ಪಾಕ್ ಜನ ಒಳ್ಳೆಯವರು ಎಂದರೆ ತಪ್ಪೇ: ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಹುಬ್ಬಳ್ಳಿ, ಆ.29: ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್‌ರನ್ನು ಪ್ರಧಾನಿ ಮೋದಿ ಭೇಟಿಯಾದರೆ ತಪ್ಪಿಲ್ಲ. ಆದರೆ ನಟಿ ರಮ್ಯಾ ಪಾಕ್ ಜನ ಒಳ್ಳೆಯವರು ಎಂದು ಹೇಳಿದರೆ ತಪ್ಪಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಕೊಪ್ಪಳದ ಗಣಿಗೇರಾಗೆ ತೆರಳುವ ಮುನ್ನ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಮ್ಯಾ ಪಾಕ್ ಜನರ ಕುರಿತು ಮಾತನಾಡಿರುವುದರಲ್ಲಿ ತಪ್ಪಿಲ್ಲ. ಇದರಲ್ಲಿ ನಟಿ ರಮ್ಯಾ ಏನೂ ತಪ್ಪು ಮಾಡಿಲ್ಲ, ಆದರೆ ಬಿಜೆಪಿ, ಆರೆಸೆಸ್ ರಮ್ಯಾ ವಿರುದ್ಧ ಎಬಿವಿಪಿಯನ್ನು ಎತ್ತಿ ಕಟ್ಟುತ್ತಿವೆ ಎಂದು ಗಂಭಿರವಾಗಿ ಆರೋಪಿಸಿದ್ದಾರೆ.
ಪಾಕ್ ಪ್ರಧಾನಿ ಶರೀಫ್ ಮತ್ತು ಮೋದಿ ನೆಂಟರೇ ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಈ ಹಿಂದೆ ಅಡ್ವಾಣಿಯವರು ಕೂಡ ಜಿನ್ನಾ ಅವರನ್ನು ಸೆಕ್ಯುಲರ್‌ಎಂದು ಕರೆದಿದ್ದರು, ಆಗ ಬಿಜೆಪಿ, ಸಂಘ ಪರಿವಾರದವರು ತಕರಾರು ತೆಗೆಯಲಿಲ್ಲ. ಆದರೆ ಈಗ ರಮ್ಯಾ ಹೇಳಿಕೆಯ ವಿರುದ್ಧ ಬೀದಿಗಿಳಿದು ಪ್ರತಿಭಟಿಸುವುದು ಎಷ್ಟರ ಮಟ್ಟಿಗೆ ಸರಿ ಎಂದರು.
ದೇಶದ್ರೋಹದ ದಾಖಲೆಗಳಿಲ್ಲ: ಆಮ್ನೆಸ್ಟಿ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶದ್ರೋಹದ ಘೋಷಣೆಗಳು ಕೂಗಲಾಗಿದೆ ಎಂಬ ಆರೋಪಕ್ಕೆ ಯಾವುದೇ ದಾಖಲೆಗಳು ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಲಬುರ್ಗಿ ಹೆಸರಿನಲ್ಲಿ ಸಂಶೋಧನಾ ಕೇಂದ್ರ: ನೇರ ನಡೆ ನುಡಿಯ ಸಂಶೋಧಕ ಎಂ.ಎಂ. ಕಲಬುರ್ಗಿಯವರ ಹೆಸರಿನಲ್ಲಿ ಶೀಘ್ರ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸಂಶೋದಕ ಎಂ.ಎಂ. ಕಲಬುರ್ಗಿಯವರ ಹತ್ಯೆ ಪ್ರಕರಣದ ತನಿಖೆ ಚುರುಕಿನಿಂದ ನಡೆದಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು. ಕಲಬುರ್ಗಿಯವರನ್ನು ಹತ್ಯೆಗೈದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಾಳೆ ಧಾರವಾಡದಲ್ಲಿ ಸಾಹಿತಿಗಳು ನಡೆಸುತ್ತಿರುವ ಪ್ರತಿಭಟನೆ ಸ್ವಾಗತಾರ್ಹ ಎಂದರು.
ಈ ವೇಳೆ ಸಚಿವ ವಿನಯ ಕುಲಕರ್ಣಿ, ಶಾಸಕರಾದ ಪ್ರಸಾದ್ ಅಬ್ಬಯ್ಯ, ಸಿ.ಎಸ್. ಶಿವಳ್ಳಿ ಉಪಸ್ಥಿತರಿದ್ದರು
ಈಶ್ವರಪ್ಪಗೆ ಸಿಎಂ ಸವಾಲು
ಬಿಜೆಪಿಯ ಈಶ್ವರಪ್ಪ ಹಾಗೂ ಯಡಿಯೂರಪ್ಪಅವರಿಗೆ ಹಿಂದುಳಿದ ವರ್ಗಗಳ ಕುರಿತು ಕಿಂಚಿತ್ತೂ ಕಾಳಜಿಯಿಲ್ಲ. ಯಡಿಯೂರಪ್ಪನವರ ಕಾಲೆಳೆವ ಉದ್ದೇಶದಿಂದಲೇ ಈಶ್ವರಪ್ಪಹಿಂದ ಸಮಾವೇಶ ಮಾಡುತ್ತಿದ್ದಾರೆ. ಈಶ್ವರಪ್ಪನವರಿಗೆ ಧೈರ್ಯವಿದ್ದರೆ ತಾವೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.







