ಹಿರಿಯರ ಮಾರ್ಗದರ್ಶನದಲ್ಲಿ ಸನ್ಮಾರ್ಗ ಸಾಧ್ಯ: ಸುಧೀಂದ್ರ
ತಾಲೂಕು ಮಟ್ಟದ ಹಿರಿಯ ನಾಗರಿಕರ ಕ್ರೀಡಾಕೂಟ
.jpg)
ಸಾಗರ, ಆ.29: ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರನ್ನು ಗೌರವಿಸುವುದು ಒಂದು ಸತ್ಸಂಪ್ರದಾಯ. ಇದನ್ನು ಕಿರಿಯರು ಯಾವತ್ತೂ ಮರೆಯಬಾರದು ಎಂದು ಅಂಭ್ರಿಣಿ ಸೌಹಾರ್ದ ಸಹಕಾರಿ ಸಂಸ್ಥೆಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್.ಸುಧೀಂದ್ರ ಹೇಳಿದರು. ಇಲ್ಲಿನ ನೆಹರೂ ಮೈದಾನದಲ್ಲಿ ಸೋಮವಾರ ತಾಲೂಕು ನಿವೃತ್ತ ನೌಕರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಹಿರಿಯ ನಾಗರಿಕರ ಕ್ರೀಡಾಕೂಟವನ್ನು ಗುಂಡು ಎಸೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯರ ಮಾರ್ಗದರ್ಶನ ಸಿಕ್ಕಿದಾಗ ಮಾತ್ರ ಸಮಾಜ ಸನ್ಮಾರ್ಗದಲ್ಲಿ ಸಾಗುತ್ತದೆ. ಬದಲಾದ ದಿನಮಾನಗಳಲ್ಲಿ ಹಿರಿಯರು ಮತ್ತು ಕಿರಿಯರ ನಡುವಿನ ಕಂದಕ ಜಾಸ್ತಿಯಾಗುತ್ತಿದೆ. ಇದರಿಂದ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಇವರಿಗೆ ಪ್ರಾಥಮಿಕ ಹಂತದಿಂದಲೇ ಹಿರಿಯರ ಅಗತ್ಯತೆ ಬಗ್ಗೆ ತಿಳಿ ಹೇಳುವ ಅಗತ್ಯವಿದೆ. ಕ್ರೀಡೆ ಮನುಷ್ಯನಲ್ಲಿ ಲವಲವಿಕೆಯನ್ನು ಹೆಚ್ಚಿಸುತ್ತದೆ. 60 ವರ್ಷ ಮೇಲ್ಪಟ್ಟ ಹಿರಿಯರು ಇಂತಹ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯಪೂರ್ಣ ಜೀವನ ನಡೆಸಬಹುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು ಮಾತನಾಡಿದರು. ಸಂಘದ ಗೌರವಾಧ್ಯಕ್ಷ ಎಸ್.ಬಸವರಾಜ್, ಉಪಾಧ್ಯಕ್ಷ ಎಂ.ರಾಮಪ್ಪ, ಸಿದ್ದನಾಯಕ್, ಬಿ.ಎಸ್.ನರಹರಿ, ಎಸ್.ಬಿ.ರಘುನಾಥ್‌ಮತ್ತಿತರರಿದ್ದರು.





