ಪೌರಕಾರ್ಮಿಕರ ನಿವೇಶನ ವಿವಾದ ಇತ್ಯರ್ಥಕ್ಕೆ ಮನವಿ

ಚಿಕ್ಕಮಗಳೂರು, ಆ.29: ಪೌರಕಾರ್ಮಿಕರಿಗೆ ಹಂಚಿಕೆಯಾಗಿರುವ ನಿವೇಶನದ ವಿವಾದ ಬಗೆಹರಿಸುವಂತೆ ಕೋರಿ ಪೌರಸೇವಾ ನೌಕರರ ಸಂಘದಿಂದ ತಹಶೀಲ್ದಾರ್ ಶಿವಣ್ಣರವರಿಗೆ ಮನವಿ ಸಲ್ಲಿಸಿತು.
ಇಂದು ಸಂಘದ ಅಧ್ಯಕ್ಷ ಬಿ.ಅಣ್ಣಯ್ಯ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಗೆ ತೆರಳಿ ಪದಾಧಿಕಾರಿಗಳು ಹಾಗೂ ನೌಕರರು, ಪೌರಕಾರ್ಮಿಕರ ಸಮಸ್ಯೆ ಇತ್ಯರ್ಥಪಡಿಸುವಂತೆ ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಬಿ.ಅಣ್ಣಯ್ಯ ಮಾತನಾಡಿ, ಕಳೆದ ಹಲವು ದಶಕಗಳಿಂದ ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವವರು ಯಾವುದೇ ಸ್ವಂತ ಸೂರಿಲ್ಲದೆ ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಸಂಬಂಧ ಉಪ್ಪಳ್ಳಿ ಗ್ರಾಮದಲ್ಲಿ ಜಮೀನನನ್ನು ನಗರಸಭೆಯಿಂದ 95 ಮಂದಿ ಪೌರಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡಲಾಗಿತ್ತು. ಆದರೆ ಖಾಸಗಿ ವ್ಯಕ್ತಿಯೋರ್ವರು ಹೈಕೋರ್ಟ್‌ನಲ್ಲಿ ದಾವೆ ಹಾಕಿದ ಪರಿಣಾಮ ವಿವಾದ ಸೃಷ್ಟಿಸಿದ್ದು ದಾವೆಯನ್ನು ಕೋರ್ಟ್ ವಜಾ ಮಾಡಿ ಎಸಿ ಕೋರ್ಟ್‌ಗೆ ವರ್ಗಾಯಿಸಿದೆ.
ಆದ ಕಾರಣ ಈ ಪ್ರಕರಣದ ಕಡತವನ್ನು ಪಡೆಯಲಾಗಿರುವ ಕುರಿತು ಹಾಗೂ ಈ ಬಗ್ಗೆ ಕೈಗೊಂಡ ಕ್ರಮದ ಮಾಹಿತಿ ನೀಡುವಂತೆ ಮನವಿ ಮಾಡಿದ ಅವರು ಅರ್ಜಿಯನ್ನು ಪರಿಶೀಲಿಸಿ ಶೀಘ್ರದಲ್ಲಿ ಕ್ರಮ ಕೈಗೊಳ್ಳುವ ಜೊತೆ ಪೌರಕಾರ್ಮಿಕರಿಗೆ ಮಂಜೂರಾತಿ ನೀಡಿ ಆದೇಶಿಸಿದರೆ ಬಡವರಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.





