ಕಲಾಪದ ‘ಸಮಯ ವ್ಯರ್ಥ’ಕ್ಕೆ ಇನ್ನು ಅವಕಾಶವಿಲ್ಲ: ಸ್ಪೀಕರ್ ಕೋಳಿವಾಡ
ವಿಧಾನ ಮಂಡಲ ನಿಯಮಾವಳಿಗೆ ತಿದ್ದುಪಡಿಗೆ ತೀರ್ಮಾನ

ಬೆಂಗಳೂರು, ಆ. 29: ನವೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನಕ್ಕ್ಕೂ ಮೊದಲು ಉಭಯ ಸದನಗಳ ನಿಯಮಾವಳಿಗಳಿಗೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ ಎಂದು ಸ್ಪೀಕರ್ ಕೆ.ಬಿ. ಕೋಳಿವಾಡ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ವಿಧಾನ ಮಂಡಲ ಕಾರ್ಯಕಲಾಪಗಳ ನಿಯಮಾವಳಿ ತಿದ್ದುಪಡಿ ಸಂಬಂಧದ ಜಂಟಿ ಸದನ ಸಮಿತಿಯ ಪ್ರಥಮ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರತಿನಿತ್ಯ ಕನಿಷ್ಠ ನಾಲ್ಕು ಗಂಟೆಗಳ ಕಾಲ ಕಡ್ಡಾಯವಾಗಿ ಸದನದ ಕಾರ್ಯ ಕಲಾಪಗಳು ನಡೆಯಬೇಕೆಂದು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ವರ್ಷಕ್ಕೆ ಕನಿಷ್ಠ 60 ದಿನಗಳ ಕಾಲ ವಿಧಾನ ಮಂಡಲ ಅಧಿವೇಶನ ನಡೆಸಬೇಕು. ಧರಣಿ, ಪ್ರತಿಭಟನೆ ನೆಪದಲ್ಲಿ ಕಲಾಪದ ಸಮಯ ವ್ಯರ್ಥ ಆಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿನಿತ್ಯ ಕನಿಷ್ಠ ನಾಲ್ಕು ಗಂಟೆ ಕಲಾಪ ನಡೆಸಲೇಬೇಕು. ಈ ಸಂಬಂಧ ನಿಯಮಾವಳಿಗೆ ತಿದ್ದುಪಡಿ ತರಲಾಗುವುದು ಎಂದು ಕೋಳಿವಾಡ ಹೇಳಿದರು.
ಉಪ ಸಮಿತಿ ರಚನೆ: ವಿಧಾನ ಮಂಡಲ ನಿಯಮಾವಳಿಗಳ ತಿದ್ದುಪಡಿ ಸಂಬಂಧ ಮೇಲ್ಮನೆ ಸದಸ್ಯ ರಾಮಚಂದ್ರೇಗೌಡ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸಲಾಗಿದೆ ಎಂದ ಅವರು, ಈ ಸಮಿತಿ ಪ್ರತಿನಿತ್ಯ ಸಭೆ ಸೇರಿ ಸಮಾಲೋಚನೆ ನಡೆಸಿ ಮೂರು ವಾರದೊಳಗೆ ಜಂಟಿ ಸದನ ಸಮಿತಿಗೆ ವರದಿ ನೀಡಲಿದೆ ಎಂದು ಮಾಹಿತಿ ನೀಡಿದರು.
ಉಪ ಸಮಿತಿಯಲ್ಲಿ ವೈಎಸ್‌ವಿ ದತ್ತ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಸುರೇಶ್ ಕುಮಾರ್, ಮೇಲ್ಮನೆ ಮುಖ್ಯ ಸಚೇತಕ ಐವಾನ್ ಡಿಸೋಜಾ, ಕೆ.ಎಂ.ರಾಜಣ್ಣ, ಗಣೇಶ್ ಕಾರ್ಣಿಕ್ ಸೇರಿದಂತೆ ಏಳು ಮಂದಿ ಇದ್ದಾರೆ ಎಂದು ಸ್ಪೀಕರ್ ಕೋಳಿವಾಡ ವಿವರ ನೀಡಿದರು.
ಉಪ ಸಮಿತಿ ವರದಿ ನೀಡಿದ ನಂತರ ಈ ಸಂಬಂಧ ಅಧ್ಯಯನ ನಡೆಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಈ ನಿರ್ಣಯವನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ ಸದನಗಳ ಒಪ್ಪಿಗೆ ಪಡೆಯಲಾಗುವುದು. ಆ ಬಳಿಕ ಹೊಸ ನಿಯಮಾವಳಿಗಳ ಅನ್ವಯ ಅಧಿವೇಶನ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಧಾನ ಮಂಡಲ ನಿಯಮಾವಳಿಗಳ ತಿದ್ದುಪಡಿ ಸಂಬಂಧ ವಿಧಾನಸಭೆ, ಮೇಲ್ಮನೆ ಎಲ್ಲ ಸದಸ್ಯರು, ಮಾಜಿ ಸ್ಪೀಕರ್, ಸಭಾಪತಿಗಳಿಗೆ ಹಾಗೂ ಹಿರಿಯ ಸಂಸದೀಯ ಪಟುಗಳಿಗೆ ಪತ್ರ ಬರೆದು ಈ ಸಂಬಂಧ ಅಭಿಪ್ರಾಯ ಸಂಗ್ರಹಿಸಲು ಉದ್ದೇಶಿಸಲಾಗಿದೆ ಎಂದು ಕೋಳಿವಾಡ ತಿಳಿಸಿದರು.
ಮಧ್ಯಾಹ್ನಕ್ಕೆ ನಿಲುವಳಿ: ವಿಧಾನ ಮಂಡಲದಲ್ಲಿ ನಿಗದಿಯಂತೆ ಬೆಳಗ್ಗೆ ಪ್ರಶ್ನೋತ್ತರ ಕಲಾಪ, ಶೂನ್ಯವೇಳೆ ನಡೆಯಲಿದ್ದು, ಮಧ್ಯಾಹ್ನದಲ್ಲಿ ನಿಲುವಳಿ ಸೂಚನೆ, ಸಾರ್ವಜನಿಕ ಮಹತ್ವದ ವಿಷಯಗಳ ಪ್ರಸ್ತಾಪಕ್ಕೆ ಅವಕಾಶ ಕಲ್ಪಿಸಲು ಉದ್ದೇಶಿಸಿದ್ದು, ಸುಗಮ ಕಲಾಪ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
‘ನೈಸ್’ ಅಕ್ರಮ, ವಿದ್ಯುತ್ ಖರೀದಿ ಹಗರಣ, ಕೆರೆ ಒತ್ತುವರಿ ತೆರವು ಸದನ ಸಮಿತಿಗಳು ಹಲವು ಸುತ್ತಿನ ಸಭೆಗಳನ್ನು ನಡೆಸುತ್ತಿದ್ದು, ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲೆ ಸದನಕ್ಕೆ ವರದಿ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಕೋಳಿವಾಡ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು. ಸುದ್ದಿಗೋಷ್ಟಿಯಲ್ಲಿ ಮೇಲ್ಮನೆ ಸರಕಾರಿ ಮುಖ್ಯ ಸಚೇತಕ ಐವಾನ್ ಡಿಸೋಜಾ, ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಹಾಜರಿದ್ದರು.





