ಸಮಾನತೆಯ ಸಮಾಜ ನಿರ್ಮಾಣಕ್ಕೆಅಂಬೇಡ್ಕರ್ ಕೊಡುಗೆ ಅಪಾರ: ಹರೀಶ್
ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ಜನ್ಮ ದಿನಾಚರಣೆ
ಮಡಿಕೇರಿ, ಆ.29: ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತದ ತಳ ಸಮುದಾಯದ ಸ್ಫೂರ್ತಿಯ ಸೆಲೆ. ನೊಂದವರ, ದಮನಿತ ಸಮುದಾಯದ ಚೈತನ್ಯ ಶಕ್ತಿ. ಭಾರತ ಸಂವಿಧಾನದ ಮಹಾಶಿಲ್ಪಿ. ಜಗತ್ತಿನ ಸಂವಿಧಾನಗಳೆಲ್ಲವನ್ನೂ ತಳಸ್ಪರ್ಶಿಯಾಗಿ ಅಧ್ಯಯನ ಮಾಡಿ ದೇಶದಲ್ಲಿ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಅತ್ಯುತ್ತಮ ಸಂವಿಧಾನ ರಚಿಸಿಕೊಟ್ಟ ಮಹಾನ್ ಸಾಂವಿಧಾನಿಕ ತಜ್ಞ ಎಂದು ಜಿಪಂ ಅಧ್ಯಕ್ಷ ಬಿ.ಎ.ಹರೀಶ್ ಬಣ್ಣಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಭಾರತ್‌ಸ್ಕೌಟ್ಸ್ ಮತ್ತು ಗೈಡ್ಸ್, ಸಂತ ಜೋಸೆಫರ ಸಂಯುಕ್ತ ಪದವಿ ಪೂರ್ವ ಕಾಲೇಜು ಇವರ ಸಹಯೋಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ಜನ್ಮ ದಿನಾಚರಣೆ ಅಂಗವಾಗಿ ಅಂಬೇಡ್ಕರ್ ಅವರ ಜೀವನ-ಸಾಧನೆ ಕುರಿತು ನಗರದ ಸಂತ ಜೋಸೆಫರ ಕಾಲೇಜು ಸಭಾಂಗಣದಲ್ಲಿ ಸೋಮವಾರ ನಡೆದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಂಬೇಡ್ಕರ್ ಅಪಮಾನಗಳ ನಡುವೆಯೇ ಬಾಳಿ ಬದುಕಿ ಭಾರತದ ಮಹಾನ್ ಚೇತನವಾಗಿ ಬೆಳಗಿದ ಕಥೆ ಬೆರಗು ಗೊಳಿಸುವಂತಹದು. ಶಾಲಾ ಹಂತದಲ್ಲಿ ಅವಮಾನಿತರಾಗಿ ಗಾಡಿಯಿಂದ ಕೆಳಗೆ ದೂಡಿಸಿಕೊಂಡು ಅಪಮಾನ ಅನುಭವಿಸಿದ ಘಟನೆ ಹಾಗೂ ಗಾಂಧೀಜಿಯವರು ದಕ್ಷಿಣ ಆಫ್ರಿಕಾದ ದರ್ಬಾನ್‌ನಲ್ಲಿ ಬಿಳಿ ವರ್ಣೀಯರಿಂದ ರೈಲಿನಿಂದ ಕೆಳಗೆ ದೂಡಿಸಿಕೊಂಡ ಘಟನೆಗಳೆರಡೂ ಈ ಇಬ್ಬರು ಮಹಾನ್ ಚೇತನಗಳ ಬದುಕಿನಲ್ಲಿ ಮಹತ್ತರ ಘಟನೆಗಳಾಗಿವೆ ಎಂದು ಜಿಪಂ ಅಧ್ಯಕ್ಷರು ವರ್ಣಿಸಿದರು. ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಅಂಬೇಡ್ಕರ್ ಅವರು ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಮಾಡಿದ ಸಾಧನೆ ಅನನ್ಯ. ಭಾರತದ ಪ್ರತಿಯೊಬ್ಬರೂ ಸ್ವಾತಂತ್ರ್ಯ, ಸಮಾನತೆ, ಸಹಬಾಳ್ವೆಯಿಂದ ಪರಸ್ಪರ ಪ್ರಗತಿ ಹೊಂದಬೇಕೆಂಬುದೇ ಅಂಬೇಡ್ಕರ್ ಅವರ ಕಾಳಜಿಯಾಗಿತ್ತು ಎಂದರು. ಬಾಳೆಲೆಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಜೆ.ಸೋಮಣ್ಣ, ಭಾರತ್ ಸ್ಕೌಟ್ಸ್ ಮತ್ತುಗೈಡ್ಸ್ ಉಪಾಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯೂ, ಸಂತ ಜೋಸೆಫರ ಶಾಲೆಯ ಮೇಲ್ವಿಚಾರಕರಾದ ಸಿಸ್ಟರ್ ಮರಿಯಾ ಗೊರೆಟ್ಟಿ, ವಾರ್ತಾಧಿಕಾರಿ ಚಿನ್ನಸ್ವಾಮಿ ಮಾತನಾಡಿದರು.
ಅಂಬೇಡ್ಕರ್ ಅವರ ಜೀವನ ಸಾಧನೆ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕಾಲೇಜಿನ ವಿದ್ಯಾರ್ಥಿನಿಯರಾದ ಎಂ.ಬಿ.ಸಾಹಿರ(ಪ್ರಥಮ), ಲಿಬಿಯಾ ಸಂಜನಾ(ದ್ವಿತೀಯ), ಅಕ್ಷಿತಾ ಎಂ.ಕೆ.(ತೃತೀಯ) ಅವರಿಗೆ ನಗದು ಬಹುಮಾನ ನೀಡಲಾಯಿತು. ಕಲಾವಿದ ಈ.ರಾಜು ಮತ್ತು ತಂಡದವರು ಅಂಬೇಡ್ಕರ್ ಅವರ ಜೀವನ ಸಾಧನೆ ಕುರಿತು ಹಾಡು ಹಾಡಿದರು.





