ಸೌದಿ ಅರೇಬಿಯ: 1ವರ್ಷದಿಂದ ಸಂಬಳವಿಲ್ಲ, 200 ಭಾರತೀಯ ಉದ್ಯೋಗಿಗಳು ಸಂಕಷ್ಟದಲ್ಲಿ!

ದಮ್ಮಾಮ್,ಆ.29: ಸಂಬಳವಿಲ್ಲದೆ ಸುಮಾರು ಒಂದುವರ್ಷದಿಂದ ಭಾರತದ ಇನ್ನೂರು ಮಂದಿ ಉದ್ಯೋಗಿಗಳು ಊಟಕ್ಕೂ ಗತಿಯಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆಂದು ವರದಿಯಾಗಿದೆ. ಸೌದಿಅರೇಬಿಯದ ಅಬ್‌ಖೈಖ್‌ನಲ್ಲಿ ಕಾನೂನಿನ ಕುಣಿಕೆಯಲ್ಲಿ ಸಿಲುಕಿ ಖಾಸಗಿ ಸಂಸ್ಥೆಯೊಂದರಲ್ಲಿ ದುಡಿಯುತ್ತಿರುವ ಭಾರತೀಯ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ.
ಕೆಲವರು ನೀಡುತ್ತಿರುವ ನೆರವಿನಿಂದಾಗಿಅವರ ದೈನಂದಿನ ಖರ್ಚು ಸಾಗುತ್ತಿದೆ. ಎರಡು ವರ್ಷಗಳಿಂದ ಕಂಪೆನಿ ಮಾಲಕರ ಮಕ್ಕಳಲ್ಲಿ ಉಂಟಾದ ಜಗಳ ಕಂಪೆನಿಯನ್ನು ಕಾನೂನಿನ ಕುಣಿಕೆಯಲ್ಲಿ ಸಿಲುಕಿಸಿತ್ತು. ಆ ನಂತರ ಕಂಪೆನಿಯ ಕೆಲಸದಲ್ಲಿ ಏರುಪೇರು ಸಂಭವಿಸಿತ್ತು. ಈನಡುವೆ ಇತರ ಕಂಪೆನಿಗಳು ಈ ಕಂಪೆನಿಯಿಂದ ದೊರೆಯಬೇಕಾದ ಹಣಕ್ಕಾಗಿ ಕೇಸು ದಾಖಲಿಸಿದ್ದರಿಂದಾಗಿ ಕಂಪೆನಿಯ ಎಲ್ಲ ಹಣಕಾಸು ವ್ಯವಹಾರಗಳನ್ನುಕೋರ್ಟ್ ಸ್ಥಗಿತ ಗೊಳಿಸಿತು. ಹೀಗೆ ಕಾರ್ಮಿಕರಿಗೆ ಸಿಗುತ್ತಿದ್ದ ಸಂಬಳವೂ ಸ್ಥಗಿತಗೊಂಡಿತ್ತು. ಕಾನೂನಿನ ಕುಣಿಕೆಯಿಂದ ಪಾರಾಗಲು ಕಂಪೆನಿಯ ಮಾಲಕ ಇನ್ನೊಂದು ಕಂಪೆನಿ ತೆರೆದು ಅಲ್ಲಿಗೆ ಕೆಲವು ಕಾರ್ಮಿಕರನ್ನು ಅಲ್ಲಿಗೆ ಸ್ಥಳಾಂತರಿಸಿದರೂ ಕೋರ್ಟ್ ನಿಷೇಧದಿಂದ ಪಾರಾಗಲು ಸಾಧ್ಯವಾಗಲಿಲ್ಲ. ಈಗ ಕಾರ್ಮಿಕರಲ್ಲಿ ಬಹಳಷ್ಟು ಮಂದಿಯ ಇಕಾಮ ಮತ್ತು ಇನ್ಶೂರೆನ್ಸ್ ಅವಧಿ ಕೊನೆಗೊಳ್ಳುವ ಹಂತದಲ್ಲಿವೆ. ಸೌಲಭ್ಯಗಳು ಮತ್ತು ಸಂಬಳ ಸಿಕ್ಕಿದರೆ ಕೆಲವರು ಊರಿಗೆ ಹೋಗಲು ಸಿದ್ಧರಾಗಿ ನಿಂತಿದ್ದಾರೆ. ಆದರೆ ಕಂಪೆನಿಯ ಅಧಿಕಾರಿಗಳು ಅದಕ್ಕೆ ಸಿದ್ಧರಿಲ್ಲ. ಭಾರತೀಯ ರಾಯಭಾರಿ ಕಚೇರಿಗೆ ದೂರು ನೀಡಿದ್ದರೂ ಅದು ಈ ವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ನೊಂದ ಕಾರ್ಮಿಕರು ದೂರಿದ್ದಾರೆ. ಜೊತೆಗೆ ಕಾರ್ಮಿಕರು ಬೇರೆ ಕಂಪೆನಿಗಳಿಗೆ ಉದ್ಯೋಗ ಬದಲಾಯಿಸಿಕೊಳ್ಳವುದು ಕೂಡಾ ಅಷ್ಟು ಸುಲಭವಿಲ್ಲ ಎಂದು ವರದಿಯಾಗಿದೆ.





