೆ.







