ರಾಜ್ಯವನ್ನು ಬೆಂಗಾಲ್-ಬಾಂಗ್ಲಾ ಎಂದು ಕರೆಯಿರಿ: ಮಮತಾ ಬ್ಯಾನರ್ಜಿ

ಕೋಲ್ಕತಾ, ಆ.29: ರಾಜ್ಯದ ಪ್ರಸ್ತಾವವನ್ನು ಕೇಂದ್ರ ಸರಕಾರ ಅಂಗೀಕರಿಸಿದರೆ, ಪಶ್ಚಿಮಬಂಗಾಳವು ಇಂಗ್ಲಿಷ್‌ನಲ್ಲಿ ‘ಬೆಂಗಾಲ್’, ಬಂಗಾಳಿಯಲ್ಲಿ ‘ಬಾಂಗ್ಲಾ’ ಹಾಗೂ ಹಿಂದಿಯಲ್ಲಿ ‘ಬಂಗಾಲ್’ ಆಗಲಿದೆ. ಈ ಮರು ನಾಮಕರಣವನ್ನು ರಾಜ್ಯದ ವಿಧಾನಸಭೆ ಬೆಂಬಲಿಸಿದೆ. ಆದರೆ, ವಿಪಕ್ಷಗಳಾದ ಎಡಪಕ್ಷಗಳು, ಕಾಂಗ್ರೆಸ್ ಹಾಗೂ ಬಿಜೆಪಿ ಇದನ್ನು ಪ್ರತಿಭಟಿಸಿ ಸಭಾತ್ಯಾಗ ಮಾಡಿವೆ.
ಇದನ್ನು ವಿರೋಧಿಸುವವರನ್ನು ಚರಿತ್ರೆ ಕ್ಷಮಿಸದು. ಇದೊಂದು ಚಾರಿತ್ರಿಕ ದಿನವಾಗಿದ್ದು, ಸ್ವರ್ಣಾಕ್ಷರಗಳಲ್ಲಿ ಬರೆದಿಡುವಂತಹದಾಗಿದೆಯೆಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪತ್ರಕರ್ತರಿಗೆ ತಿಳಿಸಿದರು.
ಮುಖ್ಯಮಂತ್ರಿಯ ಭಾಷಣದ ವೇಳೆ ವಾಕ್ಸಮರವೊಂದು ನಡೆದ ಬಳಿಕ ವಿಪಕ್ಷಗಳು ಸಭಾತ್ಯಾಗ ಮಾಡಿದವು.
ಎಡ ಪಕ್ಷಗಳೂ ಹೆಸರನ್ನು ಬದಲಿಸುವುದಕ್ಕೆ ಪ್ರಯತ್ನಿಸಿದ್ದವು. ಆದರೆ, ಅವು ವಿಫಲವಾದವು. ಅವೀಗ ಹೆಸರು ಬದಲಾವಣೆಯನ್ನು ವಿರೋಧಿಸುತ್ತಿವೆಯೆಂದು ಮಮತಾ ಟೀಕಿಸಿದರು.
ಈ ಹೆಸರು ಬದಲಾವಣೆಯೊಂದಿಗೆ ಪಶ್ಚಿಮಬಂಗಾಳವು ರಾಷ್ಟ್ರೀಯ ಸಭೆಗಳ ಸರತಿಯ ಸಾಲಿನಲ್ಲಿ ಮುಂದಕ್ಕೆ ನೆಗೆಯಲಿದೆ. ಪಶ್ಚಿಮ ಬಂಗಾಳವು 29 ರಾಜ್ಯಗಳ ಪಟ್ಟಿಯಲ್ಲಿ(ಹೆಸರಿನ ಮೊದಲಕ್ಷರದನುಸಾರ) ಕೊನೆಯಲ್ಲಿ ಬರುವುದರಿಂದ ತನಗೆ ಇಂತಹ ಸಭೆಗಳಲ್ಲಿ ಮಾತನಾಡಲು ವಿರಳ ಅವಕಾಶ ಸಿಗುತ್ತಿದೆಯೆಂದು ಮಮತಾ ಆಗಾಗ ದೂರುತ್ತಿದ್ದರು.
ರಾಜ್ಯಕ್ಕೆ ಬಂಗಾಳಿ ಹೆಸರನ್ನು ಇರಿಸುವ ಕುರಿತು, ಬಂಗ(ಬೊಂಗೊ ಎಂದು ಉಚ್ಚಾರ) ಹಾಗೂ ಬಾಂಗ್ಲಾ ಎಂಬ ಹೆಸರುಗಳ ನಡುವೆ ಸರಕಾರ ವಿಭಜನೆಗೊಂಡಿತ್ತು. ಅಲ್ಲಿ ಬ್ರಾಂಡ್ ಇಲ್ಲದ ಸ್ಥಳೀಯ ಸಾರಾಯಿಗೆ ಬಾಂಗ್ಲಾ ಎನ್ನುತ್ತಾರೆ.
ಕೈಗಳ ಎಣಿಕೆಯಲ್ಲಿ ‘ಬಾಂಗ್ಲಾ’ ಜಯಗಳಿಸಿದೆಯೆಂದು ಮಮತಾ ಘೋಷಿಸಿದರು.







